ಬೆಂಗಳೂರು: ರಾಜ್ಯದಲ್ಲಿ ವೈರಲ್ ಜ್ವರದ ಪ್ರಕರಣಗಳ ಜೊತೆಗೆ ಮಕ್ಕಳಲ್ಲಿ ಕಾಲು-ಬಾಯಿ ಬೇನೆ (Hand, Foot and Mouth Disease – HFMD) ಸೋಂಕಿನ ಪ್ರಕರಣಗಳೂ ಹೆಚ್ಚಾಗುತ್ತಿವೆ. ವಿಶೇಷವಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ಈ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಜ್ವರದ ಜೊತೆಗೆ ಕೈ, ಕಾಲು ಮತ್ತು ಬಾಯಿ ಭಾಗದಲ್ಲಿ ನೀರುಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳು ಹಾಗೂ ಮಕ್ಕಳ ಕ್ಲಿನಿಕ್‌ಗಳಿಗೆ ದಾಖಲಾಗುತ್ತಿರುವ ಮಕ್ಕಳಲ್ಲಿ ವೈರಲ್ ಜ್ವರದ ಪ್ರಮಾಣ ಹೆಚ್ಚಾಗಿದೆ. ಕೆಲವು ವೈದ್ಯರ ಪ್ರಕಾರ, ಚಿಕಿತ್ಸೆಗಾಗಿ ಬರುತ್ತಿರುವ ಮಕ್ಕಳಲ್ಲಿ ಸುಮಾರು ಶೇ.40ರಷ್ಟು ಮಂದಿಯಲ್ಲಿ ವೈರಲ್ ಜ್ವರದ ಲಕ್ಷಣಗಳು ಕಂಡುಬರುತ್ತಿವೆ. ಇದರ ಜೊತೆಗೆ HFMD ಸೋಂಕಿನ ಪ್ರಕರಣಗಳೂ ಹೆಚ್ಚುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.
ಕೈ, ಕಾಲು, ಬಾಯಿಯಲ್ಲಿ ನೀರುಗುಳ್ಳೆ
HFMD ಸಾಮಾನ್ಯವಾಗಿ ಕಾಕ್ಸ್‌ಸಾಕಿ ವೈರಸ್ ಹಾಗೂ ಇತರ ಎಂಟೆರೋವೈರಸ್‌ಗಳಿಂದ ಉಂಟಾಗುವ ಸೋಂಕಾಗಿದೆ. ಸೋಂಕಿಗೆ ಒಳಗಾದ ಮಕ್ಕಳಲ್ಲಿ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳಬಹುದು. ಬಳಿಕ ಕೈ, ಕಾಲು ಹಾಗೂ ಬಾಯಿಯ ಒಳಭಾಗದಲ್ಲಿ ಸಣ್ಣ ನೀರುಗುಳ್ಳೆಗಳು ಅಥವಾ ದದ್ದುಗಳು ಕಾಣಿಸಿಕೊಳ್ಳುತ್ತವೆ. ಈ ಗುಳ್ಳೆಗಳಿಂದ ಉರಿ, ನೋವು ಹಾಗೂ ಕಿರಿಕಿರಿ ಉಂಟಾಗುವುದರಿಂದ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಾರೆ.
ಬಾಯಿಯೊಳಗೆ ಗುಳ್ಳೆಗಳು ಕಾಣಿಸಿಕೊಂಡಾಗ ಆಹಾರ ಸೇವಿಸುವುದು ಮತ್ತು ನೀರು ಕುಡಿಯುವುದಕ್ಕೂ ಮಕ್ಕಳಿಗೆ ಕಷ್ಟವಾಗಬಹುದು. ಪರಿಣಾಮವಾಗಿ ದೇಹದಲ್ಲಿ ನೀರಿನ ಕೊರತೆ ಉಂಟಾಗದಂತೆ ಪೋಷಕರು ವಿಶೇಷ ಗಮನಹರಿಸುವುದು ಅಗತ್ಯವಾಗಿದೆ.
ಚಿಕ್ಕ ಮಕ್ಕಳಲ್ಲಿ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇರುವುದರಿಂದ ಡೇಕೇರ್, ಪ್ಲೇಗ್ರೂಪ್, ಶಾಲೆಗಳು ಹಾಗೂ ಆಟದ ಸ್ಥಳಗಳಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯವಾಗಿದೆ. ಸೋಂಕಿತ ಮಗುವಿನ ಲಾಲಾರಸ, ಮೂಗಿನ ಸ್ರಾವ, ಗುಳ್ಳೆಗಳ ದ್ರವ ಅಥವಾ ಮಲದ ಮೂಲಕವೂ ವೈರಸ್ ಮತ್ತೊಬ್ಬರಿಗೆ ಹರಡಬಹುದು. ಹೀಗಾಗಿ ಮಕ್ಕಳ ಕೈಗಳನ್ನು ನಿಯಮಿತವಾಗಿ ತೊಳೆಯಿಸುವುದು, ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳದಂತೆ ನೋಡಿಕೊಳ್ಳುವುದು ಹಾಗೂ ಸೋಂಕಿನ ಲಕ್ಷಣಗಳಿರುವ ಮಕ್ಕಳನ್ನು ಇತರರಿಂದ ದೂರವಿಡುವುದು ಮುಖ್ಯವಾಗಿದೆ.
HFMD ಸೋಂಕಿನ ಸಂದರ್ಭದಲ್ಲಿ ಜ್ವರ ಸಾಮಾನ್ಯವಾಗಿ 7ರಿಂದ 10 ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಜ್ವರ ಕಡಿಮೆಯಾದ ಬಳಿಕವೂ ಕೆಲವು ಮಕ್ಕಳಲ್ಲಿ ದೈಹಿಕ ದುರ್ಬಲತೆ ಅಥವಾ ಪೋಷಕಾಂಶಗಳ ಕೊರತೆ ಕಾಣಿಸಿಕೊಳ್ಳಬಹುದು. ಆದ್ದರಿಂದ ಮಗುವಿಗೆ ಸಮತೋಲಿತ ಆಹಾರ, ಸಾಕಷ್ಟು ದ್ರವಪದಾರ್ಥಗಳು ಹಾಗೂ ಅಗತ್ಯ ಪೋಷಕಾಂಶಗಳನ್ನು ನೀಡುವುದು ಮುಖ್ಯ ಎಂದು ಮಕ್ಕಳ ತಜ್ಞರು ಸಲಹೆ ನೀಡಿದ್ದಾರೆ. ವಿಶೇಷವಾಗಿ ವೈದ್ಯರ ಸಲಹೆಯಂತೆ ವಿಟಮಿನ್-ಎ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಪೂರೈಸಬೇಕು ಎಂದು ತಿಳಿಸಿದ್ದಾರೆ.
ಮಕ್ಕಳ ದೇಹದಲ್ಲಿ ಕಾಣಿಸಿಕೊಳ್ಳುವ ನೀರುಗುಳ್ಳೆಗಳನ್ನು ಬೇವಿನ ಸೊಪ್ಪು, ಕೆಮ್ಮಣ್ಣು ಅಥವಾ ಇತರ ಮನೆಮದ್ದುಗಳನ್ನು ಹಚ್ಚಿ ಉಜ್ಜಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಗುಳ್ಳೆಗಳನ್ನು ಒಡೆಯುವುದರಿಂದ ಗಾಯಕ್ಕೆ ಬ್ಯಾಕ್ಟೀರಿಯಾ ಸೋಂಕು ತಗುಲುವ ಸಾಧ್ಯತೆ ಹೆಚ್ಚುತ್ತದೆ. ಹೀಗಾಗಿ ಯಾವುದೇ ಸ್ವಯಂ ಚಿಕಿತ್ಸೆಗೆ ಮುಂದಾಗದೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಮಗುವಿಗೆ ನಿರಂತರ ಜ್ವರ, ಬಾಯಿಯಲ್ಲಿ ಗುಳ್ಳೆಗಳು, ಆಹಾರ ಸೇವಿಸಲು ತೊಂದರೆ, ದೇಹದಲ್ಲಿ ನೀರಿನ ಕೊರತೆಯ ಲಕ್ಷಣಗಳು ಅಥವಾ ಕೈ-ಕಾಲಿನಲ್ಲಿ ಗುಳ್ಳೆಗಳು ಕಾಣಿಸಿಕೊಂಡರೆ ತಕ್ಷಣ ಮಕ್ಕಳ ತಜ್ಞರನ್ನು ಸಂಪರ್ಕಿಸುವಂತೆ ವೈದ್ಯರು ಪೋಷಕರಿಗೆ ಸಲಹೆ ನೀಡಿದ್ದಾರೆ.





