ನವದೆಹಲಿ: ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವೊಂದಕ್ಕೆ ರಣಹದ್ದು ಡಿಕ್ಕಿ ಹೊಡೆದ ಘಟನೆಯಲ್ಲಿ ಸುಮಾರು 175 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಏರ್‌ಬಸ್ A320 ವಿಮಾನವು 4,000 ಅಡಿ ಎತ್ತರದಲ್ಲಿ ರಾಂಚಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರಣಹದ್ದಿನ ಡಿಕ್ಕಿಯಿಂದ ವಿಮಾನದ ಮುಂಭಾಗಕ್ಕೆ ಹಾನಿಯಾದರೂ, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದ ನಿರ್ದೇಶಕ ಆರ್ ಆರ್ ಮೌರ್ಯ ಅವರು ಮಾಹಿತಿ ನೀಡಿದ್ದಾರೆ. “ಪಾಟ್ನಾದಿಂದ ರಾಂಚಿಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ 3,000 ರಿಂದ 4,000 ಅಡಿ ಎತ್ತರದಲ್ಲಿ ರಣಹದ್ದು ಡಿಕ್ಕಿಯಾಗಿದೆ. ಈ ಘಟನೆಯಿಂದ ವಿಮಾನಕ್ಕೆ ಹಾನಿಯಾಯಿತು. ಪೈಲಟ್ ತಕ್ಷಣವೇ ತುರ್ತು ಭೂಸ್ಪರ್ಶಕ್ಕೆ ತೀರ್ಮಾನಿಸಿದರು. ಈ ಕಾರಣದಿಂದ ವಿಮಾನವನ್ನು ರಾಂಚಿಯಲ್ಲಿ ತುರ್ತಾಗಿ ಇಳಿಸಲಾಯಿತು,” ಎಂದು ಅವರು ಹೇಳಿದ್ದಾರೆ.
ವಿಮಾನದ ಮುಂಭಾಗದಲ್ಲಿ ಉಂಟಾದ ಹಾನಿಯನ್ನು ಎಂಜಿನಿಯರ್‌ಗಳ ತಂಡವು ಪರಿಶೀಲಿಸುತ್ತಿದೆ. ಈ ವಿಮಾನವು ರಾಂಚಿಯಿಂದ ಕೋಲ್ಕತ್ತಾಕ್ಕೆ ತೆರಳಬೇಕಿತ್ತು, ಆದರೆ ಘಟನೆಯಿಂದಾಗಿ ಕೋಲ್ಕತ್ತಾಗೆ ಹೋಗಲು ತಡೆಯೊಡ್ಡಿತ್ತು. ಇಂಡಿಗೋ ಈ ಘಟನೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಈ ಘಟನೆಯಿಂದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.
ಈ ಘಟನೆಯು ಕಳೆದ 15 ದಿನಗಳಲ್ಲಿ ಇಂಡಿಗೋ ವಿಮಾನಕ್ಕೆ ಸಂಭವಿಸಿದ ಎರಡನೇ ಘಟನೆಯಾಗಿದೆ. ಇದಕ್ಕೂ ಮೊದಲು, ಮೇ 21, 2025 ರಂದು ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವು ಆಲಿಕಲ್ಲು ಮಳೆಗೆ ಸಿಲುಕಿತ್ತು. ಆದರೆ, ಆ ವಿಮಾನವು ಶ್ರೀನಗರದ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತ್ತು.





