ಉಡುಪಿ: ವಿಶ್ವಪ್ರಸಿದ್ಧ ಮಲ್ಪೆ ಸಮುದ್ರದ ಅಲೆಗಳ ನಡುವೆ ವಿಗ್ರಹವೊಂದು ತೇಲಿ ಬಂದಿದ್ದು, ಇದನ್ನು ಕಂಡ ಪ್ರವಾಸಿಗರು ಮತ್ತು ಭಕ್ತರು ಮತ್ತೆ ಉಡುಪಿಯಲ್ಲಿ ಕೃಷ್ಣನ ಪವಾಡ ಸಂಭವಿಸಿದೆ ಎಂದು ಸಂಭ್ರಮಿಸಿದರು. ಆದರೆ, ಈ ವಿಗ್ರಹದ ಅಸಲಿಯತ್ತು ಈಗ ಚರ್ಚೆಗೆ ಗ್ರಾಸವಾಗಿದೆ.
ಭಾನುವಾರ ಉಡುಪಿಯ ಕೃಷ್ಣ ಮಠದಲ್ಲಿ ಇಸ್ಕಾನ್ (ISKCON) ಸಂಸ್ಥೆಯ ವತಿಯಿಂದ ಬೃಹತ್ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾವಿರಾರು ಇಸ್ಕಾನ್ ಅನುಯಾಯಿಗಳು ಮಠದ ದರ್ಶನ ಮುಗಿಸಿ ಸಂಜೆ ಮಲ್ಪೆ ಬೀಚ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಮುದ್ರದ ಅಲೆಗಳ ನಡುವೆ ವಿಗ್ರಹವೊಂದು ತೇಲಿ ಬರುವುದು ಜನರ ಕಣ್ಣಿಗೆ ಬಿದ್ದಿದೆ.
ಐತಿಹಾಸಿಕವಾಗಿ ಉಡುಪಿಯ ಶ್ರೀಕೃಷ್ಣನ ವಿಗ್ರಹವೂ ಸಮುದ್ರದ ಮೂಲಕವೇ ಬಂದು (ಗೋಪಿಯ ಚಂದನದ ಮುದ್ದೆಯಲ್ಲಿ) ಮಧ್ವಾಚಾರ್ಯರಿಗೆ ಸಿಕ್ಕಿತ್ತು ಎಂಬ ನಂಬಿಕೆ ಇರುವುದರಿಂದ, ಮಲ್ಪೆಯಲ್ಲಿ ಸಿಕ್ಕ ಈ ಮೂರ್ತಿಯನ್ನು ಕಂಡ ಕೂಡಲೇ ಜನರು ಇದು ಶ್ರೀಕೃಷ್ಣನದ್ದೇ ಪವಾಡ ಎಂದು ಸಂಭ್ರಮಿಸಿದ್ದಾರೆ. ವಿಗ್ರಹವನ್ನು ದಡಕ್ಕೆ ತಂದ ಭಕ್ತರು ಅದಕ್ಕೆ ಪೂಜೆ ಸಲ್ಲಿಸಿ, ಸಂಭ್ರಮದಿಂದ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.
ಆದರೆ, ಈ ವಿಗ್ರಹವನ್ನು ಸೂಕ್ಷ್ಮವಾಗಿ ಗಮನಿಸಿದ ಸ್ಥಳೀಯರು ಮತ್ತು ಧಾರ್ಮಿಕ ತಜ್ಞರು ಇದು ಶ್ರೀಕೃಷ್ಣನ ವಿಗ್ರಹವಲ್ಲ ಎಂದು ತಿಳಿಸಿದ್ದಾರೆ. ವಿಗ್ರಹದ ಕೆತ್ತನೆ, ಆಕಾರ ಮತ್ತು ಕೈಯಲ್ಲಿರುವ ಆಯುಧಗಳ ವಿನ್ಯಾಸವನ್ನು ಗಮನಿಸಿದರೆ, ಇದು ದೇವಾಲಯಗಳ ಪ್ರವೇಶ ದ್ವಾರದಲ್ಲಿರುವ ‘ಜಯ-ವಿಜಯ’ ಎಂಬ ದ್ವಾರಪಾಲಕರ ಮೂರ್ತಿಯಂತೆ ಕಾಣುತ್ತಿದೆ.
ವಿಗ್ರಹದ ಶೈಲಿಯು ವಿಷ್ಣುವಿನ ರೂಪಕ್ಕೆ ಹೋಲಿಕೆಯಾಗಿದ್ದರೂ, ದ್ವಾರಪಾಲಕರಿಗೆ ಇರುವಂತಹ ವಿಶಿಷ್ಟ ಲಕ್ಷಣಗಳು ಇದರಲ್ಲಿ ಗೋಚರಿಸುತ್ತಿವೆ. ಕೃಷ್ಣನ ಮೂರ್ತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೊಳಲು ಅಥವಾ ಬಾಲಲೀಲೆಯ ಮುದ್ರೆಗಳು ಇದರಲ್ಲಿ ಕಂಡುಬಂದಿಲ್ಲ.
ಕರಾವಳಿ ಭಾಗದಲ್ಲಿ ಒಂದು ಸಂಪ್ರದಾಯವಿದೆ. ದೇವಾಲಯಗಳ ಪುನರ್ ನವೀಕರಣ ಅಥವಾ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಹಳೆಯ ಅಥವಾ ಬಿರುಕು ಬಿಟ್ಟ (ಭಿನ್ನವಾದ) ವಿಗ್ರಹಗಳನ್ನು ನದಿ ಅಥವಾ ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ಸ್ಥಳೀಯರಾದ ಸೂರಜ್ ಸಾಲಿಯಾನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಯಾವುದೋ ದೇವಸ್ಥಾನದ ಜೀರ್ಣೋದ್ಧಾರದ ವೇಳೆ ವಿಸರ್ಜಿಸಲಾದ ದ್ವಾರಪಾಲಕರ ವಿಗ್ರಹವು ಅಲೆಗಳ ಹೊಡೆತಕ್ಕೆ ಸಿಲುಕಿ ದಡ ಸೇರಿರಬಹುದು. ಇದನ್ನು ಪವಾಡ ಎಂದು ತಪ್ಪಾಗಿ ಭಾವಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಮಲ್ಪೆ ಬೀಚ್‌ನಲ್ಲಿ ಸಿಕ್ಕ ವಿಗ್ರಹವು ಭಕ್ತರಲ್ಲಿ ಧಾರ್ಮಿಕ ಭಾವನೆಯನ್ನು ಹೆಚ್ಚಿಸಿದ್ದರೂ, ಅದು ಕೃಷ್ಣನದ್ದಲ್ಲ ಎಂಬುದು ಸ್ಪಷ್ಟವಾಗಿದೆ.





