ನವದೆಹಲಿ: ಜಾಗತಿಕ ಆರ್ಥಿಕ ಭೂಪಟದಲ್ಲಿ ಭಾರತ ಮತ್ತೊಂದು ಅತಿದೊಡ್ಡ ಮೈಲಿಗಲ್ಲನ್ನು ಸ್ಥಾಪಿಸಿದೆ. ಭಾರತ ಮತ್ತು ಐರೋಪ್ಯ ಒಕ್ಕೂಟದ (EU) ನಡುವೆ ಏರ್ಪಟ್ಟಿರುವ ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ಪ್ರಧಾನಿ ನರೇಂದ್ರ ಮೋದಿ ಅವರು ‘ಮದರ್ ಆಫ್ ಆಲ್ ಡೀಲ್ಸ್’ (ಎಲ್ಲಾ ಒಪ್ಪಂದಗಳ ತಾಯಿ) ಎಂದು ಬಣ್ಣಿಸಿದ್ದಾರೆ. ಈ ಒಪ್ಪಂದವು ಭಾರತೀಯ ಉತ್ಪಾದನಾ ವಲಯ ಮತ್ತು ಸೇವಾ ವಲಯಕ್ಕೆ ಹೊಸ ಭಾಷ್ಯ ಬರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಜಿಡಿಪಿಯ ಶೇ. 25ರಷ್ಟು ಪಾಲುದಾರಿಕೆ:
ಸೋಮವಾರ ನಡೆದ ಈ ಐತಿಹಾಸಿಕ ಒಪ್ಪಂದದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಇದು ವಿಶ್ವದ ಎರಡು ಪ್ರಮುಖ ಆರ್ಥಿಕತೆಗಳ ನಡುವಿನ ಪರಿಪೂರ್ಣ ಪಾಲುದಾರಿಕೆಯ ಉದಾಹರಣೆಯಾಗಿದೆ. ಈ ಒಪ್ಪಂದವು ಜಾಗತಿಕ ಒಟ್ಟು ಆಂತರಿಕ ಉತ್ಪನ್ನದ (GDP) ಶೇಕಡ 25ರಷ್ಟು ಮತ್ತು ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ. ಇದು ಭಾರತ ಮತ್ತು ಯುರೋಪಿನ ಜನರಿಗೆ ಬೃಹತ್ ಆರ್ಥಿಕ ಅವಕಾಶಗಳನ್ನು ತೆರೆದಿಡಲಿದೆ ಎಂದು ಮೋದಿ ತಿಳಿಸಿದ್ದಾರೆ.
ಈ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದಲ್ಲಿ ಉತ್ಪಾದನಾ ವಲಯಕ್ಕೆ ಭಾರಿ ಉತ್ತೇಜನ ಸಿಗಲಿದ್ದು, ಸೇವಾ ವಲಯವೂ ಗಣನೀಯವಾಗಿ ವಿಸ್ತರಿಸಲಿದೆ. “ಈ ಒಪ್ಪಂದವು ಹೂಡಿಕೆದಾರರು ಮತ್ತು ಉದ್ಯಮಿಗಳಲ್ಲಿ ಭಾರತದ ಮೇಲೆ ಭರವಸೆಯನ್ನು ಹೆಚ್ಚಿಸಲಿದೆ. ಇದು ಬ್ರಿಟನ್ ಜೊತೆಗಿನ ಒಪ್ಪಂದಗಳಿಗೆ ಪೂರಕವಾಗಿದ್ದು, ನಮ್ಮ ಪ್ರಜಾಪ್ರಭುತ್ವದ ಬದ್ಧತೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ” ಎಂದು ಮೋದಿ ವಿವರಿಸಿದರು.
ಭಾರತದ ಪ್ರಮುಖ ಬೇಡಿಕೆಗಳು
ಈ ಒಪ್ಪಂದದ ಅಡಿಯಲ್ಲಿ ಭಾರತವು ತನ್ನ ಜವಳಿ, ಚರ್ಮೋದ್ಯಮ, ಆಭರಣ ಮತ್ತು ಕರಕುಶಲ ಉತ್ಪನ್ನಗಳಿಗೆ ಯುರೋಪಿನ ಮಾರುಕಟ್ಟೆಯಲ್ಲಿ ಸುಂಕರಹಿತ ಪ್ರವೇಶ (Zero-duty access) ಪಡೆಯಲು ಒತ್ತಾಯಿಸಿದೆ. ಇದು ಭಾರತದ ರಫ್ತುದಾರರಿಗೆ ದೊಡ್ಡ ವರದಾನವಾಗಲಿದೆ. ಈಗಾಗಲೇ ಬ್ರಿಟನ್, ಯುಎಇ ಮತ್ತು ಆಸ್ಟ್ರೇಲಿಯಾ ದೇಶಗಳು ಭಾರತದ ಈ ಬೇಡಿಕೆಗೆ ಒಪ್ಪಿದ್ದು, ಈಗ ಯುರೋಪಿಯನ್ ಒಕ್ಕೂಟವೂ ಈ ಸಾಲಿಗೆ ಸೇರಿದೆ.
ಗ್ರಾಹಕರಿಗೆ ಏನು ಸಿಗಲಿದೆ ?
ಈ ಎಫ್‌ಟಿಎ (FTA) ಜಾರಿಗೆ ಬಂದ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ಉತ್ಪನ್ನಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಆಮದು ಸುಂಕ ಇಳಿಕೆಯಾಗುವುದರಿಂದ ಪ್ರೀಮಿಯಂ ಕಾರುಗಳ ಬೆಲೆ ತಗ್ಗಲಿದೆ. ಯುರೋಪಿನಿಂದ ಆಮದಾಗುವ ವೈನ್ ಮತ್ತು ಮಧ್ಯದ ಉತ್ಪನ್ನಗಳು ಅಗ್ಗವಾಗುವ ಜೊತೆಗೆ ಯುರೋಪಿನ ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ತಂತ್ರಜ್ಞಾನಗಳು ಸುಲಭ ದರದಲ್ಲಿ ಲಭ್ಯವಾಗಲಿವೆ.
ಸೇವಾ ವಲಯದಲ್ಲಿ ನಿಯಮಗಳ ಸಡಿಲಿಕೆಯು ಭಾರತೀಯ ಐಟಿ (IT) ವೃತ್ತಿಪರರು ಮತ್ತು ನುರಿತ ಕಾರ್ಮಿಕರಿಗೆ ಯುರೋಪಿನಲ್ಲಿ ಕೆಲಸ ಮಾಡಲು ಹೆಚ್ಚಿನ ಅವಕಾಶಗಳನ್ನು ಒದಗಿಸಲಿದೆ. ಅಮೆರಿಕ ಮತ್ತು ಚೀನಾದ ನಡುವಿನ ವ್ಯಾಪಾರ ಸಮರದ ನಡುವೆ, ಭಾರತ ಮತ್ತು ಯುರೋಪ್ ಕೈಜೋಡಿಸಿರುವುದು ಜಾಗತಿಕ ಆರ್ಥಿಕ ಸ್ಥಿರತೆಗೆ ಹೊಸ ದಿಕ್ಸೂಚಿಯಾಗಿದೆ.





