ದೇಶದಲ್ಲಿ ಜಲ ಸಂರಕ್ಷಣೆ, ನೀರಿನ ಸಮರ್ಪಕ ಬಳಕೆ ಹಾಗೂ ಸುಸ್ಥಿರ ಜಲ ನಿರ್ವಹಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಜಲಶಕ್ತಿ ಸಚಿವಾಲಯವು ‘7ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳು’ ಘೋಷಿಸಿದೆ. ‘ಜಲ ಸಮೃದ್ಧ ಭಾರತ’ ಎಂಬ ಗುರಿಯನ್ನು ಸಾಧಿಸಲು ಶ್ರಮಿಸುತ್ತಿರುವ ರಾಜ್ಯಗಳು, ಜಿಲ್ಲೆಗಳು, ಸ್ಥಳೀಯ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ವಿವಿಧ ಏಜೆನ್ಸಿಗಳನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಪ್ರಮುಖ ಉದ್ದೇಶವಾಗಿದೆ.
ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕೃತ ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ awards.gov.in ನಲ್ಲಿ ಅರ್ಜಿ ಪ್ರಕ್ರಿಯೆ ಲಭ್ಯವಿದ್ದು, ಅರ್ಜಿ ಸಲ್ಲಿಸಲು 2026ರ ಆಗಸ್ಟ್ 28 ಕೊನೆಯ ದಿನಾಂಕವಾಗಿದೆ. ಜೊತೆಗೆ ಪ್ರಶಸ್ತಿಯ ನಿಯಮಾವಳಿ, ಅರ್ಹತೆ, ಉಪವರ್ಗಗಳು ಹಾಗೂ ಇತರ ವಿವರಗಳಿಗಾಗಿ ಜಲಶಕ್ತಿ ಇಲಾಖೆಯ ಅಧಿಕೃತ ಜಾಲತಾಣ jalshakti-dowr.gov.in ಗೆ ಭೇಟಿ ನೀಡಬಹುದು.
ಜಲ ಸಂರಕ್ಷಣೆ ಮತ್ತು ನೀರಿನ ಪರಿಣಾಮಕಾರಿ ನಿರ್ವಹಣೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ರಾಜ್ಯಗಳು, ಜಿಲ್ಲೆಗಳು, ನಗರ ಸ್ಥಳೀಯ ಸಂಸ್ಥೆಗಳು, ಅಣೆಕಟ್ಟು ಮಾಲೀಕತ್ವದ ಏಜೆನ್ಸಿಗಳು ಹಾಗೂ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಅಡಿಯಲ್ಲಿ ಕಾರ್ಯನಿರ್ವಹಿಸಿರುವ ಕೈಗಾರಿಕೆಗಳು ಈ ಪ್ರಶಸ್ತಿಗೆ ಅರ್ಹವಾಗಿವೆ. ಜಲ ಸಂಪನ್ಮೂಲ ನಿರ್ವಹಣೆ, ‘ಜಲ ಸಂಚಯ್ ಜಲ ಭಾಗಿದಾರಿ’ (JSJB) ಮತ್ತು ‘ಜಲ ಜೀವನ ಮಿಷನ್’ (JJM) ಉಪವರ್ಗಗಳ ಅಡಿಯಲ್ಲಿ ತಲಾ ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಜಿಲ್ಲಾ ಮಟ್ಟದಲ್ಲೂ ಈ ಪ್ರಶಸ್ತಿಗೆ ವಿಶೇಷ ಮಹತ್ವ ನೀಡಲಾಗಿದೆ. ದೇಶವನ್ನು ಐದು ವಲಯಗಳಾಗಿ ವಿಭಾಗಿಸಿ, ಪ್ರತಿ ವಲಯದಿಂದ ತಲಾ ಮೂರು ಜಿಲ್ಲೆಗಳಂತೆ ಒಟ್ಟು 15 ಜಿಲ್ಲಾ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. ಇದಲ್ಲದೆ, ನಗರ ಸ್ಥಳೀಯ ಸಂಸ್ಥೆಗಳ ವಿಭಾಗದಲ್ಲಿ ಐದು ವಲಯಗಳಿಂದ ತಲಾ ಒಂದರಂತೆ ಒಟ್ಟು ಐದು ಪ್ರಶಸ್ತಿಗಳು ನೀಡಲಾಗುತ್ತವೆ. ಅತ್ಯುತ್ತಮ ಯೋಜನೆ ಅನುಷ್ಠಾನಗೊಳಿಸಿದ ಸಂಸ್ಥೆಗಳು ಹಾಗೂ ಜಲ ಕ್ಷೇತ್ರದಲ್ಲಿ ಪರಿಣಾಮಕಾರಿ CSR ಉಪಕ್ರಮಗಳನ್ನು ಕೈಗೊಂಡ ಕೈಗಾರಿಕೆಗಳಿಗೆ ತಲಾ ಮೂರು ಪ್ರಶಸ್ತಿಗಳು ಮೀಸಲಿರಿಸಲಾಗಿದೆ.
ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯೂ ಹಂತ ಹಂತವಾಗಿ ನಡೆಯಲಿದೆ. ಮೊದಲು ಸ್ವೀಕರಿಸಲಾದ ಅರ್ಜಿಗಳನ್ನು ಸ್ಕ್ರೀನಿಂಗ್ ಸಮಿತಿ ಪರಿಶೀಲಿಸಿ ಅರ್ಹ ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಿದೆ. ನಂತರ ತೀರ್ಪುಗಾರರ ಸಮಿತಿ ಅವುಗಳನ್ನು ಮೌಲ್ಯಮಾಪನ ಮಾಡಿ ಶಿಫಾರಸು ಸಲ್ಲಿಸಲಿದೆ. ಅಂತಿಮವಾಗಿ ಕೇಂದ್ರ ಜಲಶಕ್ತಿ ಸಚಿವರ ಅನುಮೋದನೆಯೊಂದಿಗೆ ವಿಜೇತರ ಪಟ್ಟಿ ಪ್ರಕಟಿಸಲಾಗುತ್ತದೆ.
ವಿಜೇತರಿಗೆ ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿಗಳಿಂದ ಟ್ರೋಫಿ ಹಾಗೂ ಪ್ರಶಂಸಾಪತ್ರ ಪ್ರದಾನ ಮಾಡಲಾಗುತ್ತದೆ. 2018ರಲ್ಲಿ ಆರಂಭವಾದ ರಾಷ್ಟ್ರೀಯ ಜಲ ಪ್ರಶಸ್ತಿ ಕಾರ್ಯಕ್ರಮವು ಈಗ ತನ್ನ 7ನೇ ಆವೃತ್ತಿಗೆ ಕಾಲಿಟ್ಟಿದ್ದು, ದೇಶಾದ್ಯಂತ ಜಲ ಸಂರಕ್ಷಣೆ ಕುರಿತ ಜನಜಾಗೃತಿ ಮತ್ತು ಸಮೂಹ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಇದೆ.





