ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಮಠಕ್ಕೆ ಆಗಮಿಸಿದ ಪ್ರಧಾನಿಯವರನ್ನು ಮಠಾಧೀಶ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯ ಸ್ವಾಮಿ ಸೇರಿದಂತೆ ಹಲವು ಗಣ್ಯರು ಸ್ವಾಗತಿಸಿದರು.
ಪ್ರಧಾನಿ ಮೋದಿ ಅವರು ಮೊದಲು ಬಾಲಗಂಗಾಧರನಾಥ ಸ್ವಾಮೀಜಿ ಅವರ ಸ್ಮಾರಕಕ್ಕೆ ವಂದನೆ ಅರ್ಪಿಸಿ, ಶ್ರೀ ಕಾಲಭೈರವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿ, ಸ್ವಾಮೀಜಿಯವರ ಗದ್ದುಗೆಯನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ‘ಗೋರಕ್ಷನಾಥ ಸಿದ್ದ ಸಿದ್ಧಾಂತ ಪದ್ದತಿ’ ಎಂಬ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ.
ಭದ್ರತಾ ಸಿದ್ಧತೆ: ಪ್ರಧಾನಿ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಕ್ಷೇತ್ರದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. 5 ಎಸ್‌ಪಿ, 7 ಎಎಸ್‌ಪಿ, 18 ಡಿವೈಎಸ್‌ಪಿ, 55 ಇನ್‌ಸ್ಪೆಕ್ಟರ್, 120 ಪಿಎಸ್‌ಐ ಸೇರಿದಂತೆ 1500ಕ್ಕೂ ಹೆಚ್ಚು ಪೊಲೀಸ್ ಮತ್ತು ಗೃಹರಕ್ಷಕ ಸಿಬ್ಬಂದಿ ನಿಯೋಜಿಸಲಾಗಿದೆ. ಜೊತೆಗೆ 8 ಕೆಎಸ್‌ಆರ್‌ಪಿ ಮತ್ತು 9 ಡಿಆರ್ ತುಕಡಿಗಳನ್ನು ಕೂಡ ನಿಯೋಜಿಸಲಾಗಿದೆ.
ಮಠದ ಆವರಣ ಮತ್ತು ದೇವಾಲಯ ಪ್ರದೇಶಕ್ಕೆ ಸಾರ್ವಜನಿಕರಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಪ್ರಧಾನಿ ಮೋದಿ ಅವರು ತೆರಳಿದ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಭಕ್ತರು ಕಾರ್ಯಕ್ರಮಕ್ಕೆ ಕನಿಷ್ಠ 2 ಗಂಟೆ ಮುಂಚಿತವಾಗಿ ತಲುಪುವಂತೆ ಸೂಚಿಸಲಾಗಿದೆ.
ಪ್ರಧಾನಿ ಮೋದಿ ಅವರ ಈ ಭೇಟಿಯು ಆದಿಚುಂಚನಗಿರಿ ಮಠದ ಆಧ್ಯಾತ್ಮಿಕ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಭಕ್ತರು ಹೇಳುತ್ತಿದ್ದಾರೆ.




