ಬೆಂಗಳೂರು ಸೆ.8: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಮೊಬೈಲ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಪೊಲೀಸರು, ಮೊಬೈಲ್ ಜೈಲಿನೊಳಗೆ ಹೇಗೆ ಬಂತು ಹಾಗೂ ಅದನ್ನು ಬಳಸಲು ಯಾರಿಂದ ಸಹಾಯ ದೊರೆಯಿತು ಎಂಬುದನ್ನು ಪತ್ತೆಹಚ್ಚಲು ವಿಚಾರಣೆ ನಡೆಸಲಿದ್ದಾರೆ.
ಸೆಪ್ಟೆಂಬರ್ 8ರಂದು ಪ್ರಜ್ವಲ್ ರೇವಣ್ಣ ಹಾಗೂ ಪ್ರಕರಣದ ಮತ್ತೊಬ್ಬ ಆರೋಪಿ ಪ್ರತಾಪ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಜೈಲಿನಲ್ಲಿರುವ ಇಬ್ಬರನ್ನೂ ಬಾಡಿ ವಾರೆಂಟ್ ಆಧಾರದ ಮೇಲೆ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ತನಿಖಾ ತಂಡ ನ್ಯಾಯಾಲಯದ ಅನುಮತಿ ಕೋರಿತ್ತು. ಪ್ರಕರಣದಲ್ಲಿ ಪ್ರತಾಪ್ ಎ1 ಆರೋಪಿಯಾಗಿದ್ದರೆ, ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದಾರೆ.
ದಾಳಿಯಲ್ಲಿ ಮೊಬೈಲ್, ಪೆನ್‌ಡ್ರೈವ್, ನೋಟ್‌ಬುಕ್ ಪತ್ತೆ
ಆಗಸ್ಟ್ 11ರಂದು ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಸಿದ ದಾಳಿಯ ವೇಳೆ ಪ್ರಜ್ವಲ್ ರೇವಣ್ಣ ಅವರ ಬಳಿ ಮೊಬೈಲ್ ಫೋನ್ ಪತ್ತೆಯಾಗಿತ್ತು ಎನ್ನಲಾಗಿದೆ. ಮೊಬೈಲ್‌ನಲ್ಲಿ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್, ನೆಟ್‌ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್ ಸೇರಿದಂತೆ ಹಲವು ಅಪ್ಲಿಕೇಷನ್‌ಗಳು ಇದ್ದವು ಎಂದು ತನಿಖೆಯಿಂದ ತಿಳಿದುಬಂದಿದೆ.
ಕುಟುಂಬದ ಸದಸ್ಯರು ಹಾಗೂ ವಕೀಲರೊಂದಿಗೆ ಸಂವಹನ ನಡೆಸಲು ಮೊಬೈಲ್ ಬಳಸಲಾಗುತ್ತಿತ್ತು ಎಂಬ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ. ಇದರ ಬೆನ್ನಲ್ಲೇ ಮೊಬೈಲ್ ಒದಗಿಸಿದ್ದಾನೆ ಎನ್ನಲಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.
ಇದೇ ವೇಳೆ ಜೈಲಿನಲ್ಲಿ ಪ್ರಜ್ವಲ್ ಅವರ ಬಳಿ ಮೊಬೈಲ್ ಮಾತ್ರವಲ್ಲದೆ ಪೆನ್‌ಡ್ರೈವ್ ಹಾಗೂ ನೋಟ್‌ಬುಕ್ ಕೂಡ ಪತ್ತೆಯಾಗಿತ್ತು ಎನ್ನಲಾಗಿದೆ. ವಶಪಡಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಾಧನಗಳನ್ನು ಹೆಚ್ಚಿನ ಪರಿಶೀಲನೆ ಹಾಗೂ ಡೇಟಾ ರಿಟ್ರೀವಲ್‌ಗಾಗಿ ಕಳುಹಿಸಲಾಗಿದೆ.
ಮುಖಾಮುಖಿ ವಿಚಾರಣೆಗೆ ಸಿದ್ಧತೆ
ಜೈಲಿನೊಳಗೆ ಮೊಬೈಲ್ ತಲುಪಿದ ಮಾರ್ಗ, ಅದನ್ನು ಯಾರು ಒದಗಿಸಿದರು, ಜೈಲಿನೊಳಗಿಂದ ಯಾರೊಂದಿಗೆ ಸಂವಹನ ನಡೆಸಲಾಗುತ್ತಿತ್ತು ಹಾಗೂ ಇದಕ್ಕೆ ಬೇರೆ ಯಾರಾದರೂ ಸಹಕರಿಸಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ಮತ್ತು ಪ್ರತಾಪ್ ಇಬ್ಬರನ್ನೂ ಕಸ್ಟಡಿಗೆ ಪಡೆದು ಮುಖಾಮುಖಿ ವಿಚಾರಣೆ ನಡೆಸಿದರೆ ಪ್ರಕರಣದ ಹಲವು ಅಂಶಗಳು ಬೆಳಕಿಗೆ ಬರಬಹುದು ಎಂಬುದು ಪೊಲೀಸರ ವಾದವಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನೂ ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು.
ಕಸ್ಟಡಿಗೆ ವಕೀಲರ ಆಕ್ಷೇಪ
ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಅವರು ಪೊಲೀಸ್ ಕಸ್ಟಡಿಗೆ ಆಕ್ಷೇಪ ವ್ಯಕ್ತಪಡಿಸಿದರು. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಹಾಗೂ ಜೈಲು ಪರಸ್ಪರ ದೂರದಲ್ಲಿಲ್ಲ. ಅಗತ್ಯವಿದ್ದರೆ ಪೊಲೀಸರು ಜೈಲಿಗೆ ತೆರಳಿ ವಿಚಾರಣೆ ನಡೆಸಬಹುದು. ಪ್ರಜ್ವಲ್ ಈಗಾಗಲೇ ತನಿಖೆಗೆ ಸಹಕಾರ ನೀಡಿದ್ದಾರೆ ಮತ್ತು ಮುಂದೆಯೂ ಸಹಕರಿಸಲಿದ್ದಾರೆ. ಹೀಗಾಗಿ ಅವರನ್ನು ಪೊಲೀಸ್ ಕಸ್ಟಡಿಗೆ ನೀಡುವ ಅಗತ್ಯವಿಲ್ಲ ಎಂದು ವಾದಿಸಿದರು.
ಮತ್ತೊಂದೆಡೆ, ಸರ್ಕಾರಿ ಪರ ವಕೀಲ ಸತೀಶ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ಕೆಲವು ಪ್ರಮುಖ ಮಾಹಿತಿಯನ್ನು ಪಡೆಯಬೇಕಿದ್ದು, ಅದಕ್ಕಾಗಿ ಪೊಲೀಸ್ ಕಸ್ಟಡಿ ಅಗತ್ಯವಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.
ಇಬ್ಬರ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶ ಸಂದೀಪ್ ಪಾಟೀಲ್ ಅವರು ಪೊಲೀಸ್ ಅರ್ಜಿಯನ್ನು ಪುರಸ್ಕರಿಸಿ ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಆದೇಶಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಸೆಪ್ಟೆಂಬರ್ 8ರಿಂದಲೇ ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸಲಿದ್ದಾರೆ.





