ಚಿಕ್ಕಬಳ್ಳಾಪುರದ ಚಿಂತಾಮಣಿ ಒಂಥರಾ ತೆಲುಗು ಸೂಪರ್ ಸ್ಟಾರ್‌ಗಳ ಫೇವರಿಟ್ ಸ್ಪಾಟ್ ಆಗಿಬಿಟ್ಟಿದೆ. ಇತ್ತೀಚೆಗೆ ಆಂಧ್ರ ಡಿಸಿಎಂ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಲ್ಲಿಗೆ ಬಂದು ಹೋಗಿದ್ರು. ಇದೀಗ ನಂದಮೂರಿ ಬಾಲಕೃಷ್ಣ ಬರ್ತಿದ್ದಾರೆ. ಅದಕ್ಕೆ ಕರುನಾಡ ಚಕ್ರವರ್ತಿ, ಲಿವಿಂಗ್ ಲೆಜೆಂಡ್ ನಮ್ಮ ಶಿವಣ್ಣ ಕೂಡ ಸಾಥ್ ನೀಡ್ತಿದ್ದಾರೆ. ಯಾಕೆ ಏನು ಎತ್ತ ಅನ್ನೋದ್ರ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ.
- ಪವನ್ ಆಯ್ತು.. ಬಾಲಯ್ಯ ಸರದಿ.. ಚಿಂತಾಮಣಿ ರಂಗು..!
- ಅಖಂಡ-2 ಪ್ರೀ ರಿಲೀಸ್ ಇವೆಂಟ್‌ಗೆ ಕೌಂಟ್‌ಡೌನ್ ಶುರು
- ಸಹೋದರ ಸಮಾನ ಬಾಲಕೃಷ್ಣಗೆ ನಮ್ಮ ಡಾ. ಶಿವಣ್ಣ ಸಾಥ್
- ತೆಲುಗು ಸ್ಟಾರ್‌ಗಳ ಫೇವರಿಟ್ ಸ್ಪಾಟ್ ಆಗ್ತಿದೆ ಚಿಂತಾಮಣಿ..!
ಆಂಧ್ರ-ಕರ್ನಾಟಕ.. ಅಕ್ಕ ಪಕ್ಕದ ರಾಜ್ಯಗಳಾದ್ದರಿಂದ ಒಂಥರಾ ಸೋದರ ಸಂಬಂಧ ಕೂಡ ಏರ್ಪಟ್ಟಿದೆ. ಅದ್ರಲ್ಲೂ ಅಂಧ್ರ ಸೂಪರ್ ಸ್ಟಾರ್‌ಗಳಿಗೆ ನಮ್ಮ ಕರುನಾಡು ಅಂದ್ರೆ ಎಲ್ಲಿಲ್ಲದ ಪ್ರೀತಿ, ಪ್ರೇಮ. ಯಾಕಂದ್ರೆ ಅವರುಗಳ ಸಿನಿಮಾಗಳಿಂದ ನಮ್ಮ ಕರ್ನಾಟಕನೇ ಸೆಂಟರ್ ಆಫ್ ಅಟ್ರ್ಯಾಕ್ಷನ್. ಇಲ್ಲಿ ಸಿನಿಮಾ ಗೆದ್ರೆ ವಿಶ್ವದ ಯಾವುದೇ ರಾಷ್ಟ್ರದಲ್ಲಿ ಸಿನಿಮಾ ಮಾಡಿದ್ರೂ ಗೆಲ್ಲುತ್ತೆ ಅನ್ನೋ ಆತ್ಮವಿಶ್ವಾಸ.
ಕರ್ನಾಟಕ ಓಕೆ.. ಆದ್ರೆ ಗಡಿನಾಡು ಜಿಲ್ಲೆ ಚಿಕ್ಕಬಳ್ಳಾಪುರ ಹಾಗೂ ಅದ್ರ ಚಿಂತಾಮಣಿ ತಾಲ್ಲೂಕು ಮೇಲೆ ತೆಲುಗು ಸೂಪರ್ ಸ್ಟಾರ್‌ಗಳಿಗೆ ವಿಶೇಷವಾದ ಪ್ರೀತಿಯಿದೆ. ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ತ್ರಿಬಲ್ ಆರ್ ಇವೆಂಟ್ ಗ್ರ್ಯಾಂಡ್ ಆಗಿ ನಡೆದಿತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಜಡ್ಜ್ ಒಬ್ಬರ ಬರ್ತ್ ಡೇ ಕಾರ್ಯಕ್ರಮಕ್ಕಾಗಿ ಚಿಂತಾಮಣಿಗೆ ಆಂಧ್ರ ಡಿಸಿಎಂ ಪವರ್ ಸ್ಟಾರ್ ಪವನ್ ಕಲ್ಯಾಣ್ ಬಂದು ಹೋಗಿದ್ರು. ಇದೀಗ ನಂದಮೂರಿ ಬಾಲಕೃಷ್ಣ ಸರದಿ.
ಯೆಸ್.. ಇದೇ ನವೆಂಬರ್ 21ರ ಸಂಜೆ 6 ಗಂಟೆಗೆ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಬಾಲಯ್ಯ ನಟನೆಯ ಬಹುನಿರೀಕ್ಷಿತ ಅಖಂಡ-2 ಚಿತ್ರದ ಪ್ರೀ-ರಿಲೀಸ್ ಇವೆಂಟ್ ಜರುಗಲಿದೆ. ಅದಕ್ಕಾಗಿ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆಯೂ ಇದೆ. ಖುಷಿ ಅಂದ್ರೆ ಬಾಲಕೃಷ್ಣಗೆ ಸೋದರ ಸಮಾನರಾದ ನಮ್ಮ ಶಿವರಾಜ್‌ಕುಮಾರ್ ಕೂಡ ಸಾಥ್ ನೀಡ್ತಿದ್ದಾರೆ.
ಗಡಿನಾಡು ಜಿಲ್ಲೆಯಾಗಿರೋ ಚಿಕ್ಕಬಳ್ಳಾಪುರ, ಕೋಲಾರದ ಮಧ್ಯೆ ಭಾಗದಲ್ಲಿರೋ ಚಿಂತಾಮಣಿ ಈ ಫಂಕ್ಷನ್‌ನಿಂದ ರಂಗೇರಲಿದೆ. ಅಂದಹಾಗೆ ಶಿವಣ್ಣನ ಶಿವಲಿಂಗ ಹಂಡ್ರೆಡ್ ಡೇಸ್ ಫಂಕ್ಷನ್‌ಗೆ ಬಾಲಯ್ಯ ಸಾಕ್ಷಿಯಾಗಿದ್ರು. ಬಾಲಯ್ಯನ ಗೌತಮಿಪುತ್ರ ಶಾತಕರ್ಣಿ ಚಿತ್ರದಲ್ಲಿ ಶಿವಣ್ಣ ಗೆಸ್ಟ್ ಅಪಿಯರೆನ್ಸ್ ನೀಡಿದ್ರು. ಇನ್ನು ಕನ್ನಡದ ದೊಡ್ಮನೆ ಡಾ ರಾಜ್‌ಕುಮಾರ್ ಹಾಗೂ ಆಂಧ್ರ ಮಾಜಿ ಸಿಎಂ, ಎನ್ ಟಿ ರಾಮರಾವ್‌ರ ನಡುವಿನ ಬಾಂಧವ್ಯಕ್ಕೆ ಈ ಜನರೇಷನ್ ಕೂಡ ಕನ್ನಡಿ ಆಗ್ತಿರೋದು ವಿಶೇಷ.
ಅಖಂಡ ಸಿನಿಮಾ ಬೋಯಪಾಟಿ ಶ್ರೀನು ನಿರ್ದೇಶನದಲ್ಲಿ 2021ರಲ್ಲಿ ತೆರೆಕಂಡಿತ್ತು. 150 ಕೋಟಿ ಕಲೆಕ್ಷನ್‌ನಿಂದ ಎಲ್ಲರ ಹುಬ್ಬೇರಿಸಿತ್ತು. ಇದೀಗ ಅದ್ರ ಮುಂದುವರೆದ ಭಾಗ ನಾಲ್ಕು ವರ್ಷಗಳ ನಂತ್ರ ಬರ್ತಿದೆ. ಅಖಂಡ-2 ಸಹಜವಾಗಿಯೇ ನಿರೀಕ್ಷೆ ಡಬಲ್ ಮಾಡಿದ್ದು, ಹಿಂದೂಪುರ ಎಂಎಲ್‌ಎ ಕೂಡ ಆಗಿರೋ ಬಾಲಯ್ಯನ ಸಿನಿ ಜರ್ನಿಗೆ ಬೂಸ್ಟರ್ ಡೋಸ್ ನೀಡುವ ನಿರೀಕ್ಷೆಯಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





