ಫೋನ್ ಸ್ಕ್ರೀನ್‌ಗಳಿಂದಾಗಿ ಡಿಜಿಟಲ್ ಕೈದಿಗಳಾಗಿರುವ ಇಂದಿನ ಜೆನ್‌ಝಿ ಜನರೇಷನ್‌ಗೆ ದೊಡ್ಡ ಶಾಕ್ ಕೊಡಲು ಬಂದಿದೆ ಸಿಂಪಲ್ ಸುನಿಯ ವಿಭಿನ್ನ ಪ್ರಯೋಗ ಹಾಗೂ ಪ್ರಯತ್ನ ಲಂಬೋದರ 2.O. ಎಐ ಜಗತ್ತಿಗೆ ಎಷ್ಟು ಮಾರಕ ಅನ್ನೋದ್ರ ಜೊತೆಗೆ ನೈಜ ಹ್ಯೂಮನಾಯ್ಡ್ ರೋಬೋಟ್ ಜಿಯಾ ಮ್ಯಾಜಿಕ್ ಅನ್ನೋದ್ರ ಇಂಟರೆಸ್ಟಿಂಗ್ ಕಥೆ ಹೇಗಿದೆ..? ಪ್ರೇಕ್ಷಕ ಪ್ರಭು ಕೊಟ್ಟ ಮಾರ್ಕ್ಸ್ ಎಷ್ಟು..? ಇಲ್ಲಿದೆ ರಿವ್ಯೂ ರಿಪೋರ್ಟ್.
- ಡಿಜಿಟಲ್ ಯುಗದ ಎಚ್ಚರಿಕೆಯ ಗಂಟೆ ‘ಲಂಬೋದರ 2.0′
- ಡಿಜಿಟಲ್ ಸ್ಕ್ಯಾಮ್ ವಿರುದ್ಧ ಸಿಂಪಲ್ ಸುನಿಯ ವೆರೈಟಿ ಅಸ್ತ್ರ..!
- 100 ದಿನದ ಹ್ಯಾಪಿನೆಸ್ ಬ್ಯಾಂಡ್ ಹಿಂದಿನ ಅಸಲಿ ಆಟವೇನು?
- 5 ಕ್ಯಾರೆಕ್ಟರ್‌ಗಳ ಕಾಮಿಡಿ ಥ್ರಿಲ್ಲರ್ ಕಾಂಬೋಗೆ ಫುಲ್ ಮಾರ್ಕ್ಸ್
ಜೆನ್-ಝಿ ಯುಗದಲ್ಲಿ ಸ್ಮಾರ್ಟ್ ಗ್ಯಾಜೆಟ್‌ಗಳೇ ಸರ್ವಸ್ವವಾಗಿರುವ ಇಂದಿನ ಬದುಕಿನ ಕಹಿ ಸತ್ಯದ ಮೇಲೆ ಲಂಬೋದರ 2.0 ಸಿನಿಮಾ ಕಣ್ಣುತೆರೆಸುವ ಪ್ರಯತ್ನ ಮಾಡಿದೆ. ಯಾರ ಅಕೌಂಟ್‌ನಿಂದಲೂ ಲಕ್ಷಾಂತರ ರೂಪಾಯಿ ಕದಿಯದೆ, ಬರೀ 1180 ರೂಪಾಯಿ ಜಿಎಸ್‌ಟಿ ಸಮೇತ ಹ್ಯಾಕ್ ಮಾಡಿ ತನ್ನದೇ ಎಐ ಅಸಿಸ್ಟೆಂಟ್ ಕೃಷ್ಣನೊಂದಿಗೆ ಕಾಲಕಳೆಯುವ ಎಥಿಕಲ್ ಹ್ಯಾಕರ್ ಅವ್ಯಕ್ತ ಅಲಿಯಾಸ್ ಅನಿಲ್ ಶೆಟ್ಟಿ ಕಥೆ ಪ್ರೇಕ್ಷಕರನ್ನು ಆರಂಭದಲ್ಲೇ ಹಿಡಿದಿಟ್ಟುಕೊಳ್ಳುತ್ತದೆ. ಆನ್‌ಲೈನ್ ಗೇಮ್‌ಗಳು ಮತ್ತು ಡಿಜಿಟಲ್ ಸ್ಕ್ಯಾಮ್‌ಗಳು ಮನುಷ್ಯನ ಬದುಕನ್ನು ಹೇಗೆ ಕಂಟ್ರೋಲ್ ಮಾಡುತ್ತವೆ ಎಂಬ ಕಾನ್ಸೆಪ್ಟ್ ಸಖತ್ ರೋಚಕವಾಗಿದೆ.
ಸಿನಿಮಾದ ಅತಿ ದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಅದರ ಪ್ರೆಶರ್ ಕುಕ್ಕರ್ ಕಾನ್ಸೆಪ್ಟ್ ಮನುಷ್ಯನ ಫ್ರಸ್ಟ್ರೇಶನ್ ಬಂಡವಾಳ ಮಾಡಿಕೊಂಡು, 100 ದಿನಗಳಲ್ಲಿ ಅತಿ ಹೆಚ್ಚು ಹ್ಯಾಪಿ ಆಗಿರುವ ವ್ಯಕ್ತಿಗೆ 100 ಕೋಟಿ ರೂಪಾಯಿ ಬಹುಮಾನ ಘೋಷಿಸುವ ಹ್ಯಾಪಿನೆಸ್ ಬ್ಯಾಂಡ್ ಕಥೆಗೆ ಬಿಗ್ ಟ್ವಿಸ್ಟ್ ನೀಡುತ್ತದೆ. ಈ ಬ್ಯಾಂಡ್‌ನಿಂದ ಜನ ಹೇಗೆ ಡಿಜಿಟಲ್ ಕೈಗೊಂಬೆಗಳಾಗುತ್ತಾರೆ ಮತ್ತು ವಂಚಕ ರಾಘವ್ ಕಶ್ಯಪ್ ಅಲಿಯಾಸ್ ಕುನಾಲ್ ಕಪೂರ್ ಎಸಗುವ ಡಿಜಿಟಲ್ ಸ್ಕ್ಯಾಮ್‌ನಿಂದ ಜನರನ್ನು ಹೀರೋ ಹೇಗೆ ಪಾರು ಮಾಡುತ್ತಾನೆ ಎಂಬುದು ಸಿನಿರಂಗದಲ್ಲಿ ಹೊಸ ಅಲೆ ಎಬ್ಬಿಸಿದೆ. ಥಿಯೇಟರ್‌ಗಳಿಂದ ಹೊರಬರುತ್ತಿರುವ ಸಿನಿಪ್ರಿಯರು ಹಾಗೂ ಯುವಜನತೆ ಲಂಬೋದರ 2.0 ಸಿನಿಮಾದ ಮೇಕಿಂಗ್ ಬಗ್ಗೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನಾಯಕನಾಗಿ ನಟಿಸಿರುವ ಅನಿಲ್ ಶೆಟ್ಟಿ ಅವರ ಕಾಮಿಡಿ ಟೈಮಿಂಗ್ ಹಾಗೂ ನಟನೆ ಕಥೆಗೆ ಜೀವ ತುಂಬಿದೆ. ಇನ್ನು ವಿಲನ್ ಆಗಿ ಕುನಾಲ್ ಕಪೂರ್ ಅಬ್ಬರಿಸಿದ್ದರೆ, ನಾಯಕಿ ಸಾಚಿ ಬಿಂದ್ರಾ ಗ್ಲಾಮರಸ್ ಆಗಿ ಕಣ್ಣುಕುಕ್ಕಿದ್ದಾರೆ. ಮೇಘನಾ ಗಾಂವ್ಕರ್ ಅತಿಥಿ ಪಾತ್ರದಲ್ಲಿ ಮಿಂಚಿದರೆ, ಸಿನಿಮಾದ ಹೈಲೈಟ್ ಆಗಿರುವ ನೈಜ ಹ್ಯೂಮನಾಯ್ಡ್ ರೋಬೋಟ್ ಜಿಯಾ ಮತ್ತು ಎಐ ರೂಪದ ಕೃಷ್ಣ ತೆರೆಯ ಮೇಲೆ ಪವರ್‌ಫುಲ್ ಆಗಿ ಕಾಣಿಸಿಕೊಂಡು ಪ್ರೇಕ್ಷಕರ ಹುಬ್ಬೇರಿಸಿದ್ದಾರೆ. ಯಾವುದೇ ಹೊಸತನದ ಪ್ರಯೋಗಕ್ಕೆ ಬಲವಾದ ಬೆನ್ನೆಲುಬು ಬೇಕು, ಅದೇ ರೀತಿ ಲಂಬೋದರ 2.0 ಸಿನಿಮಾದ ಬೃಹತ್ ಕ್ಯಾನ್ವಾಸ್‌ಗೆ ಜೀವ ತುಂಬಿದವರು ನಿರ್ಮಾಪಕರು. ಬಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆಯಾದ ಮಹಾವೀರ್ ಜೈನ್ ಫಿಲಮ್ಸ್ ಈ ಸಿನಿಮಾಗೆ ಸಾಥ್ ನೀಡಿದೆ.ಚಿತ್ರದ ಮತ್ತೊಂದು ಜೀವನಾಡಿ ಅಂದರೆ ವೀರ್ ಸಮರ್ಥ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ.
ಸಿನಿಮಾದ ಮೇಕಿಂಗ್‌ನಲ್ಲಿ ಸಿಂಪಲ್ ಸುನಿ ತಮ್ಮ ವಿಭಿನ್ನ ಚಿಂತನೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಂತ್ರಜ್ಞಾನ ಮತ್ತು ಥ್ರಿಲ್ಲರ್ ಅಂಶಗಳ ಜೊತೆಗೆ ‘ಕಣ್ಣಲೊಮ್ಮೆ ಕಣ್ಣಿಟ್ಟು ನೋಡು…’ ಹಾಡು ಚಿತ್ರಮಂದಿರದಿಂದ ಹೊರಬಂದ ಮೇಲೂ ಪ್ರೇಕ್ಷಕರ ಮನಸ್ಸಿನಲ್ಲಿ ಗುನುಗುವಂತೆ ಮಾಡಿದೆ. ಹಿನ್ನೆಲೆ ಸಂಗೀತ ಹಾಗೂ ಕ್ಯಾಮೆರಾ ವರ್ಕ್ ಡಿಜಿಟಲ್ ಯುಗದ ಕರಾಳತೆಯನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವಲ್ಲಿ ಯಶಸ್ವಿಯಾಗಿದೆ.
ಇಂದಿನ ಆನ್‌ಲೈನ್ ಮೋಸಗಳು, ಒಟಿಪಿ ವಂಚನೆಗಳು ಮತ್ತು ಡೇಟಾ ಕಳ್ಳತನದ ಬಗ್ಗೆ ಎಚ್ಚರಿಸುವ ಅತ್ಯುಪಯುಕ್ತ ಹಾಗೂ ಮನರಂಜನೆಯ ಭರಿತ ಚಿತ್ರ ಲಂಬೋದರ 2.0. ಜೆನ್-ಝಿ ಮೈಂಡ್‌ಸೆಟ್‌ಗೆ ತಕ್ಕಂತೆ ತಯಾರಾಗಿರುವ ಈ ಹೈ-ಕಾನ್ಸೆಪ್ಟ್ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಸಿನಿಮಾವು ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ಥಿಯೇಟರ್‌ನಲ್ಲಿ ನೋಡಲೇಬೇಕಾದ ಮಸ್ತ್ ಎಂಟರ್‌ಟೈನರ್ ಆಗಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





