ಬೆಂಗಳೂರು: ದಿಢೀರ್ ಬೆಳವಣಿಗೆಯೊಂದರಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಝೈದ್ ಖಾನ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ವಿಜಯಲಕ್ಷ್ಮೀ ಅವರು ಝೈದ್ ಖಾನ್ ಜೊತೆ ದರ್ಶನ್ ಅವರನ್ನು ಭೇಟಿ ಮಾಡಲು ಆಗಮಿಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಸಚಿವ ಜಮೀರ್ ಅವರ ಪುತ್ರರಾದ ಝೈದ್ ಖಾನ್ ಅವರು ದಿಢೀರ್ ಆಗಿ ದರ್ಶನ್ ಅವರನ್ನು ನೋಡಲು ಜೈಲಿಗೆ ಬಂದಿದ್ದಾರೆ
ವಿಜಯಲಕ್ಷ್ಮೀ ಹಾಗೂ ಧನ್ವೀರ್ ನಡುವೆ ಜಟಾಪಟಿ
ಕಳೆದ ಒಂದು ವಾರದಿಂದ ವಿಜಯಲಕ್ಷ್ಮೀ ಹಾಗೂ ಧನ್ವೀರ್ ಮಧ್ಯೆ ವಿವಾದ ಭುಗಿಲೆದ್ದಿದೆ. ಮತ್ತೊಂದು ಕಡೆ ಧನ್ವೀರ್ ಅವರು ಝೈದ್ ಖಾನ್ ವಿರುದ್ಧ ಮಾತನ್ನಾಡಿದ್ದಾರೆ ಎನ್ನಲಾಗಿರುವ ಆಡಿಯೋ ಒಂದು ವೈರಲ್ ಆಗಿ ಸಂಚಲನ ಮೂಡಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ವಿಜಯಲಕ್ಷ್ಮೀ ಹಾಗೂ ಝೈದ್ ಖಾನ್ ಒಟ್ಟಿಗೆ ದರ್ಶನ್ ಅವರನ್ನು ನೋಡಲು ಜೈಲಿಗೆ ಆಗಮಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಧನ್ವೀರ್ ವೈರಲ್ ಆಡಿಯೋದಲ್ಲಿ ಏನಿದೆ?
ಧನ್ವೀರ್ ಅವರು ಮಾತನ್ನಾಡಿದ್ದು ಎನ್ನಲಾಗುತ್ತಿರುವ ಆಡಿಯೋದಲ್ಲಿ ಝೈದ್ ಖಾನ್ ವಿರುದ್ಧ ಅವಹೇಳನಕಾರಿಯಾಗಿ ಮಾತನ್ನಾಡಲಾಗಿದೆ. ಏಕವಚನದಲ್ಲೇ ಮಾತನ್ನಾಡಿರುವ ಆಡಿಯೋದಲ್ಲಿ “ಝೈದ್ ಖಾನ್ ನನ್ನ ಕಾಲಿನ ಧೂಳಿಗೂ ಸಮನಲ್ಲ” ಎಂದು ವಾಗ್ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಈ ಸಂಬಂಧ ಝೈದ್ ಖಾನ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಧನ್ವೀರ್ ವಿರುದ್ಧ ದೂರು ನೀಡಿದ್ದಾರೆ. “ನನ್ನ ಬಗ್ಗೆ ಕೀಳು ಮಟ್ಟದ ಹೇಳಿಕೆಯನ್ನು ಧನ್ವೀರ್ ನೀಡಿದ್ದಾರೆ. ಅವರ ವಿರುದ್ಧ ನೀವು ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿ ದೂರು ನೀಡಿದ್ದಾರೆ.
ದೂರು–ಪ್ರತಿದೂರು
ಒಂದು ಕಾಲದಲ್ಲಿ ದರ್ಶನ್ ಹಾಗೂ ಅವರ ಕುಟುಂಬದ ಜೊತೆ ಧನ್ವೀರ್ ಗೌಡ ಅತ್ಯಾಪ್ತರಾಗಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮೀ ನಡುವಿನ ವಿವಾದ ದಿಢೀರ್ ಮುನ್ನೆಲೆಗೆ ಬಂದಿದೆ. ವಿಜಯಲಕ್ಷ್ಮೀ ಅವರು ತಮ್ಮ ಮ್ಯಾನೇಜರ್ ಮೂಲಕ ಧನ್ವೀರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಧನ್ವೀರ್ ಅವರ ತಂದೆ ವಿಜಯಲಕ್ಷ್ಮೀ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. “ವಿಜಯಲಕ್ಷ್ಮೀ ಕಡೆಯವರು ನಮ್ಮ ಮನೆಗೆ ರೌಡಿಗಳನ್ನು ಕಳುಹಿಸಿ ಬೆದರಿಸಿದ್ದಾರೆ. ಮಗನ ಜೊತೆ ಮಾತನ್ನಾಡಬೇಕು ಎಂದು ಬೆದರಿಸಿದ್ದಾರೆ” ಎಂದು ಧನ್ವೀರ್ ತಂದೆ ಆರೋಪಿಸಿದ್ದಾರೆ. ದೂರು, ಪ್ರತಿದೂರುಗಳನ್ನು ಸ್ವೀಕರಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





