ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ (ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳು) ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಳಗೊಂಡ ಎನ್ಡಿಎ ಮೈತ್ರಿಕೂಟ ಭಾರೀ ಮುನ್ನಡೆ ಸಾಧಿಸಿದೆ. ಆಡಳಿತರೂಢ ಕಾಂಗ್ರೆಸ್ ಭಾರೀ ಹಿನ್ನಡೆಯಾಗಿದೆ.
ಅಕ್ಟೋಬರ್ 23ರಂದು ನಡೆದಿದ್ದ ಮತದಾನದ ಬಳಿಕ ಅಂತಿಮ ಫಲಿತಾಂಶಕ್ಕಾಗಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿತ್ತು. ನಾಲ್ಕರ ಪೈಕಿ ಮೂರರಲ್ಲಿ ಬಿರುಸಿನ ಮತ ಎಣಿಕೆ ನಡೆದಿದ್ದು, ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ತಾಂತ್ರಿಕ ಕಾರಣದಿಂದ ಎಣಿಕೆ ತಡವಾಗಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರ: ರಂಗನಾಥ್ ಗೆಲುವು
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ (ಎನ್ಡಿಎ) ಅಭ್ಯರ್ಥಿ ಎ.ಪಿ. ರಂಗನಾಥ್ 899 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರು ಒಟ್ಟು 10,810 ಮತಗಳನ್ನು ಪಡೆದು ಗೆದ್ದು ಬೀಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಭಾರಿ ಮುಖಭಂಗ ಅನುಭವಿಸಿದ್ದು, ಸೋಲು ಕಂಡಿದ್ದಾರೆ.
ಎರಡನೇ ಸುತ್ತಿನಲ್ಲಿ ಒಟ್ಟು 7 ಸಾವಿರ ಮತಗಳ ಎಣಿಕೆ ನಡೆದಿದ್ದು, 6,363 ಮತಗಳು ಸಿಂಧು ಹಾಗೂ 637 ಮತಗಳು ಅಸಿಂಧು ಎಂದು ಪರಿಗಣಿಸಲಾಗಿತ್ತು. 2ನೇ ಸುತ್ತಿನ ಬಳಿಕ ರಂಗನಾಥ್ 3,317 ಮತಗಳನ್ನು ಪಡೆದಿದ್ದರೆ, ಪುಟ್ಟಣ್ಣ 2,956 ಮತಗಳನ್ನು ಪಡೆದಿದ್ದರು.
ಈಶಾನ್ಯ ಶಿಕ್ಷಕರ ಕ್ಷೇತ್ರ: ಶಶೀಲ್ ನಮೋಶಿ ಗೆಲುವು
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ವಿಜಯದತ್ತ ಧಾಪುಗಾಲಿಟ್ಟಿದ್ದು, ಮೊದಲ ಸುತ್ತಿನಲ್ಲಿ 7,239 ಹಾಗೂ ಎರಡನೇ ಸುತ್ತಿನಲ್ಲಿ 7,311 ಸೇರಿ ಒಟ್ಟು 14,540 ಮತಗಳನ್ನು ಪಡೆದಿದ್ದಾರೆ. ಅಧಿಕೃತ ಘೋಷಣೆ ಬಾಕಿ ಇದ್ದು, ಮತ ಎಣಿಕೆ ಕೇಂದ್ರದ ಎದುರು ಕಾರ್ಯಕರ್ತರ ವಿಜಯೋತ್ಸವ ನಡೆಯುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮತ್ತೂರ್ ಸೋಲು ಕಂಡಿದ್ದಾರೆ. ಮೊದಲ ಸುತ್ತಿನಲ್ಲಿ ಶಶೀಲ್ ನಮೋಶಿ 1,536 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು. ಮೊದಲ ಸುತ್ತಿನ 14 ಸಾವಿರ ಮತಗಳ ಎಣಿಕೆ ಪೂರ್ಣಗೊಂಡಿದ್ದು, 200ಕ್ಕೂ ಹೆಚ್ಚು ಮತಗಳು ಅಸಿಂಧು ಎಂದು ಘೋಷಣೆಯಾಗಿವೆ.
ಪಶ್ಚಿಮ ಪದವೀಧರರ ಕ್ಷೇತ್ರ: ಸಂಕನೂರ ಮುನ್ನಡೆ
ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಮತ ಎಣಿಕೆ ಕಾರ್ಯ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿದೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಒಟ್ಟು 14,001 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಸಂಕನೂರ 6,459 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ 4,394 ಮತಗಳನ್ನು ಪಡೆದುಕೊಂಡಿದ್ದಾರೆ. ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ. ಅವರು 2,065 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಸುತ್ತಿನ ಅಂತ್ಯಕ್ಕೂ ಅವರು ಮುನ್ನಡೆ ಉಳಿಸಿಕೊಂಡಿದ್ದಾರೆ.
ಆಗ್ನೇಯ ಪದವೀಧರರ ಕ್ಷೇತ್ರ: ಸುರೇಶ್ ಮುನ್ನಡೆ
ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ ಹಿನ್ನಡೆ ಅನುಭವಿಸಿದ್ದಾರೆ. ತಾಂತ್ರಿಕ ಕಾರಣದಿಂದ ಈ ಕ್ಷೇತ್ರದ ಮತ ಎಣಿಕೆ ತಡವಾಗಿದ್ದು, ಅಂತಿಮ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಕ್ಷೇತ್ರವಾರು ಫಲಿತಾಂಶದ ಪಟ್ಟಿ
| ಕ್ರ.ಸಂ. | ಕ್ಷೇತ್ರ | ಕಾಂಗ್ರೆಸ್ ಅಭ್ಯರ್ಥಿ | ಎನ್ಡಿಎ (ಬಿಜೆಪಿ/ಜೆಡಿಎಸ್) ಅಭ್ಯರ್ಥಿ |
|---|---|---|---|
| 1 | ಬೆಂಗಳೂರು ಶಿಕ್ಷಕರ ಕ್ಷೇತ್ರ | ಪುಟ್ಟಣ್ಣ – ಸೋಲು | ಎ.ಪಿ. ರಂಗನಾಥ್ – ಗೆಲುವು |
| 2 | ಪಶ್ಚಿಮ ಪದವೀಧರರ ಕ್ಷೇತ್ರ | ಮೋಹನ್ ಲಿಂಬಿಕಾಯಿ – ಹಿನ್ನಡೆ | ಎಸ್.ವಿ. ಸಂಕನೂರ – ಮುನ್ನಡೆ |
| 3 | ಈಶಾನ್ಯ ಶಿಕ್ಷಕರ ಕ್ಷೇತ್ರ | ಶರಣಪ್ಪ ಮತ್ತೂರ್ – ಹಿನ್ನಡೆ | ಶಶೀಲ್ ಜಿ. ನಮೋಶಿ – ಗೆಲುವು |
| 4 | ಆಗ್ನೇಯ ಪದವೀಧರರ ಕ್ಷೇತ್ರ | ಶಶಿ ಹುಲಿಕುಂಟೆಮಠ – ಹಿನ್ನಡೆ | ಕೆ.ಎಂ. ಸುರೇಶ್ – ಮುನ್ನಡೆ |
ಬಿಜೆಪಿ ಮೇಲುಗೈ
ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು (ಪಶ್ಚಿಮ ಪದವೀಧರ, ಈಶಾನ್ಯ ಶಿಕ್ಷಕ, ಆಗ್ನೇಯ ಪದವೀಧರ) ಈ ಹಿಂದೆ ಬಿಜೆಪಿಯ ವಶದಲ್ಲಿದ್ದವು. ಬೆಂಗಳೂರು ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ಬಳಿ ಇತ್ತು. ಈ ಚುನಾವಣೆಯು ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ನ ಜನಪ್ರಿಯತೆ ಹಾಗೂ ವಿರೋಧ ಪಕ್ಷಗಳಾದ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಹೊಂದಾಣಿಕೆಗೆ ಒಂದು ಪ್ರಮುಖ ಪರೀಕ್ಷೆಯಾಗಿದೆ. ಚುನಾವಣಾ ಆಯೋಗವು ಮತ ಎಣಿಕೆ ಮುಗಿದ ತಕ್ಷಣವೇ ಅಧಿಕೃತವಾಗಿ ವಿಜೇತರನ್ನು ಘೋಷಿಸಲಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಭಾರೀ ಮೇಲುಗೈ ಸಾಧಿಸಿದ್ದು, ಕಾಂಗ್ರೆಸ್ಗೆ ಭಾರೀ ಹಿನ್ನಡೆಯಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎ.ಪಿ. ರಂಗನಾಥ್ ಗೆಲುವು ಸಾಧಿಸಿದ್ದರೆ, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶೀಲ್ ನಮೋಶಿ ಗೆಲುವಿನತ್ತ ಸಾಗಿದ್ದಾರೆ.





