ಬೆಂಗಳೂರು ನಗರದ ಪ್ರತಿಷ್ಠಿತ ವಸತಿ ಸಮುಚ್ಚಯವೊಂದರಲ್ಲಿ ಸಿಸಿಬಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಡ್ರಗ್ಸ್ ಬಾಲಗಲೂರಿನ ಬಳ್ಳಾರಿ ರಸ್ತೆ ಪ್ರೆಸ್ಟಿಜ್ ಫೈನ್ ಬೇ ಪಾರ್ಕ್ ಅಪಾರ್ಟ್‌ಮೆಂಟ್‌ನ ಪ್ಲಾಟ್‌ನಲ್ಲಿ ಪತ್ತೆಯಾಗಿದೆ.
ಸೀಜ್ ಮಾಡಲಾದ ಮಾದಕ ದ್ರವ್ಯಗಳಲ್ಲಿ ಮುಖ್ಯವಾಗಿ 8,335 LSD ಸ್ಟ್ರಿಪ್ಸ್, 534 ಗ್ರಾಂ ಚರಸ್ ಮತ್ತು 5 ಕೆಜಿ ಹೈಡ್ರೋ ಗಾಂಜಾ ಸೇರಿವೆ. ಇದು ಕರ್ನಾಟಕದಲ್ಲಿ ಇದುವರೆಗೆ ಪತ್ತೆಯಾದ ಅತಿ ಹೆಚ್ಚಿನ LSD ಸ್ಟ್ರಿಪ್ಸ್ ಪ್ರಮಾಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು LSD ಸ್ಟ್ರಿಪ್‌ಗೆ ಸುಮಾರು 6 ಸಾವಿರ ರೂಪಾಯಿ ಬೆಲೆ ಇದ್ದು, ಇವುಗಳನ್ನು ದೇವರ ಚಿತ್ರಗಳು, ವಿವಿಧ ಕಲಾ ರೂಪಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.
ಈ ಪ್ರಕರಣದಲ್ಲಿ ಕೇರಳ ಮೂಲದ ಅಶ್ವಿನ್ (27) ಮತ್ತು ಮೊಬಿನಾ (25) ಎಂಬ ಇಬ್ಬರನ್ನು ಬಂಧಿಸಲಾಗಿದೆ. ಇಬ್ಬರೂ ಪೆಡ್ಲಿಂಗ್‌ನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಥೈಲೆಂಡ್‌ನ ವಿನ್ಸೆಂಟ್ ಎಂಬಾತ ಡ್ರಗ್ಸ್ ಪೂರೈಕೆ ಮಾಡುತ್ತಿದ್ದನು. ವಿನ್ಸೆಂಟ್ ಫ್ಲೈಟ್‌ಗಳ ಮೂಲಕ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಡ್ರಗ್ಸ್ ಕಳುಹಿಸುತ್ತಿದ್ದನು. ಅಶ್ವಿನ್ ಮತ್ತು ಮೊಬಿನಾ ಅವನ ಸೂಚನೆಯಂತೆ ನಿಗದಿತ ಜಾಗಗಳಲ್ಲಿ ಡ್ರಗ್ಸ್ ಇಡುತ್ತಿದ್ದರು ಮತ್ತು ಮಾರಾಟ ಮಾಡುತ್ತಿದ್ದರು.
ಸಿಸಿಬಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ನಡೆಸಿದ ಈ ಕಾರ್ಯಾಚರಣೆಯಿಂದ ಅಂತಾರಾಷ್ಟ್ರೀಯ ಡ್ರಗ್ ಜಾಲದ ಒಂದು ಭಾಗವನ್ನು ಬಯಲು ಮಾಡಲಾಗಿದೆ. ಸದ್ಯ ಅಪಾರ್ಟ್‌ಮೆಂಟ್ ಮಾಲೀಕ ಅಥವಾ ಫ್ಲಾಟ್‌ನ ಮಾಲೀಕನ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಘಟನೆಯಿಂದ ನಗರದಲ್ಲಿ ಡ್ರಗ್ ಪೆಡ್ಲರ್‌ಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಗಮನಾರ್ಹ.





