ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ನ.28ರ ಶುಕ್ರವಾರ ಬೆಳಗ್ಗೆ ಉಡುಪಿಯ ಐತಿಹಾಸಿಕ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ನಡೆಯಲಿರುವ ‘ಲಕ್ಷ ಕಂಠ ಗೀತಾ ಪಾರಾಯಣ’ ಮಹಾಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬೃಹತ್ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲ ವರ್ಗದ ಜನರು ಒಟ್ಟಾಗಿ ಭಗವದ್ಗೀತೆಯ ಪಠಣ ಮಾಡಲಿದ್ದು, ಇದನ್ನು ವಿಶ್ವದ ಅತಿದೊಡ್ಡ ಗೀತಾ ಪಠಣ ಕಾರ್ಯಕ್ರಮವೆಂದೇ ಕರೆಯಲಾಗುತ್ತಿದೆ.
ಪ್ರಧಾನಿ ಮೋದಿ ಅವರು ಈ ಭೇಟಿಯ ಬಗ್ಗೆ ಎಕ್ಸ್‌ನಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. “ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ, ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನ್ನ ಬದುಕಿನ ಗೌರವದ ಕ್ಷಣ. ಈ ಮಠವು ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾದ ಸಾಂಸ್ಕೃತಿಕ-ಆಧ್ಯಾತ್ಮಿಕ ಕೇಂದ್ರವಾಗಿದೆ. ಸಮಾಜ ಸೇವೆ, ಶಿಕ್ಷಣ ಮತ್ತು ಆಧ್ಯಾತ್ಮಿಕತೆಯಲ್ಲಿ ಇದು ಮುಂಚೂಣಿಯಲ್ಲಿದೆ ಎಂದು ಬರೆದುಕೊಂಡಿದ್ದಾರೆ.
ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ. ಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಈ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ…
— Narendra Modi (@narendramodi) November 27, 2025
ಪ್ರಯಾಣ ಮಾರ್ಗ ಮತ್ತು ಕಾರ್ಯಕ್ರಮದ ವಿವರ
- ಪ್ರಧಾನಿ ಮೋದಿ ಬೆಳಗ್ಗೆ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಲಿದ್ದಾರೆ.
- ಅಲ್ಲಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ನೇರವಾಗಿ ಉಡುಪಿಯ ಹೊಸದಾಗಿ ನಿರ್ಮಿಸಿದ ಹೆಲಿಪ್ಯಾಡ್‌ಗೆ ಬರುತ್ತಾರೆ.
- ಬೆಳಗ್ಗೆ 11 ಗಂಟೆ ಸುಮಾರಿಗೆ ರಥಬೀದಿ ಮೂಲಕ ಕಾರ್ಕಡೆ ಪ್ರವೇಶಿಸಿ, ಕನಕನಕಿಂಡಿ ದರ್ಶನ ಪಡೆಯಲಿದ್ದಾರೆ.
- ಸುವರ್ಣ ಕನಕನಕಿಂಡಿ ಲೋಕಾರ್ಪಣೆ ಮಾಡಿ, ಕನಕದಾಸ ಗುಡಿಗೆ ಭೇಟಿ ನೀಡುತ್ತಾರೆ.
- ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ, ಶ್ರೀಕೃಷ್ಣ ದರ್ಶನ, ಚಿನ್ನದ ತೀರ್ಥ ಮಂಟಪ ಉದ್ಘಾಟನೆ.
- ಅಷ್ಟಮಠಗಳ ಸ್ವಾಮೀಜಿಗಳ ದರ್ಶನ-ಆಶೀರ್ವಾದ, ಪ್ರಸಾದ ಸ್ವೀಕಾರ.
- ಗೀತಾ ಮಂದಿರಕ್ಕೆ ಭೇಟಿ ನೀಡಿ, ನಂತರ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗಿ.
ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ:
- ಹೆಲಿಪ್ಯಾಡ್ ಸುತ್ತಲೂ 2 ಕಿ.ಮೀ. ವ್ಯಾಪ್ತಿಯಲ್ಲಿ ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ಗಸ್ತು.
- ಶ್ರೀಕೃಷ್ಣ ಮಠ, ಪ್ರವಾಸಿ ಮಂದಿರ, ರಥಬೀದಿ, ಕಾರ್ಕಡೆ ಸುತ್ತಮುತ್ತಲಿನ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚನೆ.
- ಪ್ರಧಾನಿ ಸಂಚರಿಸುವ ಎಲ್ಲ ಮಾರ್ಗಗಳಲ್ಲಿಯೂ ಅಂಗಡಿಗಳನ್ನು ಮುಚ್ಚಲಾಗುವುದು.
- ಸಂಜೆ 6 ಗಂಟೆವರೆಗೆ ನಗರದ 5 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟಕ್ಕೆ ಸಂಪೂರ್ಣ ನಿಷೇಧ.
ಈ ಭೇಟಿಯಿಂದ ಉಡುಪಿ ಜಿಲ್ಲೆಯಲ್ಲಿ ಭಾರೀ ಸಂಭ್ರಮ ಮನೆ ಮಾಡಿದೆ. ದೇಶದ ಪ್ರಧಾನಿ ಶ್ರೀಕೃಷ್ಣ ಮಠಕ್ಕೆ ಬರುತ್ತಿರುವುದು ಸ್ಥಳೀಯರಿಗೆ ಹೆಚ್ಚಿ ಸಂತೋಷ ತಂದುಕೊಟ್ಟಿದೆ.





