ಬೆಂಗಳೂರು: ಕನ್ನಡ ಚಿತ್ರರಂಗದ ಮಹತ್ವಾಕಾಂಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ರವಿಚಂದ್ರನ್ ಅಭಿನಯಿಸಿ, ನಿರ್ದೇಶಿಸಿದ್ದ ‘ಶಾಂತಿ-ಕ್ರಾಂತಿ’ ಚಿತ್ರವನ್ನು ಮರು ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಇತ್ತೀಚೆಗೆ ಜೋರಾಗಿದೆ. ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಗಳಿಸದಿದ್ದರೂ, ವರ್ಷಗಳ ಬಳಿಕ ಚಿತ್ರಕ್ಕೆ ಹೊಸ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಹೀಗಾಗಿ ‘ಶಾಂತಿ-ಕ್ರಾಂತಿ’ಯನ್ನು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ನೋಡಬೇಕು ಎಂಬ ಒತ್ತಾಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.
ಈ ಬಗ್ಗೆ ಸ್ವತಃ ರವಿಚಂದ್ರನ್ ಪ್ರತಿಕ್ರಿಯಿಸಿದ್ದು, ಸಿನಿಮಾ ರೀ-ರಿಲೀಸ್ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಹೇಳಿದ್ದಾರೆ. ಎಫ್‌ಪಿಎಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿದ ಅವರು, ‘ಶಾಂತಿ-ಕ್ರಾಂತಿ’ ಸಿನಿಮಾದ ಮರು ಬಿಡುಗಡೆ ನಿರ್ಧಾರ ತಮ್ಮ ಸಹೋದರ ಬಾಲಾಜಿ ಅವರ ಕೈಯಲ್ಲಿದೆ ಎಂದು ತಿಳಿಸಿದ್ದಾರೆ.
ರೀ-ರಿಲೀಸ್‌ಗೆ ಪ್ರಮುಖ ಅಡ್ಡಿಯಾಗಿರುವುದು ಸಿನಿಮಾದ ಮೂಲ ನೆಗೆಟಿವ್‌ಗಳು. ರವಿಚಂದ್ರನ್ ಹೇಳುವ ಪ್ರಕಾರ, ಸಿನಿಮಾದ ನೆಗೆಟಿವ್‌ಗಳನ್ನು ಪ್ರಸಾದ್ ಲ್ಯಾಬ್‌ನಲ್ಲಿ ಸಂಗ್ರಹಿಸಲಾಗಿತ್ತು. ಆದರೆ ಸಿನಿಮಾ ಬಿಡುಗಡೆಯಾಗಿ 25 ವರ್ಷಕ್ಕೂ ಹೆಚ್ಚು ಸಮಯ ಕಳೆದಿರುವುದರಿಂದ ಅವು ಹಾಳಾಗಿವೆ ಅಥವಾ ಕರಗಿಹೋಗಿವೆ. ಹೀಗಾಗಿ ಬೇರೆಡೆ ಮೂಲ ನೆಗೆಟಿವ್‌ಗಳು ಲಭ್ಯವಿದೆಯೇ ಎಂಬುದನ್ನು ಹುಡುಕಬೇಕಾಗಿದೆ.
ಸಿನಿಮಾದ ಹಳೆಯ ದೃಶ್ಯಗಳನ್ನು ಪತ್ತೆಹಚ್ಚಿದ ಬಳಿಕವೂ ಕೆಲಸ ಮುಗಿಯುವುದಿಲ್ಲ. ಲಭ್ಯವಿರುವ ಮೂಲ ವಸ್ತುಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ರಿಟ್ರೀವ್ ಮಾಡಿ, ಗುಣಮಟ್ಟ ಹೆಚ್ಚಿಸಿ ಪ್ರೇಕ್ಷಕರಿಗೆ ನೀಡಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸಮಯ ಹಾಗೂ ಹಣ ಬೇಕಾಗುತ್ತದೆ ಎಂದು ರವಿಚಂದ್ರನ್ ಹೇಳಿದ್ದಾರೆ.
ಅದರಲ್ಲೂ ಸಿನಿಮಾದ ಸಂಗೀತವನ್ನು ಮರುಸಿದ್ಧಪಡಿಸುವುದು ಸೇರಿದಂತೆ ಹಲವು ತಾಂತ್ರಿಕ ಕೆಲಸಗಳ ಅಗತ್ಯವಿದೆ. ಒಟ್ಟಾರೆ ರೀ-ರಿಲೀಸ್‌ಗಾಗಿ ಸುಮಾರು ₹2ರಿಂದ ₹3 ಕೋಟಿ ಹೂಡಿಕೆ ಮಾಡಬೇಕಾಗಬಹುದು ಎಂಬುದು ರವಿಚಂದ್ರನ್ ಅವರ ಮಾತು.
ಇದಕ್ಕೂ ಮುನ್ನ ಅವರ ಸಹೋದರ ಬಾಲಾಜಿ ಕೂಡ ಈ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಉತ್ತಮ ಗುಣಮಟ್ಟದಲ್ಲಿ ಸಿನಿಮಾವನ್ನು ಮರು ಬಿಡುಗಡೆ ಮಾಡಲು ಕನಿಷ್ಠ ಒಂದು ವರ್ಷ ಸಮಯ ಬೇಕಾಗಬಹುದು ಎಂದು ಅವರು ತಿಳಿಸಿದ್ದರು.
1991ರಲ್ಲಿ ಬಿಡುಗಡೆಯಾದ ‘ಶಾಂತಿ-ಕ್ರಾಂತಿ’ ಆ ಕಾಲಕ್ಕೆ ಅತ್ಯಂತ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಒಂದಾಗಿತ್ತು. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರವನ್ನು ಇಂದಿನ ‘ಪ್ಯಾನ್ ಇಂಡಿಯಾ’ ಸಿನಿಮಾಗಳಿಗೆ ಹೋಲಿಸಲಾಗುತ್ತದೆ. ಸುಮಾರು ₹18 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ, ಭರ್ಜರಿ ತಾರಾಗಣ ಮತ್ತು ಅದ್ಧೂರಿ ನಿರ್ಮಾಣದಿಂದ ಗಮನ ಸೆಳೆದಿತ್ತು.





