ನಾಸಿಕ್: ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ವಿಶಿಷ್ಟ ರೀತಿಯ ಪ್ರತಿಭಟನೆ ನಡೆದಿದೆ. ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಯುವಸೇನಾ ಕಾರ್ಯಕರ್ತರು, ಎರಡು ಬೀದಿ ನಾಯಿ ಮರಿಗಳನ್ನು ನಗರ ಪಂಚಾಯತ್ ಮುಖ್ಯಾಧಿಕಾರಿಯ ಕಚೇರಿಗೆ ತಂದು ಅವರ ಟೇಬಲ್ ಮೇಲೆಯೇ ಬಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ನಾಸಿಕ್ ಜಿಲ್ಲೆಯ ನಿಫಾಡ್ ನಗರ ಪಂಚಾಯತ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಶಿವಸೇನೆಯ ಯುವ ಘಟಕವಾದ ಯುವಸೇನಾದ ಜಿಲ್ಲಾ ಮುಖ್ಯಸ್ಥ ವಿಕ್ರಮ್ ರಂಧವೆ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಚೀಲಗಳಲ್ಲಿ ಎರಡು ನಾಯಿ ಮರಿಗಳನ್ನು ತಂದ ಕಾರ್ಯಕರ್ತರು, ಅವುಗಳನ್ನು ನೇರವಾಗಿ ನಗರ ಪಂಚಾಯತ್ ಮುಖ್ಯಾಧಿಕಾರಿ ಧೀರಜ್ ಭಾಮ್ರೆ ಅವರ ಮೇಜಿನ ಮೇಲೆ ಬಿಟ್ಟಿದ್ದಾರೆ. ಟೇಬಲ್ ಮೇಲೆ ನಾಯಿ ಮರಿಗಳು ಓಡಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇಷ್ಟಕ್ಕೇ ನಿಲ್ಲದ ಕಾರ್ಯಕರ್ತರು, ಅಧಿಕಾರಿಯ ಟೇಬಲ್ ಮೇಲೆ ನೋಟುಗಳ ಹಾರವನ್ನೂ ಇಟ್ಟು ವ್ಯಂಗ್ಯವಾಡಿದ್ದಾರೆ. ಬೀದಿ ನಾಯಿಗಳ ಸಮಸ್ಯೆ ಕುರಿತು ಸಾರ್ವಜನಿಕರಿಂದ ನಿರಂತರ ದೂರುಗಳು ಬರುತ್ತಿದ್ದರೂ, ನಗರ ಪಂಚಾಯತ್ ಆಡಳಿತ ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ನಿಫಾಡ್ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಯುವಸೇನಾ ಮುಖಂಡರು ಹೇಳಿದ್ದಾರೆ. ಈಗಾಗಲೇ ಹಲವರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಈ ಕುರಿತು ಸಾರ್ವಜನಿಕರು ಹಲವು ಬಾರಿ ದೂರು ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.
ಪ್ರಸ್ತುತ ಗಣೇಶೋತ್ಸವ ನಡೆಯುತ್ತಿರುವ ಹಿನ್ನೆಲೆ ಪಟ್ಟಣದಲ್ಲಿ ಜನರ ಓಡಾಟವೂ ಹೆಚ್ಚಾಗಿದೆ. ಗಣೇಶ ಪೆಂಡಾಲ್‌ಗಳಿಗೆ ತೆರಳುವ ಭಕ್ತರು ಹಾಗೂ ಸಾರ್ವಜನಿಕರು ಬೀದಿ ನಾಯಿಗಳ ಭಯದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಕ್ರಮ್ ರಂಧವೆ ಆರೋಪಿಸಿದ್ದಾರೆ. ಹೀಗಾಗಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಗರ ಪಂಚಾಯತ್ ಆಡಳಿತ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆಗಾಗಿ ವಿಶೇಷ ಅಭಿಯಾನ ಆರಂಭಿಸಬೇಕು. ಬೀದಿ ನಾಯಿಗಳನ್ನು ಹಿಡಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ವೈಜ್ಞಾನಿಕ ಹಾಗೂ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಯುವಸೇನಾ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ತಕ್ಷಣ ಪರಿಹಾರ ಕಲ್ಪಿಸುವ ಬದಲು ಆಡಳಿತ ಮಂಡಳಿ ಟೆಂಡರ್ ಪ್ರಕ್ರಿಯೆಗಳಲ್ಲೇ ಕಾಲಹರಣ ಮಾಡುತ್ತಿದೆ ಎಂದು ರಂಧವೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಗಂಭೀರವಾಗಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದಲೇ ಈ ರೀತಿಯ ಪ್ರತಿಭಟನೆ ನಡೆಸಬೇಕಾಯಿತು ಎಂದು ಅವರು ಹೇಳಿದ್ದಾರೆ.
ಇನ್ನು ಮುಂದೆಯೂ ಆಡಳಿತ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದರೆ, ಸಾರ್ವಜನಿಕರ ಸಮ್ಮುಖದಲ್ಲೇ ಮತ್ತೆ ನಗರ ಪಂಚಾಯತ್ ಮುಖ್ಯಾಧಿಕಾರಿಗಳ ಕಚೇರಿಗೆ ಬೀದಿ ನಾಯಿಗಳನ್ನು ತಂದು ಪ್ರತಿಭಟನೆ ನಡೆಸುವುದಾಗಿ ರಂಧವೆ ಎಚ್ಚರಿಕೆ ನೀಡಿದ್ದಾರೆ.





