ದೆಹಲಿ: ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟು ಮುಂದುವರಿದಿದೆಯೋ, ಅಷ್ಟೇ ಅಪಾಯಕಾರಿ ವಂಚನೆಗಳೂ ಸೃಷ್ಟಿಯಾಗುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯ ಪ್ರತಿಷ್ಠಿತ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ವಾಸಿಸುವ ವೃದ್ಧ ವೈದ್ಯ ದಂಪತಿಯನ್ನು ಸೈಬರ್ ವಂಚಕರು ‘ಡಿಜಿಟಲ್ ಅರೆಸ್ಟ್’ ಮಾಡುವ ಮೂಲಕ ಬರೋಬ್ಬರಿ 14 ಕೋಟಿ ರೂಪಾಯಿ ದೋಚಿದ್ದಾರೆ.
ಘಟನೆಯ ವಿವರ:
ಅಮೆರಿಕಾದಿಂದ ಹಿಂತಿರುಗಿ ಭಾರತದಲ್ಲಿ ನೆಲೆಸಿದ್ದ ಡಾ. ಓಂ ತನೇಜಾ ಮತ್ತು ಡಾ. ಇಂದಿರಾ ತನೇಜಾ ಅವರಿಗೆ ಕಳೆದ ಡಿಸೆಂಬರ್ 24ರಂದು ಮೊದಲ ಕರೆ ಬಂದಿತ್ತು. ತಾವು ಕಾನೂನು ಅಧಿಕಾರಿಗಳೆಂದು ಪರಿಚಯಿಸಿಕೊಂಡ ವಂಚಕರು, ದಂಪತಿಯ ಮೇಲೆ ಸುಳ್ಳು ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದರು. ಅಲ್ಲಿಂದ ಜನವರಿ 10ರವರೆಗೆ ಸುಮಾರು 17 ದಿನಗಳ ಕಾಲ ದಂಪತಿಯನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ.
ಡಿಜಿಟಲ್ ಅರೆಸ್ಟ್ ಎಂಬ ಮಾಯಾಜಾಲ:
ವಂಚಕರು ಸ್ಕೈಪ್ (Skype) ಆ್ಯಪ್ ಮೂಲಕ ದಿನದ 24 ಗಂಟೆಯೂ ದಂಪತಿಯ ಮೇಲೆ ಕಣ್ಣಿಟ್ಟಿದ್ದರು. ನೀವು ಯಾರೊಂದಿಗೂ ಮಾತನಾಡುವಂತಿಲ್ಲ, ಮನೆಯಿಂದ ಹೊರಹೋಗುವಂತಿಲ್ಲ, ನಿಮ್ಮ ಮೇಲೆ ನಿರಂತರ ನಿಗಾ ಇದೆ ಎಂದು ಹೆದರಿಸಿ ಅವರನ್ನೇ ಡಿಜಿಟಲ್ ರೂಪದಲ್ಲಿ ಬಂಧಿಸಿದ್ದರು. ಡಾ. ಇಂದಿರಾ ಅವರು ಬ್ಯಾಂಕಿಗೆ ಹಣ ವರ್ಗಾಯಿಸಲು ಹೋದಾಗಲೂ, ವಂಚಕರು ಅವರ ಪತಿ ಓಂ ತನೇಜಾ ಅವರಿಗೆ ವಿಡಿಯೋ ಕಾಲ್ ಮಾಡಿ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಮೇಲ್ವಿಚಾರಣೆ ಮಾಡುತ್ತಿದ್ದರು.
ಬ್ಯಾಂಕ್ ಮ್ಯಾನೇಜರ್ಗೂ ಸುಳ್ಳು ಹೇಳುವಂತೆ ತರಬೇತಿ
ಬ್ಯಾಂಕ್ ಸಿಬ್ಬಂದಿ ಇಷ್ಟು ದೊಡ್ಡ ಮೊತ್ತದ ವರ್ಗಾವಣೆಯ ಬಗ್ಗೆ ಪ್ರಶ್ನಿಸಿದರೆ, ಯಾವ ಸುಳ್ಳು ಕಥೆಯನ್ನು ಹೇಳಬೇಕು ಎಂದು ದಂಪತಿಗೆ ಮೊದಲೇ ಟ್ರೈನಿಂಗ್ ನೀಡಿದ್ದರು. ಬ್ಯಾಂಕ್ ಮ್ಯಾನೇಜರ್ ಪ್ರಶ್ನಿಸಿದಾಗಲೆಲ್ಲಾ ಇಂದಿರಾ ಅವರು ವಂಚಕರು ಹೇಳಿಕೊಟ್ಟ ಕಥೆಯನ್ನೇ ಹೇಳಿ ಎಂಟು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 14 ಕೋಟಿ ರೂಪಾಯಿಯನ್ನು ವರ್ಗಾಯಿಸಿದ್ದಾರೆ. ಇದರಲ್ಲಿ ಒಂದು ಬಾರಿಯಂತೂ ಬರೋಬ್ಬರಿ 10 ಕೋಟಿ ರೂ. ವರ್ಗಾವಣೆಯಾಗಿತ್ತು.
ವಂಚಕರ ಕಾರ್ಯಾಚರಣೆಯ ವಿಧಾನ:
ಇಂತಹ ಅಪರಾಧಗಳಿಗೆ ಸೈಬರ್ ಕ್ರಿಮಿನಲ್ಗಳು ಸಾಮಾನ್ಯವಾಗಿ ಇಂಟರ್ನೆಟ್ ಆಧಾರಿತ ಸ್ಕ್ರಿಪ್ (Skype) ಮತ್ತು ನಕಲಿ ಇಮೇಲ್ ಐಡಿಗಳನ್ನು ಬಳಸುತ್ತಾರೆ. ಹಿರಿಯ ಅಧಿಕಾರಿಗಳಂತೆ ನಟಿಸಿ, ಪೊಲೀಸ್ ಇಲಾಖೆಯ ನಕಲಿ ಲೋಗೋ ಮತ್ತು ಸಮವಸ್ತ್ರ ತೋರಿಸಿ ಸಂತ್ರಸ್ತರನ್ನು ಮಾನಸಿಕವಾಗಿ ಕುಗ್ಗಿಸುತ್ತಾರೆ. ಇಂಟರ್ನೆಟ್ ಕರೆಗಳಾದ ಕಾರಣ ಇವರ ಮೂಲವನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.
ದಂಪತಿಗೆ ಮಕ್ಕಳಿಲ್ಲದ ಕಾರಣ ಮತ್ತು ಅವರು ಒಂಟಿಯಾಗಿ ವಾಸಿಸುತ್ತಿದ್ದರಿಂದ ವಂಚಕರಿಗೆ ಕೆಲಸ ಸುಲಭವಾಯಿತು. ಸದ್ಯ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. .





