ಮಂಗಳೂರು: ಮಂಗಳೂರಿನ ಜೋಕಟ್ಟೆ ಬಳಿಯ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಬುಧವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 9 ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಜೋಕಟ್ಟೆಯಲ್ಲಿರುವ MRPLನ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಟೆಸ್ಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಮಧ್ಯಾಹ್ನ ಸುಮಾರು 12.15ರ ವೇಳೆಗೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಶಬ್ಧ ಕೇಳಿಸಿದ್ದು, ಹಲವು ಕಡೆ ಮನೆಗಳು ಕಂಪಿಸಿದ ಅನುಭವವಾಗಿದೆ. ಘಟನೆಯ ಬಳಿಕ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
9 ಕಾರ್ಮಿಕರಿಗೆ ಗಾಯ
ಸ್ಫೋಟದಲ್ಲಿ ಒಟ್ಟು 9 ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸುರತ್ಕಲ್ ನಿವಾಸಿ ರಾಜೇಶ್ ಅವರಿಗೆ ಸುಮಾರು ಶೇ.35ರಷ್ಟು ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಸಾದ್, ಇಂದ್ರಜೀತ್ ಮತ್ತು ರಾಮನ್ ಅವರನ್ನು ಎಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆರೋಮ್, ಜಯರಾಮ್, ಅವಿನಾಶ್ ಹಾಗೂ ಅಕ್ಷಯ್ ಸೇರಿದಂತೆ ಇತರ ಗಾಯಾಳುಗಳನ್ನು MRPL ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಗಾಯಾಳುಗಳ ಆರೋಗ್ಯ ಸ್ಥಿತಿಯನ್ನು ವೈದ್ಯರು ಮೇಲ್ವಿಚಾರಣೆ ಮಾಡುತ್ತಿದ್ದು, ಸದ್ಯ ಯಾರಿಗೂ ಪ್ರಾಣಾಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಪ್ಪಿದ ಭಾರೀ ಅನಾಹುತ?
ಘಟನೆ ನಡೆದ ಸಮಯದಲ್ಲಿ MRPL ಘಟಕದಲ್ಲಿ ಕಾರ್ಮಿಕರ ಸಂಖ್ಯೆ ಕಡಿಮೆ ಇದ್ದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ ಎನ್ನಲಾಗಿದೆ. ಬೆಳಗ್ಗೆ 11.30ರ ಸುಮಾರಿಗೆ ಶಿಫ್ಟ್ ಬದಲಾವಣೆಯಾಗಿದ್ದರಿಂದ ಹಲವು ಕಾರ್ಮಿಕರು ಘಟಕದಿಂದ ಹೊರಗೆ ತೆರಳಿದ್ದರು. ಇದರಿಂದ ಸ್ಫೋಟದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಸ್ಥಳದಲ್ಲಿರಲಿಲ್ಲ ಎಂದು ತಿಳಿದುಬಂದಿದೆ.
ಒಂದೇ ವೇಳೆ ಹೆಚ್ಚಿನ ಕಾರ್ಮಿಕರು ಘಟಕದೊಳಗೆ ಇದ್ದಿದ್ದರೆ ಅಪಾಯದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ, SDRF ಭೇಟಿ
ಸ್ಫೋಟದ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಗ್ನಿಶಾಮಕ ದಳದ ಐದು ವಾಹನಗಳು, SDRF ತಂಡಗಳು ಹಾಗೂ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿ ನಿಯಂತ್ರಣಕ್ಕೆ ತರಲು ತುರ್ತು ಕಾರ್ಯಾಚರಣೆ ನಡೆಸಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರ್ ಸುದೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ನರ್ವಡೆ ವಿನಾಯಕ್ ಕಾರ್ಬಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ಘಟನೆಯ ಕುರಿತು ಮಾಹಿತಿ ನೀಡಿ, MRPLನ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಟೆಸ್ಟಿಂಗ್ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಯುಟಿ ಖಾದರ್ ಹೇಳಿದ್ದೇನು?
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕೂಡ ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ. MRPLನಲ್ಲಿ ಟೆಸ್ಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ್ದು, ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಸ್ಫೋಟದ ಸದ್ದಿಗೆ ಬೆಚ್ಚಿಬಿದ್ದ ಜನ
MRPLನಲ್ಲಿ ಸಂಭವಿಸಿದ ಭಾರೀ ಸ್ಫೋಟದ ಶಬ್ಧವು ಸುತ್ತಮುತ್ತಲಿನ ಹಲವು ಪ್ರದೇಶಗಳಿಗೂ ಕೇಳಿಸಿದೆ. ಪಣಂಬೂರು, ಕಾವೂರು, ಸುರತ್ಕಲ್ ಹಾಗೂ ಜೋಕಟ್ಟೆ ಭಾಗದ ಕೆಲವೆಡೆ ಮನೆಗಳು ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆ ಸಿಸಿಟಿವಿ ದೃಶ್ಯಗಳಲ್ಲೂ ಸೆರೆಯಾಗಿದೆ ಎನ್ನಲಾಗಿದ್ದು, ಭಾರೀ ಶಬ್ಧದಿಂದ ಗ್ರಾಮಸ್ಥರು ಕೆಲಕಾಲ ಆತಂಕಕ್ಕೊಳಗಾಗಿದ್ದರು.





