ಬೆಂಗಳೂರು: ಮೃತದೇಹ ಪತ್ತೆಯಾಗದಿದ್ದರೂ ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತುಪಡಿಸಿ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಅಪರೂಪದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಯೊಬ್ಬರನ್ನು ಸೈನೆಡ್ ನೀಡಿ ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನೂರ್ ಅಹ್ಮದ್ ಹಾಗೂ ಸತ್ಯನಾರಾಯಣ್‌ಗೆ 60ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ ₹30 ಸಾವಿರ ದಂಡ ವಿಧಿಸಿದೆ. ಸಿಸಿಟಿವಿ ದೃಶ್ಯಗಳು, ಸಿಡಿಆರ್, ಆರೋಪಿಗಳ ಹೇಳಿಕೆ ಸೇರಿದಂತೆ ಹಲವು ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಲಯ ಈ ಆದೇಶ ನೀಡಿದೆ
2021ರಲ್ಲಿ ನಾಪತ್ತೆ ಪ್ರಕರಣ ದಾಖಲು
ಮಂತ್ರಾಲಯ ಮೂಲದ ಸೀತಾ (47) ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದರು. 2021ರ ಮಾರ್ಚ್ 26ರಂದು ಸೀತಾ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಗಂಡ ಹಾಗೂ ತಾಯಿಯನ್ನು ಕಳೆದುಕೊಂಡ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಸೀತಾ, ನಾಪತ್ತೆಯಾಗುವ ನಾಲ್ಕು ತಿಂಗಳ ಹಿಂದೆ ಮಂತ್ರಾಲಯದಿಂದ ಬೆಂಗಳೂರಿನಲ್ಲಿದ್ದ ಅಕ್ಕನ ಮನೆಗೆ ಬಂದಿದ್ದರು. ಮಾರ್ಚ್ 25ರಂದು ಮನೆಯಿಂದ ಹೊರಗೆ ಹೋದ ಅವರು ಮತ್ತೆ ವಾಪಸ್ ಬಂದಿರಲಿಲ್ಲ.
ಅಂದಿನ ಇನ್‌ಸ್ಪೆಕ್ಟರ್ ಸಂಜೀವ್ ಗೌಡ ಹಾಗೂ ಸಬ್‌ಇನ್‌ಸ್ಪೆಕ್ಟರ್ ಲತಾ ನೇತೃತ್ವದಲ್ಲಿ ತನಿಖೆ ಆರಂಭವಾಯಿತು. ಸೀತಾ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಪೊಲೀಸರಿಗೆ ಅನುಮಾನ ಮೂಡಿತ್ತು. ಸಿಡಿಆರ್ ಪರಿಶೀಲಿಸಿದಾಗ ಸೀತಾ ಕೊನೆಯದಾಗಿ ರಘು ಅಲಿಯಾಸ್ ಮೆಂಟಲ್ ರಘು ಎಂಬಾತನೊಂದಿಗೆ ಮಾತನಾಡಿರುವುದು ಪತ್ತೆಯಾಯಿತು.
ಜಮೀನು ವಿಚಾರವೇ ಕೊಲೆಗೆ ಕಾರಣ?
ರಘುವನ್ನು ಮಂತ್ರಾಲಯದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸೀತಾಳನ್ನು ಕೊಲೆ ಮಾಡಲು ಸುಪಾರಿ ಪಡೆದಿರುವುದಾಗಿ ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ. ಸೀತಾ ಸಹೋದರನೊಂದಿಗೆ ನೂರ್ ಅಹ್ಮದ್ ಎರಡು ಎಕರೆ ಜಮೀನು ಖರೀದಿಸುವ ಸಂಬಂಧ ಒಪ್ಪಂದ ಮಾಡಿಕೊಂಡಿದ್ದ. ಆದರೆ ಜಮೀನು ನೋಂದಣಿಗೆ ಸೀತಾ ಸಹಿ ಹಾಕಲು ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಸೀತಾಳ ಕೊಲೆಗೆ ನೂರ್ ಅಹ್ಮದ್ ₹2.5 ಲಕ್ಷಕ್ಕೆ ಸುಪಾರಿ ನೀಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ರಘು ಹಾಗೂ ಸತ್ಯನಾರಾಯಣ್ ಸೀತಾಳಿಗೆ ಬಂಗಾರದ ವ್ಯವಹಾರದ ನೆಪದಲ್ಲಿ ಕರೆ ಮಾಡಿ ಮೆಜೆಸ್ಟಿಕ್‌ನಿಂದ ಕಾರಿನಲ್ಲಿ ಕರೆದೊಯ್ದಿದ್ದರು. ಹಾಸನ ಮಾರ್ಗದಲ್ಲಿ ತೆರಳುವ ವೇಳೆ ಸೈನೆಡ್ ಬಳಸಿ ಕೊಲೆ ಮಾಡಲು ಸಂಚು ರೂಪಿಸಿದ್ದರು.
ಹಾಸನ ಟೋಲ್ ಬಳಿಯ ಹೋಟೆಲ್‌ನಲ್ಲಿ ಜ್ಯೂಸ್‌ಗೆ ಸೈನೆಡ್ ಬೆರೆಸಿದರೂ, ಜ್ಯೂಸ್ ಹಸಿರು ಬಣ್ಣಕ್ಕೆ ತಿರುಗಿದ್ದರಿಂದ ಸೀತಾ ಅದನ್ನು ಕುಡಿಯಲು ನಿರಾಕರಿಸಿದ್ದರು ಎನ್ನಲಾಗಿದೆ. ಬಳಿಕ ಕುಂದೂರು ಮಠದ ರಸ್ತೆಯಲ್ಲಿ ಕಾರು ನಿಲ್ಲಿಸಿ, ಸೀತಾ ಮಲಗಿದ್ದ ವೇಳೆ ಕಲ್ಲಿನಿಂದ ಹಲ್ಲೆ ನಡೆಸಿದ್ದರು. ಆದರೆ ಸೀತಾ ಬದುಕುಳಿದಿದ್ದರು. ನಂತರ ಬೇಲೂರು ಬಳಿಯ ಕ್ಲಿನಿಕ್‌ನಲ್ಲಿ ತಲೆಗೆ ಬ್ಯಾಂಡೇಜ್ ಹಾಕಿಸಿ, ಘಟನೆಗೆ ಬೇರೆ ಕಥೆ ಕಟ್ಟಲಾಗಿತ್ತು.
ಚಿಕ್ಕಮಗಳೂರು ಬಳಿಯ ಹೋಟೆಲ್‌ನಲ್ಲಿ ಸೈನೆಡ್‌ನ್ನು ಮಾತ್ರೆಯೊಳಗೆ ತುಂಬಿಸಿ, ದಾರಿ ಮಧ್ಯೆ ನೋವಿನ ಮಾತ್ರೆ ಎಂದು ಸೀತಾಗೆ ನೀಡಲಾಗಿತ್ತು. ಮಾತ್ರೆ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಸೀತಾ ಮೃತಪಟ್ಟಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ನಂತರ ಹೊಸಪೇಟೆಯ ಹುಲಿಗೆಮ್ಮ ರಸ್ತೆ ಬಳಿ ಕಾರು ನಿಲ್ಲಿಸಿ, ಸೀತಾ ಕೈಯಲ್ಲಿದ್ದ ಸುಮಾರು 30 ಗ್ರಾಂ ಚಿನ್ನದ ಬಳೆ ತೆಗೆದುಕೊಂಡಿದ್ದರು. ಮೃತದೇಹಕ್ಕೆ ಕಲ್ಲು ಕಟ್ಟಿ ಬೆಡ್‌ಶೀಟ್‌ನಲ್ಲಿ ಸುತ್ತಿ ತುಂಗಭದ್ರಾ ಕಾಲುವೆಗೆ ಎಸೆದು ಮಂತ್ರಾಲಯಕ್ಕೆ ತೆರಳಿದ್ದರು ಎನ್ನಲಾಗಿದೆ.
ಸೀತಾ ಮೃತದೇಹಕ್ಕಾಗಿ ಪೊಲೀಸರು ಸತತ ಹುಡುಕಾಟ ನಡೆಸಿದರೂ ಇದುವರೆಗೆ ಪತ್ತೆಯಾಗಿಲ್ಲ. ಪ್ರಕರಣದ ಆರೋಪಿಗಳ ಪೈಕಿ ರಘು ಹಾಗೂ ಬೆಸ್ತನಾಕುಮಾರ್ ಮೃತಪಟ್ಟಿದ್ದಾರೆ. ಉಳಿದ ಆರೋಪಿಗಳಾದ ನೂರ್ ಅಹ್ಮದ್ ಹಾಗೂ ಸತ್ಯನಾರಾಯಣ್‌ಗೆ ಇದೀಗ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿದೆ.





