2026ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಮಣಿಸಿದ ಸ್ಪೇನ್, ಎರಡನೇ ಬಾರಿಗೆ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನ್ಯೂಜೆರ್ಸಿಯ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ನಡೆದ ಟ್ರೋಫಿ ವಿತರಣಾ ಸಮಾರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೋ ಉಪಸ್ಥಿತರಿದ್ದು, ಸ್ಪೇನ್ ತಂಡಕ್ಕೆ ವಿಶ್ವಕಪ್ ಟ್ರೋಫಿಯನ್ನು ಪ್ರದಾನ ಮಾಡಿದರು. ಆದರೆ ಟ್ರೋಫಿ ವಿತರಣೆಯ ನಂತರ ನಡೆದ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಸಾಮಾನ್ಯವಾಗಿ ಟ್ರೋಫಿ ವಿತರಿಸಿದ ಬಳಿಕ ಗಣ್ಯರು ವೇದಿಕೆಯಿಂದ ಕೆಳಗಿಳಿದು, ವಿಜೇತ ತಂಡದ ಆಟಗಾರರು ಟ್ರೋಫಿ ಎತ್ತಿಹಿಡಿದು ಸಂಭ್ರಮಿಸುವುದು ಸಂಪ್ರದಾಯ. ಆದರೆ ಈ ಬಾರಿ ಡೊನಾಲ್ಡ್ ಟ್ರಂಪ್ ವೇದಿಕೆಯಿಂದ ತಕ್ಷಣ ಕೆಳಗಿಳಿಯದೆ ಸ್ಪೇನ್ ಆಟಗಾರರ ನಡುವೆಯೇ ನಿಂತು ಫೋಟೋ ಹಾಗೂ ವಿಡಿಯೊಗಳಿಗೆ ಪೋಸ್ ನೀಡಲು ಮುಂದಾದರು ಎನ್ನಲಾಗಿದೆ.
ಟ್ರಂಪ್ ಸ್ಪೇನ್ ನಾಯಕನ ಪಕ್ಕದಲ್ಲೇ ನಿಲ್ಲಲು ಯತ್ನಿಸಿದ ವೇಳೆ, ತಂಡದ ನಾಯಕ ಕೈ ಸನ್ನೆ ಮೂಲಕ ಸ್ವಲ್ಪ ಪಕ್ಕಕ್ಕೆ ಸರಿಯುವಂತೆ ಸೂಚಿಸಿರುವ ದೃಶ್ಯಗಳು ವೈರಲ್ ಆಗಿವೆ. ಬಳಿಕ ಟ್ರಂಪ್ ಸ್ವಲ್ಪ ದೂರ ಸರಿದು ಆಟಗಾರರ ಸಾಲಿನ ಬಲಭಾಗದಲ್ಲಿ ನಿಂತರೂ, ವೇದಿಕೆಯಿಂದ ಕೆಳಗಿಳಿಯದೆ ಕೆಲ ಕ್ಷಣಗಳ ಕಾಲ ಅಲ್ಲೇ ಉಳಿದರು.
ಈ ಬೆಳವಣಿಗೆಯನ್ನು ಗಮನಿಸಿದ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೋ ಕೂಡಲೇ ಟ್ರಂಪ್ ಅವರ ಬಳಿ ತೆರಳಿ, ಆಟಗಾರರು ಸಂಭ್ರಮಾಚರಣೆ ಆರಂಭಿಸಲಿದ್ದಾರೆ ಎಂದು ಸೂಚಿಸಿ ವೇದಿಕೆಯಿಂದ ಕೆಳಗಿಳಿಯುವಂತೆ ಮನವಿ ಮಾಡಿದರೆಂದು ವರದಿಯಾಗಿದೆ. ಕೆಲ ಕ್ಷಣಗಳ ನಂತರ ಟ್ರಂಪ್ ಅನಿವಾರ್ಯವಾಗಿ ವೇದಿಕೆಯಿಂದ ಕೆಳಗಿಳಿದರು.
ಈ ಸಂದರ್ಭ ಕ್ರೀಡಾಂಗಣದಲ್ಲಿದ್ದ ಕೆಲ ಅಭಿಮಾನಿಗಳು ಟ್ರಂಪ್ ವಿರುದ್ಧ “ಬೂ” ಎಂದು ಕೂಗಿದ ದೃಶ್ಯಗಳು ಸಹ ವಿಡಿಯೊಗಳಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಹಂಚಿಕೊಳ್ಳಲಾಗುತ್ತಿದೆ. ಟ್ರಂಪ್ ಮಾತ್ರ ಅಭಿಮಾನಿಗಳ ಪ್ರತಿಕ್ರಿಯೆಯನ್ನು ಲೆಕ್ಕಿಸದೆ ತಮ್ಮ ನಡವಳಿಕೆಯನ್ನು ಮುಂದುವರಿಸಿದಂತೆ ಕಾಣಿಸಿಕೊಂಡಿದ್ದಾರೆ.
ಘಟನೆಯ ವಿಡಿಯೊ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು, “ಇದು ಸ್ಪೇನ್ ತಂಡದ ಸಂಭ್ರಮಾಚರಣೆಯ ಕ್ಷಣವಾಗಿದ್ದು, ರಾಜಕೀಯ ನಾಯಕರು ಆಟಗಾರರ ಸಂಭ್ರಮಕ್ಕೆ ಅಡ್ಡಿಯಾಗಬಾರದು” ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಟ್ರಂಪ್ ಅವರ ನಡೆಗೆ ಬೆಂಬಲ ವ್ಯಕ್ತಪಡಿಸಿದವರೂ ಇದ್ದಾರೆ.
ಇನ್ನೂ ಹಲವರು ಹಾಸ್ಯಮಯವಾಗಿ ಪ್ರತಿಕ್ರಿಯಿಸಿ, “ಒಂದು ವೇಳೆ ಅಮೆರಿಕವೇ ವಿಶ್ವಕಪ್ ಗೆದ್ದಿದ್ದರೆ ಟ್ರಂಪ್ ಸ್ವತಃ ಟ್ರೋಫಿಯನ್ನು ಎತ್ತಿಹಿಡಿದು ಸಂಭ್ರಮಿಸುತ್ತಿದ್ದರು” ಎಂದು ವ್ಯಂಗ್ಯವಾಡಿದ್ದಾರೆ. ಈ ಘಟನೆ ವಿಶ್ವಕಪ್ ವಿಜಯಕ್ಕಿಂತಲೂ ಹೆಚ್ಚು ಚರ್ಚೆಯಾಗುವಂತೆ ಮಾಡಿದ್ದು, ಟ್ರೋಫಿ ವಿತರಣಾ ಸಮಾರಂಭದ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿ ಪರಿಣಮಿಸಿದೆ.





