ಮಂಡ್ಯ ಆ.27: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರ ಮನೆಯಲ್ಲಿ ಮೂಟೆಗಟ್ಟಲೆ ಹಣ ಹಾಗೂ ಚಿಲ್ಲರೆ ಕಾಸು ಪತ್ತೆಯಾಗಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಶ್ರೀರಂಗಪಟ್ಟಣದ ಪೂರ್ಣಯ್ಯ ಬೀದಿಯ ಸಾವಿತ್ರಿ ಎಂಬ ವೃದ್ಧ ಭಿಕ್ಷುಕಿಯ ಮನೆಯಲ್ಲಿ ಹಣದ ರಾಶಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.
ಸಾವಿತ್ರಿ ಹಲವು ವರ್ಷಗಳಿಂದ ಭಿಕ್ಷೆ ಬೇಡಿ ಬಂದ ಹಣವನ್ನು ಸಂಗ್ರಹಿಸಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಸುಮಾರು 10 ವರ್ಷಗಳಿಂದ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಚೀಲಗಳಲ್ಲಿ ತುಂಬಿ ಮನೆಯಲ್ಲಿ ಇಟ್ಟುಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ವೃದ್ಧೆ ಹಲವು ವರ್ಷಗಳಿಂದ ಒಂಟಿಯಾಗಿ ಮನೆಯೊಂದರಲ್ಲಿ ವಾಸವಾಗಿದ್ದರು. ಮನೆಯಲ್ಲೂ ಸರಿಯಾದ ಸ್ವಚ್ಛತೆ ಹಾಗೂ ಬೆಳಕಿನ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ. ಇಂದು ಗುರುವಾರ ಸಾವಿತ್ರಿ ಮನೆಯಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಮೂಡಿದೆ. ಬಳಿಕ ಮನೆಗೆ ತೆರಳಿ ಪರಿಶೀಲಿಸಿದಾಗ, ವೃದ್ಧೆ ಅನಾರೋಗ್ಯದಿಂದ ಬಳಲುತ್ತಿರುವುದು ಕಂಡುಬಂದಿದೆ.
ತಕ್ಷಣ ಸ್ಥಳೀಯರು ಆಕೆಗೆ ಉಪಚಾರ ನೀಡಿ ಊಟ-ತಿಂಡಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಳಿಕ ಮನೆಯ ಪರಿಸ್ಥಿತಿ ಪರಿಶೀಲಿಸಿದ ಸಂದರ್ಭದಲ್ಲಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಹಣದ ಮೂಟೆಗಳು ಮತ್ತು ಅಪಾರ ಪ್ರಮಾಣದ ಚಿಲ್ಲರೆ ನಾಣ್ಯಗಳು ಕಂಡುಬಂದಿವೆ.
ಹಣ ಪತ್ತೆಯಾಗುತ್ತಿದ್ದಂತೆ ಸ್ಥಳೀಯರು ಹಾಗೂ ಸ್ವಯಂ ಸೇವಕರು ಸೇರಿ ಹಣ ಎಣಿಕೆ ಕಾರ್ಯ ಆರಂಭಿಸಿದ್ದಾರೆ. 20ಕ್ಕೂ ಹೆಚ್ಚು ಸ್ವಯಂಸೇವಕರು ಹಣ ಎಣಿಸುವ ಕಾರ್ಯದಲ್ಲಿ ತೊಡಗಿದ್ದು, ಲಕ್ಷಾಂತರ ರೂಪಾಯಿ ಮೊತ್ತ ಸಂಗ್ರಹವಾಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಆದರೆ ಒಟ್ಟು ಎಷ್ಟು ಹಣ ಪತ್ತೆಯಾಗಿದೆ ಎಂಬ ನಿಖರ ಮೊತ್ತ ಇನ್ನಷ್ಟೇ ತಿಳಿದುಬರಬೇಕಿದೆ.
ಸಾವಿತ್ರಿ ಜೀವನಪೂರ್ತಿ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಸುರಕ್ಷಿತವಾಗಿ ಇಡಲು ಸ್ಥಳೀಯರು ಮುಂದಾಗಿದ್ದಾರೆ. ಈ ಹಣವನ್ನು ಅವರ ಹೆಸರಿನಲ್ಲೇ ಬ್ಯಾಂಕ್ ಖಾತೆಯಲ್ಲಿ ಡೆಪಾಸಿಟ್ ಮಾಡಲು ನಿರ್ಧರಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಮಂಡ್ಯ ನಗರದಲ್ಲಿಯೂ ಮೃತಪಟ್ಟಿದ್ದ ವೃದ್ಧೆಯೊಬ್ಬರ ಮನೆಯಲ್ಲಿ ಇದೇ ರೀತಿಯಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾಗಿತ್ತು. ಇದೀಗ ಶ್ರೀರಂಗಪಟ್ಟಣದಲ್ಲೂ ಭಿಕ್ಷುಕಿಯ ಮನೆಯಲ್ಲಿ ಹಣದ ರಾಶಿ ಪತ್ತೆಯಾಗಿರುವುದು ಮಂಡ್ಯ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.





