ಜನ ನಾಯಗನ್.. ತಮಿಳು ಸೂಪರ್ ಸ್ಟಾರ್ ವಿಜಯ್ ನಟಿಸುತ್ತಿರೋ ಸಿನಿಮಾ. ಇದು ದಳಪತಿ ವಿಜಯ್ ನಟನೆಯ 69ನೇ ಸಿನಿಮಾ ಆಗಿದ್ದು, ವಿನೋದ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಅಂದಹಾಗೆ ಇದು ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಇರೋ ದಳಪತಿ ವಿಜಯ್ ರ ಕಟ್ಟ ಕಡೆಯ ಸಿನಿಮಾ ಕೂಡ ಹೌದು. ಅರೇ.. ಇದ್ಯಾಕೆ ಇದು ಕೊನೆ ಸಿನಿಮಾ ಅಂತ ಹುಬ್ಬೇರಿಸಬೇಡಿ. ಈಗಾಗ್ಲೇ ವಿಜಯ್ ಹೊಸದೊಂದು ರಾಜಕೀಯ ಪಕ್ಷ ಕಟ್ಟಿದ್ದು, ಈ ಸಿನಿಮಾ ಬಳಿಕ ರಾಜಕಾರಣದಲ್ಲೇ ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿ ಆಗಿದೆ. ಹಾಗಾಗಿ ಇದೇ ವಿಜಯ್ ರ ಕೊನೆಯ ಸಿನಿಮಾ ಅನ್ನೋದು ಅಧಿಕೃತ.
ಅಷ್ಟೇ ಅಲ್ಲ.. ಜನ ನಾಯಗನ್ ಸಿನಿಮಾದ ರಿಲೀಸ್ ಡೇಟ್ ಕೂಡ ಲಾಕ್ ಆಗಿದೆ. ಚಿತ್ರತಂಡ ಇದೇ 2026ರ ಜನವರಿ 9ರಂದು ಸಿನಿಮಾನ ತೆರೆಗೆ ತರೋಕೆ ಮುಂದಾಗಿದೆ. ಅಂದ್ರೆ ತಮಿಳುಗರಿಗೆ ಪೊಂಗಲ್ ತುಂಬಾ ವಿಶೇಷವಾದ ಹಬ್ಬವಾಗಿದ್ದು, ಅದರ ಪ್ರಯುಕ್ತ ಮಸ್ತ್ ಮನರಂಜನೆ ಕೊಡೋಕೆ ಜನ ನಾಯಗನ್ ಬರೋದು ಪಕ್ಕಾ ಆಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಜನ ನಾಯಗನ್ ಸಿನಿಮಾಗೆ ಬಂಡವಾಳ ಹೂಡಿರೋದು ನಮ್ಮ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ KVN ಪ್ರೊಡಕ್ಷನ್ಸ್. ಹೌದು.. ಕೆ ವೆಂಕಟ್ ನಾರಾಯಣ್ ಅವರು ಈಗಾಗ್ಲೇ ರಾಕಿಭಾಯ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾನ ನಿರ್ಮಾಣ ಮಾಡ್ತಿದ್ದು, ಇದೀಗ ವಿಜಯ್ ಕೊನೆಯ ಚಿತ್ರಕ್ಕೂ ಅವರೇ ಹೂಡಿಕೆ ಮಾಡಿದ್ದಾರೆ.
ಸುಮಾರು 300 ಕೋಟಿ ಬಿಗ್ ಬಜೆಟ್ ನಲ್ಲಿ ತಯಾರಾಗ್ತಿರೋ ಜನ ನಾಯಗನ್ ಸಿನಿಮಾಗೆ ಇದೀಗ ವಿಲನ್ ಕೂಡ ಫೈನಲ್ ಆಗಿದ್ದಾರೆ. ವಿಶೇಷ ಅಂದ್ರೆ ಆತ ಕೂಡ ನಮ್ಮ ಕನ್ನಡಿಗನೇ. ಈ ಹಿಂದೆ ಸಲಾರ್ ಸಿನಿಮಾದಲ್ಲಿ ಡಾರ್ಲಿಂಗ್ ಪ್ರಭಾಸ್ ಎದುರು ತೊಡೆತಟ್ಟಿ ನಿಂತಿದ್ದ ಖಡಕ್ ಖಳನಾಯಕ ವಜ್ರಾಂಗ್ ಶೆಟ್ಟಿ, ಈ ಬಾರಿ ದಳಪತಿ ವಿಜಯ್ ಎದುರು ಕಾದಾಡಲಿದ್ದಾರೆ.
ಕರಾವಳಿ ಕುವರ ವಜ್ರಾಂಗ್ ಶೆಟ್ಟಿ, ಸದ್ಯ ಟ್ರೆಂಡಿಂಗ್ ನಲ್ಲಿರೋ ಯಂಗೆಸ್ಟ್ ವಿಲನ್. ದರ್ಶನ್, ಧ್ರುವ, ಅಪ್ಪು ಹೀಗೆ ದೊಡ್ಡ ದೊಡ್ಡ ಸ್ಟಾರ್ ಗಳ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಧೈತ್ಯ ಪ್ರತಿಭೆ, ಸಲಾರ್ ಮೂಲಕ ಪಕ್ಕದ ಟಾಲಿವುಡ್ ಗೆ ಕಾಲಿಟ್ಟಿದ್ದರು. ಇದೀಗ ಕಾಲಿವುಡ್ ಸರದಿ.
ಅಂದಹಾಗೆ ಸೈಲೆಂಟ್ ಆಗಿ ಜನ ನಾಯಗನ್ ಚಿತ್ರದ ಶೂಟಿಂಗ್ ಕೂಡ ಮುಗಿಸಿ ಬಂದಿದ್ದಾರೆ ವಜ್ರಾಂಗ್ ಶೆಟ್ಟಿ ಅನ್ನೋದು ಸದ್ಯದ ಟಾಕ್. ಇನ್ನು ಜನ ನಾಯಗನ್ ವಿಲನ್ ವಜ್ರಾಂಗ್ ಶೆಟ್ಟಿ ಅನ್ನೋದನ್ನ ಕೆವಿನ್ ಪ್ರೊಡಕ್ಷನ್ಸ್ ಅಧಿಕೃತವಾಗಿ ಅನೌನ್ಸ್ ಮಾಡಲಿದೆ. ಅಫಿಶಿಯಲಿ ಅನೌನ್ಸ್ ಮಾಡೋವರೆಗೂ ಕಾಯಬೇಕಿದೆ. ಈ ಚಿತ್ರದ ಮತ್ತೊಂದು ಹೈಲೈಟ್ ಏನಪ್ಪಾಂದ್ರೆ, ಇದರಲ್ಲಿ ಸಾಲು ಸಾಲು ಕನ್ನಡದ ಕಲಾವಿದರು ಬಣ್ಣ ಹಚ್ಚಿದ್ದಾರೆ.
ವಿಜಯ್ ಜೊತೆ ನಾಯಕನಟಿಯಾಗಿ ತೆರೆ ಹಂಚಿಕೊಳ್ತಿರೋದು ಒನ್ಸ್ ಅಗೈನ್ ನಮ್ಮ ಕರಾವಳಿ ಮೂಲದ ಪೂಜಾ ಹೆಗ್ಡೆ. ಬಹುಭಾಷಾ ನಟ ಪ್ರಕಾಶ್ ರೈ ಕೂಡ ಈ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಕನ್ನಡದಿಂದ ಬಾಲಿವುಡ್ ವರೆಗೆ ಛಾಪನ್ನು ಒತ್ತಿರೋ ಫ್ಯಾಮಿಲಿ ವುಮನ್ ಪ್ರಿಯಾಮಣಿ ಜನ ನಾಯಗನ್ ಚಿತ್ರದಲ್ಲಿದ್ದಾರೆ ಅನ್ನೋದು ಇಂಟರೆಸ್ಟಿಂಗ್. ಇದೀಗ ಈ ಕನ್ನಡಿಗರ ಲಿಸ್ಟ್ ಗೆ ಯಂಗ್ ಟ್ಯಾಲೆಂಟ್ ವಜ್ರಾಂಗ್ ಶೆಟ್ಟಿ ಹೊಸ ಸೇರ್ಪಡೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್