ತಮ್ಮ ಮೇಲೆ ಆಧಾರ ರಹಿತ ಹಾಗೂ ದುರುದ್ಧೇಶ ಪೂರ್ವಕವಾಗಿ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿರುವ ಪೂರ್ಣಾನಂದ ಪುರಿ ಸ್ವಾಮೀಜಿ ಆಗಿರುವ ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿಯವರು ಕಾವಿ ಕಳಚಿ ಮತ್ತೆ ಪೂರ್ವಾಶ್ರಮದ ರಾಜಕೀಯಕ್ಕೆ ವಾಪಸಾಗಲಿ. ಪವಿತ್ರ ಪೀಠದ ಮೇಲೆ ಕುಳಿತು ಬಿಜೆಪಿಯಲ್ಲಿ ರೂಢಿಯಾಗಿದ್ದೆ ಸುಳ್ಳಿನ ರಾಜಕಾರಣ ಮಾಡುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ವಾಗ್ದಾಳಿ ನಡೆಸಿದ್ದಾರೆ.
ಆಧಾರ ರಹಿತ ಸುಳ್ಳು ಆರೋಪ ಮಾಡಿರುವ ಪುಟ್ಟಸ್ವಾಮಿಯವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವರು, “ನನ್ನ 25 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ನಾನು ನಡೆದುಕೊಂಡಿದ್ದೇನೆ. ಇಂಥವರಿಂದ ನಾನು ಕಲಿಯಬೇಕಾಗಿದ್ದು ಏನೂ ಇಲ್ಲ” ಎಂದು ಕಿಡಿಕಾರಿದರು.
ಇಲ್ಲಿ ತನಕ ಗಾಣಿಗರ ಮಠಕ್ಕೆ ಒಟ್ಟು ಅತಿ 8.50 ಕೋಟಿ ಅನುದಾನವನ್ನು ಪುಟ್ಟಸ್ವಾಮಿಯವರು ಪಡೆದಿದ್ದಾರೆ. ಅತಿ ಹೆಚ್ಚು ಅನುದಾನ ಪಡೆದು, ವಿನಾಕಾರಣ ಚಪಲಕ್ಕೆ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಸ್ವಾಮೀಜಿ ದಾಖಲಾತಿಗಳನ್ನ ಇಟ್ಟು ಆರೋಪ ಮಾಡಲಿ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವುದು ಲಕ್ಷಣವಲ್ಲ ಎಂದು ಹೇಳಿದರು.
ಪುಟ್ಟಸ್ವಾಮಿ ಅವರು ಭ್ರಷ್ಟಾಚಾರದ ದಾಖಲೆಗಳನ್ನು ನೀಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಅವರು ದಾಖಲಾತಿಗಳನ್ನು ನೀಡದಿದ್ದಲ್ಲಿ ಪೀಠಾದಿಪತಿಯ ಸ್ಥಾನದಿಂದ ಕೆಳಗೆ ಇಳಿಯಲಿ ಎಂದು ಸಚಿವರು ಸವಾಲು ಹಾಕಿದ್ದಾರೆ.
ಸುಳ್ಳು ಆರೋಪ ಮಾಡುವ ಮೂಲಕ ತೇಜೋವದೆ ಮಾಡಿರುವ ಮಾಜಿ ಸಚಿವ ಹಾಗೂ ಪ್ರಸ್ತುತ ಕಾವಿ ತೊಟ್ಟು ಸ್ವಾಮೀಜಿ ಆಗಿರುವ ಪುಟ್ಟಸ್ವಾಮಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗುವುದು ಎಂದು ಸಚಿವರು ಇದೇ ವೇಳೆ ತಿಳಿಸಿದರು.





