47ನೇ ವಸಂತಕ್ಕೆ ಕಾಲಿಟ್ಟಿರೋ ಡಾರ್ಲಿಂಗ್ ಪ್ರಭಾಸ್ಗೆ ಗಿಫ್ಟ್ಗಳ ಸುರಿಮಳೆ ಆಗಿದೆ. ಸಾಲು ಸಾಲು ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವೀಸ್ ಅಪ್ಡೇಟ್ಸ್ ಸಿಕ್ಕಿದ್ದು, ಹಿಟ್ಲರ್ ಟೇಬಲ್ಗೆ ಹೋಗಿದೆ ರೆಬೆಲ್ ಸೋಲ್ಜರ್ ಫೌಜಿ ಫೈಲ್. ಇದರೊಟ್ಟಿಗೆ ಕಲ್ಕಿ ಭೈರವನ ಕಂಬ್ಯಾಕ್ ಹಾಗೂ ಸಲಾರ್ ಸೀಕ್ವೆಲ್ಗೆ ಫಿಕ್ಸ್ ಆಗಿರೋ ಮುಹೂರ್ತದ ಎಕ್ಸ್ಕ್ಲೂಸಿವ್ ಖಬರ್ ಇಲ್ಲಿದೆ…
- ಹಿಟ್ಲರ್ ಟೇಬಲ್ ಮೇಲೆ ಫೌಜಿ ಫೈಲ್.. ಬೋಸ್ ಸ್ಪೈ ಮಿಷನ್..!
- ಬರ್ಲಿನ್ to ಕೋಲ್ಕತ್ತಾ.. ಬ್ರಿಟಿಷರ ನಡುಗಿಸಿದ ರೆಬೆಲ್ ಸೋಲ್ಜರ್
- ಡಾರ್ಲಿಂಗ್ ಪ್ರಭಾಸ್ ಬರ್ತ್ ಡೇ.. ಬಿಗ್ಗೆಸ್ಟ್ ಸರ್ಪ್ರೈಸ್ ಗಿಫ್ಟ್ಸ್..!
- ಸಲಾರ್ ಸೀಕ್ವೆಲ್ಗೆ ನೀಲ್ ಮುಹೂರ್ತ.. ಕಲ್ಕಿ ಭೈರವ ಕಂಬ್ಯಾಕ್
ಯೆಸ್.. ಟಾಲಿವುಡ್ನ ರೆಬೆಲ್ ಸ್ಟಾರ್, ಸೆನ್ಸೇಷನಲ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ 47ನೇ ವಸಂತಕ್ಕೆ ಕಾಲಿಡೋ ಮೂಲಕ ಇತ್ತೀಚೆಗೆ ಅದ್ಧೂರಿ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ. ಕಲ್ಕಿ ಚಿತ್ರದ ಬಳಿಕ ರಾಜಾಸಾಬ್ ಸಿನಿಮಾ ಬಂತಾದ್ರೂ ಫ್ಲಾಪ್ ಆಯ್ತು. ಹಾಗಾಗಿ ಕಳೆದ ಎರಡು ವರ್ಷಗಳಿಂದ ಡಾರ್ಕಿಂಗ್ ಫ್ಯಾನ್ಸ್ಗೆ ಪ್ರಭಾಸ್ ಗುಡ್ ನ್ಯೂಸ್ ಕೊಟ್ಟಿರಲಿಲ್ಲ. ಆದ್ರೀಗ ಬರ್ತ್ ಡೇ ವಿಶೇಷ ಸಾಲು ಸಾಲು ಸರ್ಪ್ರೈಸ್ ಗಿಫ್ಟ್ಗಳನ್ನ ನೀಡಿದ್ದಾರೆ.
ಆ ಪೈಕಿ ಕಲ್ಕಿ ಪಾರ್ಟ್-2 ಸಿನಿಮಾದ ಭೈರವ ಮೇಕಿಂಗ್ ಲುಕ್ ಝಲಕ್. ಹೌದು.. ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳಿದ್ದ ಕಲ್ಕಿ ಸಿನಿಮಾ 1100 ಕೋಟಿ ಗಳಿಸೋ ಮೂಲಕ ದಾಖಲೆ ಬರೆದಿತ್ತು. ಇದೀಗ ಅದರ ಸೀಕ್ವೆಲ್ ತಯಾರಿ ಕೂಡ ಭರದಿಂದ ನಡೆಯುತ್ತಿದ್ದು, ಸೆಟ್ನಲ್ಲಿ ಭೈರವನ ಲುಕ್ ಟೆಸ್ಟ್ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿ, ಫ್ಯಾನ್ಸ್ ಹಾಗೂ ಪ್ರೇಕ್ಷಕರ ನಾಡಿಮಿಡಿತ ಹೆಚ್ಚಿಸಿದೆ ಟೀಂ.
ಅಲ್ಲದೆ.. ನಮ್ಮ ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಮೊದಲ ಭಾಗ ತೆರೆಕಂಡು 3 ವರ್ಷಗಳೇ ಕಳೆಯಿತು. ಆದ್ರೆ ಸಲಾರ್-2 ಬಗ್ಗೆ ಅಪ್ಡೇಟ್ಸ್ ಇರಲಿಲ್ಲ. ಇದೀಗ ಸಲಾರ್ ಸೀಕ್ವೆಲ್ ಬಗ್ಗೆ ಸ್ವತಃ ಪ್ರಶಾಂತ್ ನೀಲ್ ಬಾಯಿಂದ ಉತ್ತರ ಹೇಳಿಸಿದ್ದಾರೆ ಪ್ರಭಾಸ್. ಹೌದು.. ನೀಲ್ ಪ್ರೆಸೆಂಟ್ ಮಾಡಿರೋ 418 ಸಿನಿಮಾಗೆ ವಿಶ್ ಮಾಡಿರೋ ಪ್ರಭಾಸ್, ಅದೇ ವೇಳೆ ಆಡಿಯೆನ್ಸ್ಗೆ ಸಲಾರ್-2 ಯಾವಾಗ ಅಂತ ಹೇಳಿಬಿಡಿ ಅಂತ ದುಂಬಾಲು ಬಿದ್ದು, ಡೈರೆಕ್ಟರ್ ಬಳಿ ಬಾಯಿ ಬಿಡಿಸಿಕೊಂಡಿದ್ದಾರೆ. ಅಂದಹಾಗೆ 2027ರ ಜೂನ್ಗಡೆ ಸಲಾರ್-2 ಶುರು ಆಗುತ್ತೆ ಅಂತ ಪ್ರಭಾಸ್ಗೆ ಗಿಫ್ಟ್ ನೀಡಿದ್ದಾರೆ ನೀಲ್.
ಸಲಾರ್-2, ಕಲ್ಕಿ-2 ಒಂದು ತೂಕ ಆದ್ರೆ.. ಫೌಜಿ ಸಿನಿಮಾ ಮತ್ತೊಂದು ತೂಕ. ಹೌದು.. ಬರ್ಲಿನ್ನಿಂದ ಕೋಲ್ಕತ್ತಾವರೆಗೆ ಬ್ರಿಟಿಷರನ್ನ ನಡುಗಿಸಿದ ರೆಬೆಲ್ ಸೋಲ್ಜರ್ ಫೌಜಿ ಕಥೆ ಕೂಡ ರಿವೀಲ್ ಆಗಿದೆ. ನಟ ಪ್ರಭಾಸ್ ಹುಟ್ಟುಹಬ್ಬಕ್ಕೆ ಫೌಜಿ ಫೈಲ್ ನಂ 25 ಗ್ಲಿಂಪ್ಸ್ ಹೊರಬಿದ್ದಿದ್ದು, ನೋಡುಗರ ಹುಬ್ಬೇರಿಸ್ತಿದೆ. ಹನು ರಾಘವಪುಡಿ ನಿರ್ದೇಶನದಲ್ಲಿ, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ನಿರ್ಮಾಣದಲ್ಲಿ ತಯಾರಾಗ್ತಿರೋ ಫೌಜಿ ಸ್ವತಂತ್ರಪೂರ್ವ ಭಾರತದ ಇಂಡಿಯನ್ ಸ್ಪೈ ಏಜೆಂಟ್ ಕಥಾನಕ ಹೊಂದಿದೆ.
ಎರಡನೇ ಮಹಾಯುದ್ಧದ ರೋಚಕ ಹಿನ್ನೆಲೆಯೊಂದಿಗೆ ತೆರೆದುಕೊಳ್ಳುವ ಈ ಪೌಜಿ.. ಮೇ 29, 1942 ರಂದು ಬರ್ಲಿನ್ನಲ್ಲಿ ನೇತಾಜಿ ಸುಭಾಷ್ ಹಾಗೂ ಅಡಾಲ್ಫ್ ಹಿಟ್ಲರ್ ನಡುವೆ ನಡೆದ ಮಾತುಕತೆಯಿಂದ ಕಥೆ ಆರಂಭವಾಗುತ್ತದೆ. ಭಾರತದಲ್ಲಿನ ಬ್ರಿಟಿಷ್ ದಾಸ್ಯದ ವಿರುದ್ಧದ ಹೋರಾಟಕ್ಕೆ ಬೋಸ್ ಅವರು ಜರ್ಮನಿಯ ನೆರವು ಕೋರಿದಾಗ, ಎರಡು ಶತಮಾನಗಳ ಕಾಲ ಆಳಿದ ಬ್ರಿಟಿಷ್ ಸಾಮ್ರಾಜ್ಯವನ್ನು ಭಾರತೀಯರು ಹಿಮ್ಮೆಟ್ಟಿಸಲು ಸಾಧ್ಯವೇ..? ಅಂತ ಹಿಟ್ಲರ್ ಅನುಮಾನ ವ್ಯಕ್ತಪಡಿಸುತ್ತಾನೆ. ಇದಕ್ಕೆ ನೇತಾಜಿ, ಸ್ವಾತಂತ್ರ್ಯ ಪಡೆಯುವ ದೃಢಸಂಕಲ್ಪವನ್ನು ಜಗತ್ತಿನ ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದು ದಿಟ್ಟ ಪ್ರತ್ಯುತ್ತರ ನೀಡುತ್ತಾರೆ.
ಮಾತುಕತೆಯು ಮುಂದುವರಿಯುತ್ತಾ ಸೇನಾ ಶಕ್ತಿಗಿಂತಲೂ ಗೂಢಚಾರಿಕೆಯ ಬುದ್ಧಿವಂತಿಕೆಯೇ ಹೆಚ್ಚು ಬಲಶಾಲಿ ಎಂಬ ವಿಚಾರಕ್ಕೆ ತಿರುಗುತ್ತದೆ ಆ ಮಾತುಕತೆ. ಈ ಹಂತದಲ್ಲಿ ಸುಭಾಷ್ ಚಂದ್ರಬೋಸ್ ಅವರು ಬ್ರಿಟಿಷ್ ಗುಪ್ತಚರ ಜಾಲಕ್ಕೇ ನಡುಕ ಹುಟ್ಟಿಸಿರುವ ಭಾರತೀಯ ಸ್ಪೈ ಏಜೆಂಟ್ ಕುರಿತು ಪ್ರಸ್ತಾಪಿಸುತ್ತಾರೆ. ತನ್ನ ಗುರುತನ್ನು ಗೌಪ್ಯವಾಗಿಟ್ಟುಕೊಂಡೇ ಬ್ರಿಟಿಷ್ ಸೇನಾಪಡೆಗಳನ್ನು ದಾರಿ ತಪ್ಪಿಸಿ, ಅವರ ಬೃಹತ್ ಯೋಜನೆಗಳನ್ನು ವಿಫಲಗೊಳಿಸುತ್ತಿರುವ ಈ ನಿಗೂಢ ವ್ಯಕ್ತಿ, ಭಗವದ್ಗೀತೆಯಿಂದ ಪ್ರೇರಿತವಾದ ಅತ್ಯಂತ ಸಂಕೀರ್ಣವಾದ ಸೀಕ್ರೆಟ್ ಕೋಡ್ ಬಳಸುತ್ತಿರುತ್ತಾನೆ. ಜರ್ಮನಿಯ ವಿಶ್ವವಿಖ್ಯಾತ ‘ಎನಿಗ್ಮಾ ಕೋಡ್’ಗಿಂತಲೂ ಡಿಕೋಡ್ ಮಾಡಲು ಕಷ್ಟಕರವಾಗಿರುವ ಈ ಕೋಡ್ ಮೂಲಕವೇ ಆತ ಕಾರ್ಯಾಚರಣೆ ನಡೆಸುತ್ತಿರುವುದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ ಅನ್ನೋದು ಈ ಟೀಸರ್ನಲ್ಲಿ ರಿವೀಲ್ ಆಗಿದೆ.
1932 ರಿಂದಲೂ ವಸಾಹತುಶಾಹಿ ಆಡಳಿತಕ್ಕೆ ಬೇಕಾಗಿರುವ ಈ ಮೋಸ್ಟ್ ವಾಂಟೆಡ್ ವ್ಯಕ್ತಿಯ ಅಸಲಿ ಹೆಸರು ಯಾರಿಗೂ ತಿಳಿದಿರುವುದಿಲ್ಲ. ಆ ರೆಬೆಲ್ ಸೈನಿಕ.. ಪ್ರಸ್ತುತ ಕೋಲ್ಕತ್ತಾದಲ್ಲಿದ್ದು, ಕ್ರಾಂತಿಯ ಕಿಚ್ಚು ಹೊತ್ತಿಸುತ್ತಿದ್ದಾನೆ ಎಂಬ ಸತ್ಯವನ್ನು ಬೋಸ್ ಬಹಿರಂಗಪಡಿಸುತ್ತಿದ್ದಂತೆ ಟೀಸರ್ ದೃಶ್ಯಗುಚ್ಚದ ಕೊನೆಯಲ್ಲಿ ಪ್ರಭಾಸ್ ಎಂಟ್ರಿ ಸಖತ್ ವೈಬ್ರೆಂಟ್ ಆಗಿದೆ. ಉರಿಯುತ್ತಿರುವ ಸಿಗರೇಟ್, ಕೈಯಲ್ಲಿ ಬೃಹತ್ ಮಷಿನ್ ಗನ್, ಕಣ್ಣುಗಳಲ್ಲಿ ಬೆಂಕಿಯ ಆಕ್ರೋಶ.. ಬ್ರಿಟಿಷ್ ಪಡೆಗಳಿಗೆ ಆತ ನೇರ ಸವಾಲೊಡ್ಡುವ ಝಲಕ್ ಮೈ ನವಿರೇಳಿಸುವಂತಿದೆ.
ಇದರೊಟ್ಟಿಗೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಸಿನಿಮಾದ ಪೋಸ್ಟರ್ ಕೂಡ ಹೊರಬಿದ್ದಿದೆ. ತಲೆಗೆ ಹ್ಯಾಟ್ ಧರಿಸಿರೋ ಪ್ರಭಾಸ್ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಒಟ್ಟಾರೆ ಡಾರ್ಲಿಂಗ್ ಬರ್ತ್ ಡೇಗೆ ಇರೋ ಬರೋ ಸಿನಿಮಾಗಳ ಅಪ್ಡೇಟ್ಸ್ ಎಲ್ಲಾ ಸಿಕ್ಕಿರೋದು ಅವ್ರ ಫ್ಯಾನ್ಸ್ ಜೊತೆ ಪ್ರೇಕ್ಷಕ ವರ್ಗಕ್ಕೂ ಖುಷಿ ಕೊಟ್ಟಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





