ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯರ ಅನುಮತಿಯಿಲ್ಲದೆ ಅಶ್ಲೀಲವಾಗಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪಿಗೆ ಕರ್ನಾಟಕ ಹೈಕೋರ್ಟ್ ಸರಿಯಾದ ಚಾಟಿ ಬೀಸಿದೆ. ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ದಿಗಂತ್ ಬಿ.ಕೆ. ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ.
ಹೈಕೋರ್ಟ್‌ನ ಖಡಕ್ ಪ್ರಶ್ನೆಗಳು
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಆರೋಪಿಯ ಕೃತ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. “ನೀವು ಮಹಿಳೆಯರ ಮುಂಭಾಗ ಮತ್ತು ಹಿಂಭಾಗದಿಂದ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕುತ್ತೀರಾ? ನೀವು ಮಹಿಳೆಯರನ್ನು ಎಲ್ಲಿಯೂ ಸುರಕ್ಷಿತವಾಗಿರಲು ಬಿಡುವುದಿಲ್ಲವೇ? ಯಾವ ರೀತಿಯ ಮನುಷ್ಯರು ನೀವು, ನಿಮಗೆ ನಾಚಿಕೆಯಾಗುವುದಿಲ್ಲವೇ?” ಎಂದು ನ್ಯಾಯಪೀಠವು ಖಾರವಾಗಿ ಪ್ರಶ್ನಿಸಿದೆ.
ಆರೋಪಿಯ ಪರ ವಕೀಲರು, “ಯಾವುದೇ ಸಂತ್ರಸ್ತ ಮಹಿಳೆಯರು ದೂರು ನೀಡಿಲ್ಲ, ಪೊಲೀಸರೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದಾರೆ” ಎಂದು ತಾಂತ್ರಿಕ ವಾದ ಮಂಡಿಸಿದರು. ಆದರೆ ಇದನ್ನು ತಳ್ಳಿಹಾಕಿದ ಹೈಕೋರ್ಟ್, “ಇಂತಹ ಗಂಭೀರ ಪ್ರಕರಣಗಳಲ್ಲಿ ಕೇವಲ ತಾಂತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ತಾಂತ್ರಿಕತೆಗಿಂತ ನೈತಿಕತೆ ಮತ್ತು ಮಹಿಳೆಯರ ಸುರಕ್ಷತೆ ಮುಖ್ಯ” ಎಂದು ಗುಡುಗಿದೆ.
ಏನಿದು ಪ್ರಕರಣ?
ದಿಗಂತ್ ಬಿ.ಕೆ. ಎಂಬಾತ ‘ಬೆಂಗಳೂರು ಮೆಟ್ರೋ ಚಿಕ್ಸ್’ ಎಂಬ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಮೆಟ್ರೋದಲ್ಲಿ ಸಂಚರಿಸುವ ಮಹಿಳೆಯರ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದ. ಈತನ ಖಾತೆಗೆ ಸಾವಿರಾರು ಫಾಲೋವರ್‌ಗಳಿದ್ದರು. 2025ರ ಮೇ ತಿಂಗಳಲ್ಲಿ ಬನಶಂಕರಿ ಪೊಲೀಸರು ಈತನನ್ನು ಬಂಧಿಸಿ, 14 ವಿಡಿಯೋಗಳನ್ನು ವಶಪಡಿಸಿಕೊಂಡಿದ್ದರು. ಪ್ರಸ್ತುತ ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.





