ವಿಲನ್ ಬೆನ್ನಲ್ಲೇ ಈಗ ಮತ್ತೊಮ್ಮೆ ಕೈಜೋಡಿಸಿರೋ ಆ ಪವರ್ಫುಲ್ ಕಾಂಬಿನೇಷನ್ ಏನು ಹೇಳೋಕೆ ಬರ್ತಿದ್ದಾರೆ. ಪಾಸ್ಪೋರ್ಟ್ ಮತ್ತು ಕೆಂಪು ಹೃದಯದ ಸನ್ಗ್ಲಾಸ್ ಇಟ್ಕೊಂಡು ಕಿಚ್ಚ ಕೊಟ್ಟಿರೋ ಆ ಸಸ್ಪೆನ್ಸ್ ಪೋಸ್ಟರ್ ಈಗ ಫ್ಯಾನ್ಸ್ ತಲೆಯಲ್ಲಿ ಹುಳ ಬಿಟ್ಟಿದೆ ಅಷ್ಟಕ್ಕೂ ಆ ಪೋಸ್ಟರ್ ಹಿಂದಿರೋ ಸೀಕ್ರೆಟ್ ಏನು..? ಎಲ್ಲಿ, ಯಾವಾಗ ನಡೀತಿದೆ ಆ ಬಿಗ್ ಇವೆಂಟ್..? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…
- ‘ದಿ ವಿಲನ್’ ಬಳಿಕ ಮತ್ತೆ ಒಂದಾದ ಕಿಚ್ಚ–ಪ್ರೇಮ್ ಕಾಂಬಿನೇಷನ್
- ಪಾಸ್ಪೋರ್ಟ್..ಸನ್ಗ್ಲಾಸ್ ಪೋಸ್ಟರ್ನಲ್ಲಿದೆ ಟೈಟಲ್ ಸುಳಿವು
- ಪ್ರೇಮ್ ನಿರ್ದೇಶನ.. ಕಿಚ್ಚನ ಆರ್ಭಟ.. ಟೈಟಲ್ಗೆ ಕ್ಷಣಗಣನೆ
- ನವೆಂಬರ್ 27ಕ್ಕೆ ಟೈಟಲ್ ಟೀಸರ್ ಲೋಕ ಅನಾವರಣ
ಸ್ಯಾಂಡಲ್ವುಡ್ನ ಬಾದ್ಷಾ ಕಿಚ್ಚ ಸುದೀಪ್ ತಮ್ಮ ಮುಂದಿನ ಸಿನಿಮಾದ ಬಿಗ್ ಅಪ್ಡೇಟ್ ಕೊಟ್ಟು ಅಭಿಮಾನಿಗಳಿಗೆ ಭರ್ಜರಿ ಗುಡ್ನ್ಯೂಸ್ ನೀಡಿದ್ದಾರೆ. ನಿರ್ದೇಶಕ ಪ್ರೇಮ್ ಜೊತೆಗಿನ ಹೊಸ ಸಿನಿಮಾದ ಟೈಟಲ್ ಟೀಸರ್ ಇದೇ ನವೆಂಬರ್ 27ರ ಶುಕ್ರವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಓರಿಯನ್ ಮಾಲ್ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಇನ್ಸ್ಟಾಗ್ರಾಮ್ನಲ್ಲಿ ಕಿಚ್ಚ ಹಂಚಿಕೊಂಡಿರುವ ಪೋಸ್ಟರ್ನಲ್ಲಿ, ಮರದ ಮೇಲೆ ಕಡು ಬಣ್ಣದ ಭಾರತೀಯ ಪಾಸ್ಪೋರ್ಟ್ ಹಾಗೂ ಅದರ ಮೇಲೆ ಕೆಂಪು ಹೃದಯದ ಆಕಾರದ ಸನ್ಗ್ಲಾಸ್ ಇಟ್ಟಿರುವ ದೃಶ್ಯ ಗಮನ ಸೆಳೆಯುತ್ತಿದ್ದು, ಟೈಟಲ್ ಏನಿರಬಹುದು ಎಂಬ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.
ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರೇಮ್ ನಡುವಿನ ಬಾಂಧವ್ಯ ಕೇವಲ ಸಿನಿಮಾಗೆ ಸೀಮಿತವಾದುದಲ್ಲ, ಇಬ್ಬರ ನಡುವೆ ಗಟ್ಟಿ ಸ್ನೇಹ ಮತ್ತು ಪರಸ್ಪರ ಗೌರವವಿದೆ. 2018ರಲ್ಲಿ ಶಿವರಾಜ್ಕುಮಾರ್ ಮತ್ತು ಸುದೀಪ್ ಅವರನ್ನು ಒಟ್ಟಿಗೆ ತಂದು ಪ್ರೇಮ್ ನಿರ್ದೇಶಿಸಿದ್ದ ‘ದಿ ವಿಲನ್’ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದಾದ ಬಳಿಕ 2026ರಲ್ಲಿ ಧ್ರುವ ಸರ್ಜಾ ನಟನೆಯ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದಲ್ಲಿ ಕಿಚ್ಚ ಸುದೀಪ್ ‘ಕಾಳ ಭೈರವ’ ಎಂಬ ಪವರ್ಫುಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಸಿನಿಮಾ ತೂಕ ಹೆಚ್ಚಿಸಿದ್ದರು. ಅಷ್ಟೇ ಅಲ್ಲ, ‘ಕೆಡಿ’ ಹಾಡಿನ ವಿವಾದದ ಸಂದರ್ಭದಲ್ಲೂ ಪ್ರೇಮ್ ಪರವಾಗಿ ಕಿಚ್ಚ ದನಿ ಎತ್ತಿ ನಿಂತಿದ್ದ ಅವರ ಬಾಂಧವ್ಯ ಇಂಡಸ್ಟ್ರಿಯಲ್ಲಿ ಸಾಕಷ್ಟು ಚರ್ಚೆಯಾಗಿತ್ತು.
‘ದಿ ವಿಲನ್’ ನಂತರ ಮತ್ತೊಮ್ಮೆ ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ಫುಲ್ ಫ್ಲೆಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವ ಈ ಪ್ರಾಜೆಕ್ಟ್, ಕಳೆದ ಸೆಪ್ಟೆಂಬರ್ನಲ್ಲಿ ಕಿಚ್ಚನ ಹುಟ್ಟುಹಬ್ಬದ ವೇಳೆ ಘೋಷಣೆಯಾದಾಗಿನಿಂದಲೂ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಹೊಸ ಪ್ರಪಂಚ, ಹೊಸ ಅಧ್ಯಾಯ, ಹೊಸ ಆರಂಭ ಎಂಬ ಅಡಿಬರಹದೊಂದಿಗೆ ಸದ್ದು ಮಾಡಿದ್ದ ಈ ಸಿನಿಮಾದ ಕಥಾಹಂದರ, ಟೈಟಲ್ ಹಾಗೂ ತಾರಾಗಣದ ಗುಟ್ಟನ್ನು ತಂಡ ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಟ್ಟಿದೆ. ಆದರೆ ಪಾಸ್ಪೋರ್ಟ್ ಮತ್ತು ಸ್ಟೈಲಿಶ್ ಕೂಲಿಂಗ್ ಗ್ಲಾಸ್ ಇರುವ ಈ ಪೋಸ್ಟರ್ ನೋಡಿದ ಫ್ಯಾನ್ಸ್, ಇದೊಂದು ಸ್ಟೈಲಿಶ್ ಮತ್ತು ಟ್ವಿಸ್ಟ್ಗಳಿರುವ ಕಥೆಯಿರಬಹುದೆಂದು ಲೆಕ್ಕಾಚಾರ ಹಾಕುತ್ತಿದ್ದಾರೆ.
ಒಂದು ಕಡೆ ಬಿಗ್ ಬಾಸ್ ಕನ್ನಡ ಸೀಸನ್ 13 ನಿರೂಪಣೆಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಕಿಚ್ಚ ಸುದೀಪ್, ಸಿನಿಮಾ ರಂಗದಲ್ಲೂ ಬ್ಯುಸಿಯಾಗಿದ್ದಾರೆ. ಅನೂಪ್ ಭಂಡಾರಿ ಜೊತೆಗಿನ ಬಿಲ್ಲ ರಂಗ ಬಾಷಾ ಹಾಗೂ ಕಳೆದ ಸೆಪ್ಟೆಂಬರ್ನಲ್ಲಿ ಘೋಷಣೆಯಾದ ಐತಿಹಾಸಿಕ ಕಥಾಹಂದರದ ದೇವರಾಯ ಸಿನಿಮಾಗಳ ನಡುವೆಯೇ ಪ್ರೇಮ್ ಜೊತೆಗಿನ ಹೊಸ ಚಿತ್ರದ ಟೈಟಲ್ ಟೀಸರ್ ಲಾಂಚ್ ಮಾಡುತ್ತಿರುವುದು ಸುದೀಪ್ ಫ್ಯಾನ್ಸ್ಗೆ ಹಬ್ಬದೂಟ ನೀಡಿದಂತಾಗಿದೆ.
ಸದ್ಯ ‘ಟೈಟಲ್ ಟೀಸರ್ ಅನೌನ್ಸ್ಮೆಂಟ್ ಡೇಟ್ ಸದ್ಯದಲ್ಲೇ’ ಎಂದು ತೇಲಿಸಿದ್ದ ಕಿಚ್ಚ ಈಗ ಅಧಿಕೃತ ದಿನಾಂಕ ಮತ್ತು ಸ್ಥಳವನ್ನು ಫಿಕ್ಸ್ ಮಾಡಿದ್ದಾರೆ. ನವೆಂಬರ್ 27ರ ಸಂಜೆ ಓರಿಯನ್ ಮಾಲ್ನಲ್ಲಿ ಕಿಚ್ಚ ಮತ್ತು ಪ್ರೇಮ್ ಜೋಡಿ ಯಾವ ಟೈಟಲ್ ಮೂಲಕ ಎಂಟ್ರಿ ಕೊಡುತ್ತಾರೆ..? ಟೀಸರ್ನಲ್ಲಿ ಏನೆಲ್ಲಾ ಸರ್ಪ್ರೈಸ್ ಇರಲಿದೆ ಎಂಬುದನ್ನು ತಿಳಿಯಲು ಸ್ಯಾಂಡಲ್ವುಡ್ ಮತ್ತು ಕಿಚ್ಚನ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





