ಉಡುಪಿ, (ಜುಲೈ.16) : ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ರಾಜ್ಯ ಸರ್ಕಾರ ಮಹತ್ವದ ಬೆಂಬಲ ನೀಡಿದೆ. 2025-26ನೇ ಸಾಲಿನ ಕಂಬಳ ಉತ್ಸವಗಳಿಗೆ ₹1.15 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯಲಿರುವ 23 ಕಂಬಳ ಕೂಟಗಳಿಗೆ ತಲಾ ₹5 ಲಕ್ಷದಂತೆ ನೆರವು ನೀಡಲಾಗಿದೆ. ಈ ಹಣವನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಬಿಡುಗಡೆ ಮಾಡದ್ದಾರೆ.
ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆ ಕುರಿತು ಕೆಲ ವಲಯಗಳಿಂದ ವಿರೋಧ ವ್ಯಕ್ತವಾಗಿದ್ದರೂ, ಸರ್ಕಾರ ಕಂಬಳದ ಅಭಿವೃದ್ಧಿ ಮತ್ತು ಪ್ರೋತ್ಸಾಹಕ್ಕೆ ಆದ್ಯತೆ ನೀಡಿರುವುದು ಗಮನಾರ್ಹವಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಕಂಬಳ ಆಯೋಜಕರು ಹಾಗೂ ಕಂಬಳ ಅಭಿಮಾನಿಗಳು ಸ್ವಾಗತಿಸಿದ್ದಾರೆ.
ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಸರ್ಕಾರ ನೀಡಿದ್ದ ಭರವಸೆಯಂತೆ ಅನುದಾನ ಬಿಡುಗಡೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಅಭಿನಂದನೆ ಸಲ್ಲಿಸಿದರು. ಕಂಬಳ ಆಯೋಜನೆಗೆ ಸಾಕಷ್ಟು ವೆಚ್ಚವಾಗುತ್ತಿದ್ದು, ಈ ಅನುದಾನ ಆಯೋಜಕರಿಗೆ ನೆರವಾಗಲಿದೆ ಎಂದು ಹೇಳಿದರು.
ಕಂಬಳವು ಕೇವಲ ಕ್ರೀಡೆಯಲ್ಲ, ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಜನಜೀವನದ ಪ್ರತೀಕವಾಗಿದೆ. ಹಿಂದೆಯೂ ವಿವಿಧ ಸರ್ಕಾರಗಳು ರಾಜಕೀಯ ಭೇದವಿಲ್ಲದೆ ಕಂಬಳಕ್ಕೆ ಪ್ರೋತ್ಸಾಹ ನೀಡಿವೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಅವಧಿಯಲ್ಲಿ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಸಿದ್ದರಾಮಯ್ಯ ಅವರ ಹಿಂದಿನ ಆಡಳಿತದಲ್ಲಿಯೂ ಪ್ರವಾಸೋದ್ಯಮ ಮತ್ತು ಕ್ರೀಡಾ ಇಲಾಖೆಗಳ ಮೂಲಕ ನೆರವು ನೀಡಲಾಗಿತ್ತು ಎಂದು ಅವರು ನೆನಪಿಸಿದರು.
ಮುಂದಿನ ಬಜೆಟ್‌ನಲ್ಲಿ ಕಂಬಳಕ್ಕಾಗಿ ₹5 ಕೋಟಿ ಮೀಸಲಿಡಬೇಕು ಎಂಬ ಬೇಡಿಕೆಯನ್ನು ಕೂಡ ರಾಜ್ಯ ಕಂಬಳ ಸಮಿತಿ ಮುಂದಿಟ್ಟಿದೆ. ಉಡುಪಿ ಜಿಲ್ಲೆಯ ಜೋಡುಕರೆ ಪ್ರದೇಶದ ಸಾಂಪ್ರದಾಯಿಕ ಕಂಬಳಗಳಿಗೂ ಅನುದಾನ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಮೈಸೂರು ದಸರಾ ಕಂಬಳ ವಿವಾದ ಕುರಿತು ಪ್ರತಿಕ್ರಿಯಿಸಿದ ದೇವಿಪ್ರಸಾದ್ ಶೆಟ್ಟಿ, ಕಂಬಳವನ್ನು ರಾಜಕೀಯದ ಕಣ್ಣಿನಿಂದ ನೋಡುವುದು ಸರಿಯಲ್ಲ , ಕಂಬಳವು ಎಲ್ಲ ಸಮುದಾಯಗಳ ಮತ್ತು ಎಲ್ಲ ರಾಜಕೀಯ ಪಕ್ಷಗಳ ಜನರ ಹಬ್ಬವಾಗಿದೆ. ಮೈಸೂರಿನಲ್ಲಿ ಕಂಬಳ ಆಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವುದು ಅನಗತ್ಯ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಕರಾವಳಿಯ ಸಾಂಪ್ರದಾಯಿಕ ಕಂಬಳ ಕ್ರೀಡೆಗೆ ಮತ್ತಷ್ಟು ಉತ್ತೇಜನ ದೊರೆಯಲಿದ್ದು, ತುಳುನಾಡಿನ ಸಂಸ್ಕೃತಿಯನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಪ್ರಚಾರ ಮಾಡಲು ಸಹಕಾರಿಯಾಗಲಿದೆ.





