- ಪ್ರತಿ ಗಣಿಯ ಸುರಕ್ಷತಾ ಕ್ರಮಗಳ ನಿಯಮಿತ ಪರಿಶೀಲನೆಗೆ ಸೂಚನೆ
- ಈ ಆರ್ಥಿಕ ವರ್ಷ ₹11,000 ಕೋಟಿ ಆದಾಯ ಗುರಿ; OTS ಮೂಲಕ ₹2,000 ಕೋಟಿ ಸಂಗ್ರಹಕ್ಕೆ ಒತ್ತು
- ಮುಂದಿನ ತಿಂಗಳಿನಿಂದ ಜಿಲ್ಲಾವಾರು ಮಾಸಿಕ ಪ್ರಗತಿ ಪರಿಶೀಲನೆ
ಬೆಂಗಳೂರು, (ಜುಲೈ 24) : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿಗದಿಪಡಿಸಿರುವ ₹11,000 ಕೋಟಿ ಆದಾಯ ಸಂಗ್ರಹದ ಗುರಿಯನ್ನು ಸಾಧಿಸಲು ಇಲಾಖೆಯ ಪ್ರತಿಯೊಬ್ಬ ಅಧಿಕಾರಿಯೂ ಗುರಿ ಆಧಾರಿತವಾಗಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲಾ ಜಿಯಾಲಜಿಸ್ಟ್‌ಗಳಿಗೂ ಪ್ರತ್ಯೇಕವಾಗಿ ಕಾರ್ಯಭಾರ ಹಾಗೂ ಆದಾಯ ಸಂಗ್ರಹಣೆಯ ಗುರಿ ನಿಗದಿಪಡಿಸಲಾಗುವುದು ಎಂದು ಎಂ.ಎಸ್.ಎಂ.ಇ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ , ಐಎಎಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇಂದು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಜಿಲ್ಲೆಯ ಭೂವಿಜ್ಞಾನಿಗಳಿಗೆ (Geologists) ಪ್ರತ್ಯೇಕ ಕಾರ್ಯಗುರಿ (Targets) ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಗಣಿಗಳಿಗೆ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ, ಕಾರ್ಮಿಕರ ಸುರಕ್ಷತೆ, ಕಡ್ಡಾಯ ಸುರಕ್ಷತಾ ಮಾನದಂಡಗಳ ಅನುಷ್ಠಾನ ಹಾಗೂ ಗಣಿಗಾರಿಕೆ ಕಾರ್ಯಾಚರಣೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಲ್ಲು ಗಣಿಯಲ್ಲಿ ಇತ್ತೀಚೆಗೆ ಸಂಭವಿಸಿದ ದುರ್ಘಟನೆಯಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಪ್ರತಿಯೊಂದು ಗಣಿಯಲ್ಲೂ ಸುರಕ್ಷತಾ ಕ್ರಮಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಸುರಕ್ಷತೆಯ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಇರಬಾರದು ಎಂದು ಅವರು ಸ್ಪಷ್ಟ ಸೂಚನೆ ನೀಡಿದರು.
₹11,000 ಕೋಟಿ ಆದಾಯ ಗುರಿ
ಈ ಆರ್ಥಿಕ ವರ್ಷ ಇಲಾಖೆಗೆ ₹11,000 ಕೋಟಿ ಆದಾಯ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದ ಅವರು, ಕಳೆದ ಆರ್ಥಿಕ ವರ್ಷದಲ್ಲಿ ಇಲಾಖೆ ₹6,500 ಕೋಟಿ ಆದಾಯ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದೆ ಎಂದು ಹೇಳಿದರು.
ಈ ವರ್ಷ ಒನ್ ಟೈಮ್ ಸೆಟಲ್‌ಮೆಂಟ್ (OTS) ಯೋಜನೆಯ ಮೂಲಕ ₹2,000 ಕೋಟಿ ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಈ ಗುರಿಯನ್ನು ಸಾಧಿಸಲು ಎಲ್ಲಾ ಅಧಿಕಾರಿಗಳು ಹೆಚ್ಚಿನ ಕಾರ್ಯತತ್ಪರತೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಪ್ರತಿ ಜಿಯಾಲಜಿಸ್ಟ್‌ಗೆ ಗುರಿ – ಜಿಲ್ಲಾವಾರು ಮಾಸಿಕ ಪರಿಶೀಲನೆ
ಪ್ರತಿ ಜಿಲ್ಲೆಯ ಜಿಯಾಲಜಿಸ್ಟ್‌ಗಳಿಗೆ ಪ್ರತ್ಯೇಕವಾಗಿ ಆದಾಯ ಸಂಗ್ರಹ, ಕ್ಷೇತ್ರ ಪರಿಶೀಲನೆ ಹಾಗೂ ಕಾರ್ಯನಿರ್ವಹಣೆಯ ಗುರಿಗಳನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದ ಅವರು, ಮುಂದಿನ ತಿಂಗಳಿನಿಂದ ಪ್ರತಿ ಜಿಲ್ಲೆಯ ಪ್ರತ್ಯೇಕ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಾಗುವುದು ಎಂದರು.
ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಚಟುವಟಿಕೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು, ಗುರಿಗಳ ಸಾಧನೆಯನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಮುಖ್ಯಮಂತ್ರಿಗಳ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿ
ರಾಜ್ಯ ಸರ್ಕಾರವು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಹೆಚ್ಚಿನ ಆದಾಯ, ಪರಿಣಾಮಕಾರಿ ಆಡಳಿತ ಮತ್ತು ಕಟ್ಟುನಿಟ್ಟಿನ ಕಾನೂನು ಜಾರಿಯನ್ನು ನಿರೀಕ್ಷಿಸುತ್ತಿದೆ ಎಂದು ತಿಳಿಸಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಲಾಖೆಯ ಮೇಲೆ ವಿಶೇಷ ನಿರೀಕ್ಷೆ ಹೊಂದಿದ್ದಾರೆ. ಪ್ರತಿಯೊಬ್ಬ ಅಧಿಕಾರಿಯೂ ಜವಾಬ್ದಾರಿಯುತ ಹಾಗೂ ಫಲಿತಾಂಶ ಆಧಾರಿತ ಕಾರ್ಯವೈಖರಿಯನ್ನು ಅಳವಡಿಸಿಕೊಂಡು ಇಲಾಖೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾದ ಎಸ್. ರಂಗಪ್ಪ, ಇಲಾಖೆಯ ಹಿರಿಯ ಅಧಿಕಾರಿಗಳು, ಹಿರಿಯ ಭೂವಿಜ್ಞಾನಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಗಣಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವರ್ಗಾವಣೆ ಆದೇಶಗಳ ಯಶಸ್ವಿ ಅನುಷ್ಠಾನ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಇತ್ತೀಚೆಗೆ ಕೈಗೊಳ್ಳಲಾದ ಇಲಾಖೆಯ ಬೃಹತ್ ವರ್ಗಾವಣೆ ಪ್ರಕ್ರಿಯೆ ಯಶಸ್ವಿಯಾಗಿ ಜಾರಿಯಾಗಿದ್ದು, ವರ್ಗಾವಣೆಗೊಂಡ ಅಧಿಕಾರಿಗಳ ಪೈಕಿ ಶೇ.98ರಷ್ಟು ಅಧಿಕಾರಿಗಳು ಈಗಾಗಲೇ ತಮ್ಮ ಹೊಸ ಕರ್ತವ್ಯ ಸ್ಥಳಗಳಲ್ಲಿ ಹಾಜರಾಗಿ ಸೇವೆ ಆರಂಭಿಸಿದ್ದಾರೆ. ಇಲಾಖೆಯಲ್ಲಿ ಶಿಸ್ತು, ಪಾರದರ್ಶಕತೆ ಹಾಗೂ ಜವಾಬ್ದಾರಿಯುತ ಆಡಳಿತ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ.





