ಬರಗೂರು ರಾಮಚಂದ್ರಪ್ಪ ನಿರ್ದೇಶನದ `ಮಹಾಕವಿ’ ಕನ್ನಡ ಚಿತ್ರವು ಜಾರ್ಖಂಡ್ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈ ಚಿತ್ರವನ್ನು ಬೆಳಗಾವಿಯ ಪ್ರಭು ಯತ್ನಟ್ಟಿಯವರು ತಮ್ಮ ಪಿ.ಆರ್ ಅಸೋಸಿಯೇಟ್ಸ್ ಸಂಸ್ಥೆಯಿಂದ ನಿರ್ಮಿಸಿದ್ದಾರೆ. ಈ ಚಿತ್ರೋತ್ಸವವು ಅಕ್ಟೋಬರ್ ಕೊನೆಯವಾರದಲ್ಲಿ ನಡೆಯಲಿದೆ.
`ಮಹಾಕವಿ’ ಚಿತ್ರವು ಕನ್ನಡದ ಆದಿಕವಿಯೆಂದೇ ಪ್ರಸಿದ್ಧವಾದ ಪಂಪನ ಜೀವನ ಹಾಗೂ ಕಾವ್ಯಗಳ ಆಶಯಗಳನ್ನು ಆಧರಿಸಿ ರೂಪುಗೊಂಡಿದೆ. ಪಂಪಕವಿಯ ಆದಿಪುರಾಣಂ ಮತ್ತು ವಿಕ್ರಮಾರ್ಜುನ ವಿಜಯಂ ಎಂಬ ಎರಡು ಕಾವ್ಯಗಳಲ್ಲಿರುವ ಮತ್ತು ಸಮಕಾಲೀನ ಪ್ರಸ್ತುತತೆಯನ್ನು ಹೊಂದಿರುವ ಸನ್ನಿವೇಶಗಳನ್ನು `ಮಹಾಕವಿ’ ಚಿತ್ರವು ಅಳವಡಿಸಿಕೊಂಡಿದೆ. ಜಾತಿ ತಾರತಮ್ಯ ವಿರೋಧಿ ಮತ್ತು ಯುದ್ಧವಿರೋಧಿ ನಿಲುವಿನ ಜೊತೆಗೆ ಸೃಜನಶೀಲ ಸ್ವಾತಂತ್ರ್ಯದ ಸಮಸ್ಯೆಯನ್ನು ಚಿತ್ರಿಸಲಾಗಿದೆ.
ಬರಗೂರರೇ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಬಹುಭಾಷಾಕಲಾವಿದ ಕಿಶೋರ್, ಅನುಷಾರೈ, ಸುಂದರರಾಜ್ ಕುಮಾರ್‍ಗೋವಿಂದ್, ಪ್ರಮೀಳಾಜೋಷಾಯ್, ಅಕಾಂಕ್ಷ್‍ಬರಗೂರ್, ಅರಸು, ದಳವಾಯಿ, ಶಾಂತರಾಜು ಮುಂತಾದವರು ಅಭಿನಯಿಸಿದ್ದಾರೆ. ಸುರೇಶ್ ಅರಸು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ನಟ್ರಾಜ್ ಶಿವು-ಪ್ರವೀಣ್ ಸಹ ನಿರ್ದೇಶನವಿರುವ ಈ ಚಿತ್ರವು ಈಗಾಗಲೇ ಬಿಡುಗಡೆಗೊಂಡು ಪ್ರದರ್ಶನ ಕಂಡಿದೆ.





