ನ್ಯಾಷನಲ್ ಕ್ರಶ್ ರಶ್ಮಿಕಾಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತಮ್ಮ ರಾಜ್ಯದ ಸೊಸೆಗೆ ಸ್ವಾಗತ, ಸುಸ್ವಾಗತ ಕೋರಿದ್ದಾರೆ. ಅಷ್ಟೇ ಅಲ್ಲ, ದಿ ಗರ್ಲ್ಫ್ರೆಂಡ್ ಚಿತ್ರದ ಮನೋಜ್ಞ ಅಭಿನಯಕ್ಕೆ ಗದ್ದರ್ ಸ್ಟೇಟ್ ಫಿಲ್ಮ್ ಅವಾರ್ಡ್ ನೀಡಿ ಗೌರವಿಸಿ, ಅಭಿನಂದಿಸಿದ್ದಾರೆ. ಒಂದು ಕಾಲದಲ್ಲಿ ಟ್ರೋಲ್ ಆಗ್ತಿದ್ದ ರಶ್ಮಿಕಾ, ಇದೀಗ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
ರಶ್ಮಿಕಾ ಮಂದಣ್ಣ ಕರ್ನಾಟಕದ ಕೂರ್ಗ್ ಮೂಲದ ಕನ್ನಡದ ಹೆಣ್ಣು ಮಗಳು. ನ್ಯಾಷನಲ್ ಕ್ರಶ್ ಆಗಿ ಬೆಳೆದ ಪರಿ ನಿಜಕ್ಕೂ ಅದ್ಭುತ, ಅನನ್ಯ. ಆಡಿಕೊಳ್ಳುವವರ ನಡುವೆ ತಾನು ಯಾರೆಂದು ಇಡೀ ದೇಶಕ್ಕೆ ಸಾರುವಂತಹ ಕಾರ್ಯ ಮಾಡಿದ ದಿಟ್ಟ ಹೆಣ್ಣು ರಶ್ಮಿಕಾ. ಇತ್ತೀಚೆಗೆ ವಿಜಯ್ ದೇವರಕೊಂಡ ಕೈ ಹಿಡಿಯೋ ಮೂಲಕ ತೆಲಂಗಾಣದ ಸೊಸೆ ಕೂಡ ಆದ್ರು. ಹಾಗೆ ತೆಲಂಗಾಣಕ್ಕೆ ನಟಿಮಣಿಯಾಗಿ ಹೋಗಿದ್ದ ರಶ್ಮಿಕಾಗೆ ಸೊಸೆಯಾದ ಹಿನ್ನೆಲೆ, ಖುದ್ದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರೇ ಸ್ವಾಗತ ಕೋರಿರುವುದು ಖುಷಿಯ ವಿಚಾರ.
ಅಂದು ರಶ್ಮಿಕಾ ನಟನೆ ಟ್ರೋಲ್.. ಇಂದು ಸ್ಟೇಟ್ ಅವಾರ್ಡ್
ಮಗಳಾಗಿ ಬಂದೆ ಸೊಸೆಯಾದೆ.. ರಶ್ಮಿಕಾ ಮಾತಿಗೆ ಅತ್ತೆ ಭಾವುಕ..!
ಅಂದಹಾಗೆ ಇತ್ತೀಚೆಗೆ ಹೈದ್ರಾಬಾದ್ನಲ್ಲಿ ತೆಲಂಗಾಣ ಸ್ಟೇಟ್ ಗದ್ದರ್ ಫಿಲ್ಮ್ ಅವಾರ್ಡ್ಸ್ ಫಂಕ್ಷನ್ ನಡೆಯಿತು. ಯುಗಾದಿ ಹಬ್ಬದ ದಿನವೇ ನಡೆದ ಕಾರ್ಯಕ್ರಮದಲ್ಲಿ 2025ನೇ ಸಾಲಿನ ತೆಲುಗು ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿಗಳನ್ನ ನೀಡುವ ಕಾರ್ಯ ನಡೆಯಿತು. ಅಲ್ಲಿ ದಿ ಗರ್ಲ್ಫ್ರೆಂಡ್ ಚಿತ್ರದ ನಟನೆಗಾಗಿ ನಟಿ ರಶ್ಮಿಕಾಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿ, ಗೌರವಿಸಿ, ಅಭಿನಂದಿಸಲಾಯಿತು.
ರಾಮ್ ಚರಣ್ ತೇಜಾ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ವೇದಿಕೆಯಲ್ಲಿ ಸಾಕ್ಷಿ ಆದ್ರು. ಆ ವೇಳೆ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ, ನಾನು ಮೊದಲೆಲ್ಲಾ ನಟಿಸುವಾಗ ನಟನೆ ಬರಲ್ಲ ಅಂತ ಟ್ರೋಲ್ ಮಾಡ್ತಿದ್ರು. ಆದ್ರೆ ಇಂದು ನಟನೆಗಾಗಿಯೇ ಸ್ಟೇಟ್ ಫಿಲ್ಮ್ ಅವಾರ್ಡ್ ಸ್ವೀಕರಿಸುತ್ತಿರೋದು ಖುಷಿಯ ವಿಚಾರ. ನನ್ನ ಇದಕ್ಕೆ ಆರಿಸಿದಂತಹ ಸರ್ಕಾರ, ಜ್ಯೂರಿ ಕಮಿಟಿ ಹಾಗೂ ಇಡೀ ಜನತೆಗೆ ಧನ್ಯವಾದ ಎಂದರು ರಶ್ಮಿಕಾ.
ತೆಲಂಗಾಣ ಸ್ಟೇಟ್ ಫಿಲ್ಮ್ ಅವಾರ್ಡ್ ಫಂಕ್ಷನ್ನಲ್ಲಿ ಅತ್ತೆ-ಸೊಸೆ
‘ದಿ ಗರ್ಲ್ಫ್ರೆಂಡ್’ ಅಭಿನಯಕ್ಕೆ ಗದ್ದರ್ ಅತ್ಯುತ್ತಮ ನಟಿ ಪ್ರಶಸ್ತಿ
ಅಷ್ಟೇ ಅಲ್ಲ, ನಾನು ಮಗಳಾಗಿ ಇಲ್ಲಿಗೆ ಬಂದೆ. ಆಗ ಬರೀ ನಟನೆಗಷ್ಟೇ ಬಂದಿದ್ದೆ. ಆದ್ರೀಗ ಈ ರಾಜ್ಯದ ಸೊಸೆಯಾಗಿದ್ದೀನಿ. ಇದಕ್ಕಿಂತ ಖುಷಿ ಬೇರೇನಿದೆ ಅಂತ ಮದ್ವೆ ಆಗ್ತಿದ್ದಂತೆ ಅದ್ರ ಬೆನ್ನಲ್ಲೇ ಸ್ಟೇಟ್ ಫಿಲ್ಮ್ ಅವಾರ್ಡ್ ಸ್ವೀಕರಿಸಿದ ರಶ್ಮಿಕಾ ಸಂತಸ ಹೊರಹಾಕಿದ್ರು. ಮನೆಯಲ್ಲಿ ಪಾರ್ಟಿ ಮಾಡ್ತಿರೋದೇ ಇನ್ಮೇಲೆ ಅಂತಲೂ ಅಂದರು.
ಸೊಸೆ ಪ್ರಶಸ್ತಿ ಸ್ವೀಕರಿಸುವುದನ್ನ ಕಣ್ತುಂಬಿಕೊಳ್ಳೋಕೆ ಆಗಮಿಸಿದ್ದ ವಿಜಯ್ ದೇವರಕೊಂಡ ತಾಯಿ ಮಾಧವಿ, ಅತ್ತ ರಶ್ಮಿಕಾ ವೇದಿಕೆ ಹತ್ತುತ್ತಿದ್ದಂತೆ ಸಿಕ್ಕಾಪಟ್ಟೆ ಭಾವುಕರಾದ್ರು. ಅದು ನಿಜಕ್ಕೂ ಆನಂದ ಭಾಷ್ಪವೇ ಸರಿ. ಅಷ್ಟೇ ಅಲ್ಲ, ನಿರೂಪಕಿ ಸುಮ ಕೇಳಿದ ಪ್ರಶ್ನೆಗಳಿಗೆ ಮಾವು ಪಚ್ಚಡಿ ಇಬ್ಬರೂ ಮಾಡ್ತೀವಿ ಎಂದ ರಶ್ಮಿಕಾ ಅತ್ತೆ, ನಮ್ಮಲ್ಲಿ ಕಾಂಪಿಟೇಷನ್ ಇಲ್ಲ ಎಂದರು.
ಒಟ್ಟಾರೆ ರಶ್ಮಿಕಾ ಮಂದಣ್ಣ ಸದ್ಯ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ನಟಿಮಣಿ. ಎಲ್ಲಾ ಸೂಪರ್ ಸ್ಟಾರ್ ಸಿನಿಮಾಗಳಿಗೂ ಇವರೇ ಅಚ್ಚುಮೆಚ್ಚು. ನಿರ್ಮಾಪಕರ ಪಾಲಿಗೆ ಈಕೆ ಒಂಥರಾ ಲಕ್ಕಿ ಚಾರ್ಮ್ ಕೂಡ ಹೌದು. ಹಾಗಾಗಿಯೇ ಸಾಲು ಸಾಲು ಸಿನಿಮಾಗಳಲ್ಲಿ ಇಂದಿಗೂ ಬ್ಯುಸಿ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ಸ್ ನೀಡುತ್ತಿದ್ದಾರೆ.





