ಚಿತ್ರಕೂಟ (ಉತ್ತರ ಪ್ರದೇಶ): ಶಿಕ್ಷಕಿಯೊಬ್ಬರು ಶಾಲೆಯನ್ನೇ ತಮ್ಮ ವೈಯಕ್ತಿಕ ಸೇವೆಗೆ ಬಳಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯಲ್ಲಿ ನಡೆದಿದೆ. ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿಯೊಬ್ಬರು ಪುಟ್ಟ ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ವಿವರ
ಚಿತ್ರಕೂಟದ ಕರ್ವಿ ಪ್ರದೇಶದ ನಯಾ ಬಜಾರ್‌ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಶಾಲೆಯ ಮುಖ್ಯ ಶಿಕ್ಷಕಿ ಮಧು ಕುಮಾರಿ ಎಂಬುವರು ಶಾಲೆಯ ಕೊಠಡಿಯ ನೆಲದ ಮೇಲೆ ಆರಾಮವಾಗಿ ಮಲಗಿದ್ದಾರೆ. ಅವರ ಸುತ್ತಲೂ ಇರುವ ಮೂರ್ನಾಲ್ಕು ವಿದ್ಯಾರ್ಥಿನಿಯರು ಶಿಕ್ಷಕಿಯ ಕೈ ಮತ್ತು ಕಾಲುಗಳನ್ನು ಒತ್ತುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ये मैडम सिस्टम पर बोझ हैं. सरकार से इन्हें लाख रुपये
मिलता है, बच्चों को पढ़ाने के लिए. लेकिन ये स्कूल के बच्चों से मसाज करा रही है.सरकार को ऐसे लोगों को मसाज कराने के लिए हमेशा के लिए छुट्टी कर देनी चाहिए. pic.twitter.com/h8XKNiXSX4
— Priya singh (@priyarajputlive) March 6, 2026
ಲಟ್ಟಣಿಗೆಯಿಂದ ಮಸಾಜ್!
ಈ ವಿಡಿಯೋದಲ್ಲಿ ಅತ್ಯಂತ ಅಚ್ಚರಿ ಮತ್ತು ನಾಚಿಕೆಗೇಡಿನ ವಿಷಯವೆಂದರೆ, ಒಬ್ಬ ವಿದ್ಯಾರ್ಥಿನಿ ಅಡುಗೆಗೆ ಬಳಸುವ ಲಟ್ಟಣಿಗೆಯನ್ನು (Rolling Pin) ಹಿಡಿದು ಶಿಕ್ಷಕಿಯ ಬೆನ್ನು ಮತ್ತು ಕಾಲುಗಳಿಗೆ ಮಸಾಜ್ ಮಾಡುತ್ತಿರುವುದು. ಈ ಸಮಯದಲ್ಲಿ ಶಿಕ್ಷಕಿ ಮಧು ಕುಮಾರಿ ಅವರು ಯಾವುದೇ ಅಳುಕಿಲ್ಲದೆ ಆರಾಮವಾಗಿ ಮಲಗಿ ಮೊಬೈಲ್ ಫೋನ್ ಬಳಸುತ್ತಿದ್ದಾರೆ. ಪಾಠ ಮಾಡಬೇಕಾದ ಸಮಯದಲ್ಲಿ ಮಕ್ಕಳನ್ನು ಈ ರೀತಿ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿರುವುದು ಶಿಕ್ಷಣ ವ್ಯವಸ್ಥೆಯ ದುಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ.
ಸಾರ್ವಜನಿಕರ ಆಕ್ರೋಶ
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಿಕ್ಷಕಿಯ ವಿರುದ್ಧ ಕಿಡಿಕಾರಿದ್ದಾರೆ. ಶಾಲೆಗಳು ಮಕ್ಕಳ ಭವಿಷ್ಯ ರೂಪಿಸುವ ಸ್ಥಳವಾಗಬೇಕೇ ಹೊರತು ಶಿಕ್ಷಕರ ಮಸಾಜ್ ಪಾರ್ಲರ್ ಆಗಬಾರದು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇಂತಹ ಶಿಕ್ಷಕರಿಂದ ಮಕ್ಕಳು ಏನನ್ನು ಕಲಿಯಲು ಸಾಧ್ಯ ? ಇವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಶಿಕ್ಷಣ ಇಲಾಖೆಯ ಪ್ರತಿಕ್ರಿಯೆ
ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ತನಿಖೆಗೆ ಆದೇಶಿಸಲಾಗಿದೆ. ಶಾಲೆಯ ಶಿಸ್ತು ಮತ್ತು ಮಕ್ಕಳ ಘನತೆಗೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ. ತನಿಖೆಯಲ್ಲಿ ದೋಷಿ ಎಂದು ಸಾಬೀತಾದರೆ ಮುಖ್ಯಶಿಕ್ಷಕಿಯ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.





