ಕಲಬುರಗಿ, ಅಕ್ಟೋಬರ್ 26: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪಥಸಂಚಲನಕ್ಕೆ ಸಂಬಂಧಿಸಿದ ವಿವಾದ ಕಲಬುರಗಿಯಲ್ಲಿ ತೀವ್ರಗೊಂಡಿದೆ. ಹೈಕೋರ್ಟ್ ಜಿಲ್ಲಾಡಳಿತವನ್ನು ಅಕ್ಟೋಬರ್ 28ರಂದು ಶಾಂತಿ ಸಭೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದು, ಈ ಸೂಚನೆಯಂತೆ ಆರ್‌ಎಸ್‌ಎಸ್, ಭೀಮ್ ಆರ್ಮಿ ಸೇರಿದಂತೆ 10 ಸಂಘಟನೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿವೆ. ರಾಜ್ಯಾದ್ಯಂತ ಆರ್‌ಎಸ್‌ಎಸ್ ಪಥಸಂಚಲನಗಳು ನಡೆಯುತ್ತಿರುವಾಗ, ಸಚಿವ ಪ್ರಿಯಾಂಕ್ ಖರ್ಗೆಯ ಕ್ಷೇತ್ರ ಚಿತ್ತಾಪುರದಲ್ಲಿ ಮಾತ್ರ ವಿವಾದ ಕೇಂದ್ರೀಕರಿಸಿದೆ.
ಹೈಕೋರ್ಟ್‌ನ ಸೂಚನೆಯಂತೆ ಜಿಲ್ಲಾಡಳಿತವು ಅಕ್ಟೋಬರ್ 28ರಂದು ಬೆಳಗ್ಗೆ 11.30ಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ ಆಯೋಜಿಸಲಿದೆ. ಪ್ರತಿ ಸಂಘಟನೆಯಿಂದ ಮೂವರು ಪ್ರತಿನಿಧಿಗಳು ಹಾಜರಾಗಿ, ಲಿಖಿತ ಹೇಳಿಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಚಿತ್ತಾಪುರದಲ್ಲಿ ಪಥಸಂಚಲನಕ್ಕೆ 11 ಸಂಘಟನೆಗಳು ಅರ್ಜಿ ಸಲ್ಲಿಸಿವೆ. ಆರ್‌ಎಸ್‌ಎಸ್ ಸೇರಿದಂತೆ ಇತರ ಸಂಘಟನೆಗಳು ಈ ಸಭೆಯಲ್ಲಿ ಭಾಗವಹಿಸಿ, ಶಾಂತಿಯುತ ಚರ್ಚೆ ನಡೆಸುವ ಅವಕಾಶವಿದೆ. ಜಿಲ್ಲಾಡಳಿತವು ಸಭೆಯ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲಿದೆ.
ಸದ್ಯ ರಾಜ್ಯದಲ್ಲಿ ಆರ್‌ಎಸ್‌ಎಸ್ ಪಥಸಂಚಲನಗಳು ತಾರಕಕ್ಕೇರಿವೆ. ನಾನಾ ಜಿಲ್ಲೆಗಳಲ್ಲಿ ಇವು ನಡೆಯುತ್ತಿದ್ದರೂ, ಚಿತ್ತಾಪುರದಲ್ಲಿ ವಿಶೇಷ ಒತ್ತಡವಿದೆ. ಆರ್‌ಎಸ್‌ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಚಿತ್ತಾಪುರದಲ್ಲಿ ಪಥಸಂಚಲನ ನಡೆಸುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಸಚಿವ ಪ್ರಿಯಾಂಕ್ ಖರ್ಗೆ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಮಾಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ. 11 ಸಂಘಟನೆಗಳ ಅರ್ಜಿಗಳನ್ನು ಕೋರ್ಟ್ ಪರಿಶೀಲಿಸಿ ತೀರ್ಮಾನಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ನ ದೇಣಿಗೆ ಮೂಲಗಳನ್ನು ಪ್ರಶ್ನಿಸಿದ್ದಾರೆ. ಆರ್‌ಎಸ್‌ಎಸ್ ದೇವರಿಗಿಂತ ದೊಡ್ಡದಾಗಿ ಬಿಟ್ಟಿದ್ದೀಯಾ? ದೇಣಿಗೆ ಎಲ್ಲಿಂದ ಬರುತ್ತದೆ? ಎಂದು ಕೇಳಿ, ಕಲಬುರಗಿ ಅಭಿವೃದ್ಧಿಯ ಬಗ್ಗೆ ಬಿಜೆಪಿಯನ್ನು ಕುಟುಕಿದ್ದಾರೆ. “ಬಿಜೆಪಿ ಕಲಬುರಗಿ ನೋಡಿದ್ದಾರಾ? ಅಭಿವೃದ್ಧಿಗೆ ಯಾವ ಕೊಡುಗೆ? ಎಂದು ಪ್ರಶ್ನಿಸಿದ್ದಾರೆ.
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಸಂಬಂಧಿಸಿದಂತೆ ಭೀಮ್ ಆರ್ಮಿ ಸೇರಿದಂತೆ ಇತರ ಸಂಘಟನೆಗಳು ಸಹ ಸಕ್ರಿಯವಾಗಿವೆ. ಜಿಲ್ಲಾಡಳಿತವು ಶಾಂತಿ ಕಾಪಾಡಲು ಕಟ್ಟುನಿಟ್ಟು ಕ್ರಮಗಳನ್ನು ಕೈಗೊಂಡಿದ್ದು, ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲಾಗಿದೆ.





