ಬೆಳಗಾವಿ ,ಜುಲೈ.25: ಐತಿಹಾಸಿಕ ಸಂಕೇಶ್ವರ ಶ್ರೀ ಮಹಾಲಕ್ಷ್ಮಿ ದೇವಿ ಮಹಾಜಾತ್ರೆಗೆ ಶನಿವಾರ ಅಧಿಕೃತ ಚಾಲನೆ ದೊರೆಯಿತು. 2027ರಲ್ಲಿ ನಡೆಯಲಿರುವ 11 ವರ್ಷಗಳಿಗೊಮ್ಮೆ ನಡೆಯುವ ಮಹಾಜಾತ್ರೆಯ ಅಂಗವಾಗಿ ಜರುಗಿದ ‘ಕೋಣ ಬಿಡುವ’ ಅಪರೂಪದ ಧಾರ್ಮಿಕ ಸಂಪ್ರದಾಯ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಭಾವ, ವೈಭವ ಮತ್ತು ಸಂಭ್ರಮದಿಂದ ನೆರವೇರಿತು. ಈ ವಿಶೇಷ ಆಚರಣೆಯೊಂದಿಗೆ ಮಹಾಜಾತ್ರೆಯ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದು, ಸಂಕೇಶ್ವರ ಪಟ್ಟಣ ಹಬ್ಬದ ವಾತಾವರಣದಲ್ಲಿ ಕಂಗೊಳಿಸಿತು.
ಬೆಳಗ್ಗೆಯೇ ಜಾತ್ರೆಯ ಹಕ್ಕುದಾರರಾದ ಸಂತೋಷ ಹವಾಲ್ದಾರ್ ಅವರ ನಿವಾಸದಲ್ಲಿ ಕೋಣಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹೂವುಗಳು, ಅಲಂಕಾರಿಕ ವಸ್ತ್ರಗಳು ಹಾಗೂ ಸಾಂಪ್ರದಾಯಿಕ ಅಲಂಕಾರಗಳಿಂದ ರಾಜನಂತೆ ಸಿಂಗರಿಸಲಾದ ಕೋಣವನ್ನು ಮೆರವಣಿಗೆಯ ಮೂಲಕ ಬುಸಾರ ಲಕ್ಷ್ಮಿ ಮಂದಿರ, ಹಕ್ಕುದಾರರು ಮತ್ತು ಖಾತೆದಾರ ಗೌಡರ ಮನೆ, ಶ್ರೀ ಶಂಕರಲಿಂಗ ದೇವಸ್ಥಾನದ ಮಾರ್ಗವಾಗಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಕರೆತರಲಾಯಿತು.
ಮಾರ್ಗದುದ್ದಕ್ಕೂ ಭಕ್ತರು ಕೋಣದ ಮೇಲೆ ಪುಷ್ಪವೃಷ್ಟಿ ಮಾಡಿದರು. ಮಹಿಳೆಯರು ಆರತಿ ಬೆಳಗಿ ಪೂಜೆ ಸಲ್ಲಿಸಿದರೆ, ಯುವಕರು ಡೊಳ್ಳು, ತಾಶಾ, ನಗಾರಿ ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಮೆರವಣಿಗೆಯ ವೈಭವ ಹೆಚ್ಚಿಸಿದರು. “ಜೈ ಮಹಾಲಕ್ಷ್ಮಿ” ಘೋಷಣೆಗಳಿಂದ ಸಂಕೇಶ್ವರ ಪಟ್ಟಣವೇ ಭಕ್ತಿಮಯ ವಾತಾವರಣದಲ್ಲಿ ಮೊಳಗಿತು.
ದೇವಸ್ಥಾನದ ಆವರಣದಲ್ಲಿ ಜಾತ್ರಾ ಸಮಿತಿಯ ಸದಸ್ಯರು ಕೋಣಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಜಾತ್ರೆಯ ಸೂತ್ರಧಾರರಾದ ದೀಲಿಪ ಅಸೂದೆ ಅವರು ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಕೋಣಕ್ಕೆ ಪಟ್ಟಾಭಿಷೇಕ ಮಾಡಿ ಪೂಜೆ ಸಲ್ಲಿಸಿದ ನಂತರ ಅದನ್ನು ವಿಧಿವತ್ತಾಗಿ ಬಿಡುಗಡೆ ಮಾಡಲಾಯಿತು. ಈ ಅಪರೂಪದ ಧಾರ್ಮಿಕ ಆಚರಣೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ದೇವಾಲಯದ ಆವರಣದಲ್ಲಿ ನೆರೆದಿದ್ದರು.
‘ಕೋಣ ಬಿಡುವ’ ಸಂಪ್ರದಾಯವು ಶ್ರೀ ಮಹಾಲಕ್ಷ್ಮಿ ಮಹಾಜಾತ್ರೆಯ ಅತ್ಯಂತ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಈ ಸಂಪ್ರದಾಯದ ಮೂಲಕ ಮಹಾಜಾತ್ರೆಯ ಸಿದ್ಧತೆಗಳು ಆರಂಭವಾಗಿದೆ. ಗ್ರಾಮದ ಸುಭಿಕ್ಷ, ಸಮೃದ್ಧಿ ಹಾಗೂ ಜನರ ಒಳಿತಿಗಾಗಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಕೋಣವನ್ನು ದೇವಿಯ ಪ್ರತೀಕವಾಗಿ ಗೌರವಿಸಿ ಪಟ್ಟಾಭಿಷೇಕ ಮಾಡುವ ಈ ಆಚರಣೆ ಸಂಕೇಶ್ವರದ ಧಾರ್ಮಿಕ ಹಾಗೂ ಜನಪದ ಪರಂಪರೆಯ ಜೀವಂತ ಸಂಕೇತವಾಗಿದೆ.
ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿಯ ಪದಾಧಿಕಾರಿಗಳು, ಹಕ್ಕುದಾರರು, ಖಾತೆದಾರ ಗೌಡರು, ವಿವಿಧ ಮಠ-ದೇವಾಲಯಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗೂ ಸಂಕೇಶ್ವರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಭಾಗವಹಿಸಿದರು. ಕಾರ್ಯಕ್ರಮ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಿತ್ತು.
ಜಾತ್ರಾ ಸಮಿತಿಯ ಪ್ರಕಾರ, 2027ರಲ್ಲಿ ನಡೆಯಲಿರುವ ಶ್ರೀ ಮಹಾಲಕ್ಷ್ಮಿ ದೇವಿ ಮಹಾಜಾತ್ರೆಯನ್ನು ಈ ಬಾರಿ ಹಿಂದಿನ ಎಲ್ಲ ಜಾತ್ರೆಗಳಿಗಿಂತಲೂ ಹೆಚ್ಚು ವಿಜೃಂಭಣೆಯಿಂದ ಆಚರಿಸುವ ಗುರಿ ಹೊಂದಲಾಗಿದೆ. 11 ವರ್ಷಗಳ ನಿರೀಕ್ಷೆಯ ಬಳಿಕ ನಡೆಯಲಿರುವ ಈ ಮಹೋತ್ಸವ ಸಂಕೇಶ್ವರದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಜನಪದ ಪರಂಪರೆಯನ್ನು ಮತ್ತೊಮ್ಮೆ ದೇಶದ ಗಮನಕ್ಕೆ ತರುವ ನಿರೀಕ್ಷೆಯಿದೆ.





