ಆಂಧ್ರ ಡಿಸಿಎಂ, ಟಾಲಿವುಡ್‌ನ ಪವರ್ ಸ್ಟಾರ್ ಪವನ್ ಕಲ್ಯಾಣ್‌ರನ್ನ ಕಂಡರೆ ಬರೀ ಮೋದಿಗಷ್ಟೇ ಅಲ್ಲ, ಇಡೀ ಕರುನಾಡಿನ ಮಂದಿಗೆ ಸಿಕ್ಕಾಪಟ್ಟೆ ಇಷ್ಟ. ಅದಕ್ಕೆ ಕಾರಣ ಪವನ್ ಕಲ್ಯಾಣ್‌ಗಿರೋ ಕನ್ನಡಾಭಿಮಾನ. ಭಾಷೆ ಬಾರದಿದ್ರೂ, ಕನ್ನಡ ಸಾಹಿತ್ಯ, ಸಂಸ್ಕೃತಿ ಬಗ್ಗೆ ಅವರು ಮಾಡಿರೋ ಅಧ್ಯಯನ, ಕನ್ನಡದಲ್ಲಿ ಮಾತನಾಡಿರೋ ಆ ಮಾತುಗಳು. ಅದನ್ನ ನೀವೇ ಒಮ್ಮೆ ನೋಡ್ತಾ ಕೇಳಿ.
- ಪವನ್ ಕಲ್ಯಾಣ್ ಕನ್ನಡಾಭಿಮಾನಕ್ಕೆ ಕರುನಾಡು ಫಿದಾ
- ಭಾರತ ಮಾತೆಯ ಮುದ್ದಿನ ಮಗಳು ಕರ್ನಾಟಕ ತಾಯಿ
- ಕುವೆಂಪು ಕವನ ವಾಚನ.. ಸ್ಪಷ್ಟ ಕನ್ನಡ ಕೇಳೋದೇ ಚೆಂದ
- ಮೋದಿ ಅಷ್ಟೇ ಅಲ್ಲ.. ಕನ್ನಡಿಗರ ಮನಸ್ಸು ಗೆದ್ದ ಪವರ್ ಸ್ಟಾರ್
ಪವನ್ ಕಲ್ಯಾಣ್ ಮಾಡಿರೋ ಸಿನಿಮಾಗಳ ಸಂಖ್ಯೆ 26. ಜನಸೇನಾ ಪಾರ್ಟಿ ಕಟ್ಟಿ, ಅದನ್ನ ಅಧಿಕಾರಕ್ಕೆ ತರಲು ಪವನ್ ಮಾಡಿದ ರಾಜಕಾರಣ 11 ವರ್ಷ. ಆದ್ರೆ ಇವರ ಜೀವನದಲ್ಲಿನ ಏರಿಳಿತಗಳು ಅವೆಲ್ಲವನ್ನು ಮೀರಿದ ಅನುಭವಗಳನ್ನು ನೀಡಿದೆ. ಹಾಗಾಗಿಯೇ ಅಸಂಖ್ಯಾತ ಅಭಿಮಾನಿ ಬಳಗ, ಇಟ್ಟ ಗುರಿಯತ್ತ ದಿಟ್ಟ ಹೆಜ್ಜೆ ಇಡೋ ಮನೋಭಾವದಿಂದ ಇಂದು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ, ರಾಜಕಾರಣದಲ್ಲಿ ಗೇಮ್ ಚೇಂಜರ್ ಆಗಿ ರಾರಾಜಿಸ್ತಿದ್ದಾರೆ.
ಹೌದು.. ಆಂಧ್ರದಲ್ಲಿ ಟಿಡಿಪಿ ಅಧಿಕಾರಕ್ಕೆ ಬರಲು ಪವನ್ ಮಾಡಿದ ಸ್ಟ್ರ್ಯಾಟಜಿ ವರ್ಕೌಟ್ ಆಯ್ತು. ಇದರಿಂದಲೇ ಪ್ರಧಾನಿ ಮೋದಿ ದಿಲ್ ಗೆದ್ದ ಪವನ್ ಕಲ್ಯಾಣ್ ಮುಂದೊಂದು ದಿನ ಸಿಎಂ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಎನ್‌ಡಿಎ ಒಕ್ಕೂಟದಲ್ಲಿ ಇದ್ದುಕೊಂಡೇ ಯುಪಿಎ ಒಕ್ಕೂಟದ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಳ್ಳೋದು ತಮಾಷೆಯಲ್ಲ. ಅದ್ರೆ ಅದನ್ನ ಸಾಧ್ಯವಾಗಿಸಿದ್ದಾರೆ ಪವನ್ ಕಲ್ಯಾಣ್.
ಆಂಧ್ರ ಸಮ್ಮಿಶ್ರ ಸರ್ಕಾರದ ಅರಣ್ಯ ಸಚಿವರಾಗಿದ್ದುಕೊಂಡು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜೊತೆ ಕುಮ್ಕಿ ಆನೆಗಳನ್ನ ಪಡೆಯೋ ಒಪ್ಪಂದ ಮಾಡಿಕೊಂಡಿದ್ರು. ಅದ್ರಂತೆ ಅವುಗಳನ್ನ ಅಫಿಶಿಯಲಿ ನಿನ್ನೆ ನಮ್ಮ ಕರ್ನಾಟಕ ಸರ್ಕಾರದಿಂದ ಹಸ್ತಾಂತರಿಸಲಾಯಿತು. ಆ ಕಾರ್ಯಕ್ರಮಕ್ಕೆ ಬಂದಿದ್ದ ಪವನ್ ಕಲ್ಯಾಣ್, ಕನ್ನಡವನ್ನು ಹರಳು ಹುರಿದಂತೆ ಮಾತನಾಡೋ ಪರಿ ನೋಡಿ ಇಡೀ ಕರುನಾಡು ಫಿದಾ ಆಗಿದೆ.
ನಾಡಗೀತೆಯನ್ನ ಕನ್ನಡದಲ್ಲಿ ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್, ಇಡೀ ಭಾಷಣವನ್ನು ಕನ್ನಡ, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಮಾಡಿದ್ದು ಇಂಟರೆಸ್ಟಿಂಗ್. ಭಾರತ ಮಾತೆಯ ಮುದ್ದಿನ ಮಗಳು ಕರ್ನಾಟಕ ತಾಯಿ ಅಂತ ಕನ್ನಡದ ನೆಲ ಹಾಗೂ ಜನಕ್ಕೆ ತಲೆಬಾಗಿ ನಮಸ್ಕರಿಸಿದ ಪವನ್, ಕನ್ನಡಿಗರ ಪಾಲಿಗೆ ಹೀರೋ ಆಗಿಬಿಟ್ಟರು. ಅಷ್ಟೇ ಅಲ್ಲ, ರಾಷ್ಟ್ರಕವಿ ಕುವೆಂಪು ಅವ್ರ ಅರಣ್ಯಕ್ಕೆ ಸಂಬಂಧಿಸಿದ ಕವನವನ್ನು ವಾಚನ ಮಾಡಿ, ಅಚ್ಚರಿ ಮೂಡಿಸಿದರು.
ಒಟ್ಟಾರೆ ಕರ್ನಾಟಕದಲ್ಲೇ ಹುಟ್ಟಿರೋ ಅದೆಷ್ಟೋ ಮಂದಿ ಕನ್ನಡ ಮಾತಾಡೋಕೆ ಹಿಂಜರಿಯುತ್ತಾರೆ. ಅಂಥದ್ರಲ್ಲಿ ಇಲ್ಲಿನ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನ ಗೌರವಿಸಿದ ಪವನ್ ಮೇಲೆ ಕನ್ನಡಿಗರಿಗೆ ಗೌರವ ದುಪ್ಪಟ್ಟು ಆಗಿದೆ. ನಟ ಪ್ರಕಾಶ್ ರೈ ರೀತಿ ಪವನ್ ಕೂಡ ಎಲ್ಲೇ ಹೋದ್ರೂ ಅಲ್ಲಿನ ಮೂಲಗಳ ಬಗ್ಗೆ ಸಿಕ್ಕಾಪಟ್ಟೆ ಸಂಶೋಧನೆ ಮಾಡ್ತಾರೆ. ಪುಸ್ತಕಪ್ರೇಮಿ ಕೂಡ ಆಗಿರೋ ಪವನ್, ಓದುವ ಮೂಲಕ ಸಾಕಷ್ಟು ತಿಳಿದುಕೊಳ್ತಾರೆ. ಸದ್ಯ ಪವನ್‌ರ ಈ ಕನ್ನಡಾಭಿಮಾನಕ್ಕೆ ನಮ್ಮ ಕಡೆಯಿಂದಲೂ ಅಭಿನಂದನೆ. ಜೈ ಪವನ್.. ಜೈ ಜನಸೇನಾ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್