ಬೆಂಗಳೂರು: ಹಠಾತ್ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಅವರ ಹೃದಯ ಬಡಿತ ನಿಮಿಷಕ್ಕೆ 160ರಿಂದ 170ರಷ್ಟು ಹೆಚ್ಚಾಗಿತ್ತು ಎಂದು ಚಿಕಿತ್ಸೆ ನೀಡುತ್ತಿರುವ ಹೃದ್ರೋಗ ತಜ್ಞ ಡಾ. ಶ್ರೀನಿವಾಸ್ ತಿಳಿಸಿದ್ದಾರೆ.
ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಇಂದು ಸಂಜೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಚಿಕಿತ್ಸೆ ನೀಡುತ್ತಿರುವ ಹೃದ್ರೋಗ ತಜ್ಞ ಡಾ. ಶ್ರೀನಿವಾಸ್ ಅವರು ಮಾತನಾಡಿ, “ತೀವ್ರ ಸುಸ್ತು ಹಾಗೂ ಹೃದಯ ಬಡಿತ (Heart Rate) ಏಕಾಏಕಿ ಹೆಚ್ಚಾಗಿದ್ದರಿಂದ ಸಚಿವರು ಆಸ್ಪತ್ರೆಗೆ ಬಂದಿದ್ದರು. ಸಾಮಾನ್ಯ ಸಂದರ್ಭದಲ್ಲಿ ಹೃದಯ ಬಡಿತ ನಿಮಿಷಕ್ಕೆ 70 ರಿಂದ 90 ಇರಬೇಕಾಗುತ್ತದೆ. ಆದರೆ ಸಚಿವರು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅವರ ಹೃದಯ ಬಡಿತ 160 ರಿಂದ 170 ರಷ್ಟಿತ್ತು. ಕೂಡಲೇ ಇಸಿಜಿ (ECG) ಸೇರಿದಂತೆ ಅಗತ್ಯ ವೈದ್ಯಕೀಯ ತಪಾಸಣೆಗಳನ್ನು ನಡೆಸಿ ತಕ್ಷಣದ ಚಿಕಿತ್ಸೆ ನೀಡಲಾಯಿತು” ಎಂದು ತಿಳಿಸಿದರು.
“ಸದ್ಯ ಅವರ ಇಸಿಜಿ ಮತ್ತು ಇತರ ಎಲ್ಲಾ ಆರೋಗ್ಯ ಪರೀಕ್ಷಾ ವರದಿಗಳು ನಾರ್ಮಲ್ ಬಂದಿವೆ. ಇಕೋ ವರದಿಯೂ ನಾರ್ಮಲ್ ಇದೆ. ಅವರು ಆರೋಗ್ಯವಾಗಿದ್ದು, ಆಹಾರ ಸೇವಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಚಿವರು ಅಪಾಯದಿಂದ ಪಾರಾಗಿದ್ದು, ಇಂದೇ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ಆದರೆ ಮುಂದಿನ ಎರಡು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯಕೀಯ ಸಲಹೆ ನೀಡಲಾಗಿದೆ” ಎಂದು ಡಾ. ಶ್ರೀನಿವಾಸ್ ಹೇಳಿದರು.
ಭಯಪಡುವ ಅಗತ್ಯವಿಲ್ಲ: ವೈದ್ಯರು
ವೈದೇಹಿ ಆಸ್ಪತ್ರೆಯ ಹೃದ್ರೋಗ ತಜ್ಞ ಶ್ರೀನಿವಾಸ್ ಅವರು ಮಾಹಿತಿ ನೀಡಿ, “ಪರಮೇಶ್ವರ್ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಇಸಿಜಿ ನಾರ್ಮಲ್, ಇಕೋ ನಾರ್ಮಲ್ ಆಗಿದೆ. ಪರಮೇಶ್ವರ್ ಅವರ ಹಾರ್ಟ್ಬೀಟ್ 160ರಿಂದ 180 ಇತ್ತು, ಸಾಮಾನ್ಯವಾಗಿ ಅದು 70 ರಿಂದ 80 ಇರಬೇಕು. ಹೃದಯ ಬಡಿತ ಹೆಚ್ಚಾಗಿತ್ತು, ಅದನ್ನು ನಿಯಂತ್ರಣಕ್ಕೆ ತಂದಿದ್ದೇವೆ. ಭಯಪಡುವ ಅಗತ್ಯವಿಲ್ಲ, ಯಾವುದೇ ತೊಂದರೆ ಇಲ್ಲ. ಇನ್ನು ಎರಡು ಗಂಟೆಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದರು.
ನೋವು ಕಾಣಿಸಿಕೊಂಡ ಐದೇ ನಿಮಿಷದಲ್ಲಿ ಆಸ್ಪತ್ರೆಗೆ ದಾಖಲು
ಎದೆನೋವು ಕಾಣಿಸಿಕೊಂಡ ಐದೇ ನಿಮಿಷದಲ್ಲಿ ಪರಮೇಶ್ವರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ವೇಳೆ ಹೃದಯ ಬಡಿತ ಹೆಚ್ಚಾಗಿದ್ದ ಹಿನ್ನೆಲೆ ಕೂಡಲೇ ಅವರನ್ನು ಐಸಿಯುಗೆ ದಾಖಲಿಸಿಕೊಳ್ಳಲಾಯಿತು. ಅರ್ಧಗಂಟೆಯೊಳಗೆ ಹಾರ್ಟ್ಬೀಟ್ ನಾರ್ಮಲ್ ಸ್ಥಿತಿಗೆ ಬಂದಿತು ಎಂದು ವೈದ್ಯರು ತಿಳಿಸಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಭೇಟಿ
ಪರಮೇಶ್ವರ್ ಅವರನ್ನು ಐಸಿಯುಗೆ ದಾಖಲಿಸಿದ್ದಂತೆಯೇ ಆಪ್ತರಿಂದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಮಾಹಿತಿ ನೀಡಲಾಗಿತ್ತು. ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಅವರು ವೈದ್ಯರ ಬಳಿ ಮಾಹಿತಿ ಪಡೆದುಕೊಂಡರು. ನಂತರ ಪರಮೇಶ್ವರ್ ಅವರನ್ನು ಮಾತನಾಡಿಸಿ ಆರೋಗ್ಯ ವಿಚಾರಿಸಿದರು. ಸುಮಾರು ಅರ್ಧಗಂಟೆ ಕಾಲ ಸಿಎಂ ಅವರು ಆಸ್ಪತ್ರೆಯಲ್ಲೇ ಇದ್ದರು





