ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗುರುವನಹಳ್ಳಿ ಗ್ರಾಮದಲ್ಲಿ ಗರ್ಭಿಣಿ ಪತ್ನಿಯನ್ನು ಬಿಟ್ಟು ನಂಟರ ಮನೆಗೆ ಬಂದಿದ್ದ ಯುವತಿಯೊಂದಿಗೆ ಪತಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಎರಡು ವರ್ಷಗಳ ಹಿಂದೆ ಮುನಿಕೃಷ್ಣ ಹಾಗೂ ಜಯಮ್ಮ ಪ್ರೀತಿಸಿ ಮದುವೆಯಾಗಿದ್ದರು.
ಮುನಿಕೃಷ್ಣ ಊರು ಊರುಗಳಿಗೆ ತೆರಳಿ ಗ್ಯಾಸ್ ಸ್ಟವ್ ರಿಪೇರಿ ಮಾಡುವ ಉದ್ಯೋಗ ಮಾಡಿಕೊಂಡಿದ್ದನು. ಗ್ರಾಮದ ರಾಧ ಎನ್ನುವರ ಮನೆಗೆ ಬಂದಿದ್ದ ಐಶ್ವರ್ಯ ಜೊತೆ ಕೆಲ ದಿನಗಳಿಂದ ಮುನಿಕೃಷ್ಣ ಸಲುಗೆಯಿಂದ ಇದ್ದನು. ನೆನ್ನೆ “ಮನೆಗೆ ರೇಷನ್ ತರುತ್ತೇನೆ” ಎಂದು ಪತ್ನಿಗೆ ಹೇಳಿ ಹೊರಟಿದ್ದ ಮುನಿಕೃಷ್ಣ, ಆಮೇಲೆ ವಾಪಸ್ಸು ಬಂದಿಲ್ಲ. ಆತನ ಗ್ರಾಮದಲ್ಲಿಯೇ ನಂಟರ ಮನೆಗೆಂದು ಬಂದಿದ್ದ ಐಶ್ವರ್ಯ ಎಂಬ ಯುವತಿಯೊಂದಿಗೆ ಪರಾರಿಯಾಗಿರುವುದು ಇದೀಗ ಪತ್ತೆಯಾಗಿದೆ.
ಪತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಗರ್ಭಿಣಿ ಜಯಮ್ಮ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಮುನಿಕೃಷ್ಣ ಹಾಗೂ ಐಶ್ವರ್ಯಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. “ಅದೃಷ್ಟ ಬದಲಾಯಿಸಿಕೊಳ್ಳಲು ಪ್ರೀತಿ ಮಾಡಿದವನೇ, ಇಂದು ನನ್ನ ಗರ್ಭಿಣಿತನದ ಸಂದರ್ಭದಲ್ಲಿಯೇ ಪರಾರಿಯಾಗಿದ್ದಾನೆ” ಎಂಬ ಆಕ್ರೋಶದಿಂದಲೇ ಜಯಮ್ಮ ಪೊಲೀಸ್ ಠಾಣೆಯಲ್ಲಿ ಅಳಲು ತೋಡಿಕೊಂಡಿದ್ದಾರೆ.
ಪರಾರಿಯಾದ ದಂಪತಿಯ ಪತ್ತೆಗಾಗಿ ತನಿಖೆ ನಡೆಯುತ್ತಿದ್ದು, ಇವರನ್ನು ಕಂಡರೆ ಪೊಲೀಸರಿಗೆ ಮಾಹಿತಿ ಕೊಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.
| Reported by: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ





