ದುಬೈ: ಸಾಮಾನ್ಯವಾಗಿ 16ನೇ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸ ಅಥವಾ ವೃತ್ತಿಜೀವನದ ಬಗ್ಗೆ ಯೋಚಿಸುತ್ತಿರುತ್ತಾರೆ. ಆದರೆ ಭಾರತೀಯ ಮೂಲದ ಲಕ್ಷ್ಮಣನ್ ಮೇಯ್ಯಪ್ಪನ್ ಎಂಬ ಯುವ ಪ್ರತಿಭೆ 16 ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಪುರುಷ ಚಾರ್ಟರ್ಡ್ ಅಕೌಂಟೆಂಟ್ (ACCA) ಎಂಬ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ದುಬೈನಲ್ಲಿ ನೆಲೆಸಿರುವ ಲಕ್ಷ್ಮಣನ್, ಕೇವಲ 16ನೇ ವಯಸ್ಸಿನಲ್ಲಿ ACCA ಪದವಿಯನ್ನು ಪೂರ್ಣಗೊಳಿಸಿ ವೃತ್ತಿಪರ ಅಕೌಂಟಿಂಗ್ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತ ಮಾನ್ಯತೆ ನೀಡಿದ್ದು, ವಿಶ್ವದ ಅತ್ಯಂತ ಕಿರಿಯ ಪುರುಷ ACCA ಎಂಬ ಹೆಗ್ಗಳಿಕೆ ಅವರಿಗೆ ಲಭಿಸಿದೆ.
ಕೊರೊನಾ ಲಾಕ್‌ಡೌನ್‌ನಲ್ಲೇ ಆರಂಭವಾದ ಕನಸು
ಲಕ್ಷ್ಮಣನ್ ಅವರ ಯಶಸ್ಸಿನ ಪಯಣ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಆರಂಭವಾಯಿತು. 10ನೇ ತರಗತಿ ಪರೀಕ್ಷೆ ಮುಗಿದ ಬಳಿಕ ಫೈನಾನ್ಸ್ ಮತ್ತು ಅಕೌಂಟಿಂಗ್ ಕ್ಷೇತ್ರದತ್ತ ಆಸಕ್ತಿ ಬೆಳೆದಿತ್ತು. ಅವರ ತಾಯಿ ಸ್ವತಃ ACCA ಅರ್ಹತೆ ಹೊಂದಿದ್ದರಿಂದ ಮನೆಯಲ್ಲಿಯೇ ಅಕೌಂಟಿಂಗ್‌ನ ಮೂಲಭೂತ ತತ್ವಗಳನ್ನು ಕಲಿಸಿಕೊಟ್ಟರು.
ತಾಯಿಯ ಮಾರ್ಗದರ್ಶನ ಮತ್ತು ನಿರಂತರ ಅಭ್ಯಾಸದ ಫಲವಾಗಿ, 15ನೇ ವಯಸ್ಸಿನಲ್ಲಿ ಲಕ್ಷ್ಮಣನ್ ACCA ಕೋರ್ಸ್‌ಗೆ ಸೇರ್ಪಡೆಯಾಗಿ ಕೇವಲ ಒಂದೇ ವರ್ಷದಲ್ಲಿ ಎಲ್ಲಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಇಷ್ಟು ಕಡಿಮೆ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ವಿಶ್ವದಾಖಲೆಗೆ ಕಾರಣವಾಯಿತು.
ACCA ಬಳಿಕ CFA, ಈಗ MSc Finance
ಶೈಕ್ಷಣಿಕ ಸಾಧನೆ ACCAಗೆ ಮಾತ್ರ ಸೀಮಿತವಾಗಿಲ್ಲ. ಲಕ್ಷ್ಮಣನ್ CFA (Chartered Financial Analyst) ಅರ್ಹತೆಯನ್ನೂ ಪಡೆದುಕೊಂಡಿದ್ದಾರೆ. ಪ್ರಸ್ತುತ ಅವರು MSc Finance ಪದವಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದು, ವಿದ್ಯಾಭ್ಯಾಸದ ಜೊತೆಗೆ ವೃತ್ತಿಪರ ಜೀವನವನ್ನೂ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಅವರು ದುಬೈನ ಪ್ರಮುಖ ಹಣಕಾಸು ಸಂಸ್ಥೆಯಾದ Century Financial ನಲ್ಲಿ Senior Research Analyst ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೂಡಿಕೆ ವಿಶ್ಲೇಷಣೆ, ಷೇರು ಮಾರುಕಟ್ಟೆ ಅಧ್ಯಯನ ಹಾಗೂ ಆರ್ಥಿಕ ನಿರ್ಧಾರಗಳ ಕುರಿತು ಸಂಶೋಧನೆ ನಡೆಸುವುದು ಅವರ ಪ್ರಮುಖ ಜವಾಬ್ದಾರಿಯಾಗಿದೆ.
ಲೆಕ್ಕಾಚಾರ ಮಾತ್ರವಲ್ಲ, ಗಡಿಯಾರ ವಿನ್ಯಾಸವೂ ಹವ್ಯಾಸ
ಫೈನಾನ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಲಕ್ಷ್ಮಣನ್‌ಗೆ ಕೈಗಡಿಯಾರಗಳ ವಿನ್ಯಾಸ ಮತ್ತು ಅಸೆಂಬ್ಲಿಂಗ್ ಕೂಡ ವಿಶೇಷ ಆಸಕ್ತಿ ಇದೆ. ಬಿಡುವಿನ ವೇಳೆಯಲ್ಲಿ ವಿವಿಧ ಮಾದರಿಯ ವಾಚ್‌ಗಳನ್ನು ಸ್ವತಃ ವಿನ್ಯಾಸಗೊಳಿಸಿ ಜೋಡಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.





