ಬೆಂಗಳೂರು: ಸಂಕ್ರಾಂತಿ ಹಬ್ಬದ ದಿನವೇ ರಾಜ್ಯ ರಾಜಕಾರಣದ ಬಗ್ಗೆ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ (H.D. Kumaraswamy), “ನಾನು ರಾಜ್ಯ ರಾಜಕೀಯದಿಂದ ದೂರ ಸರಿಯೋ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯ ರಾಜಕಾರಣಕ್ಕೆ ನಾನು ಬರುತ್ತೇನೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ರಾಜಕಾರಣದಲ್ಲಿ ಇದ್ದೇನೆ. ನಾನು ಎಲ್ಲಿರಬೇಕು, ಯಾವ ಸ್ಥಾನದಲ್ಲಿರಬೇಕು ಎಂಬುದನ್ನು ತೀರ್ಮಾನ ಮಾಡೋದು ನನ್ನ ಕೈಯಲ್ಲಿಲ್ಲ. ರಾಜ್ಯದ ಜನತೆಯೇ ಅದನ್ನು ನಿರ್ಧರಿಸುತ್ತಾರೆ” ಎಂದು ಹೇಳಿದರು. ತಾವು ರಾಜ್ಯ ರಾಜಕೀಯದಿಂದ ದೂರ ಉಳಿಯುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ ಹೆಚ್‌ಡಿಕೆ.
ರಾಜ್ಯದಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿಯ ಬಗ್ಗೆ ಮಾತನಾಡಿದ ಅವರು, “ನಾವು ಮೈತ್ರಿಯ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಮೈತ್ರಿಯಲ್ಲಿ ಯಾವುದೇ ಗೊಂದಲಕ್ಕೂ ಅವಕಾಶ ಕೊಡಬಾರದು. ನಮ್ಮ ಉದ್ದೇಶ ಒಂದೇ, ರಾಜ್ಯದಲ್ಲಿ ಒಳ್ಳೆಯ ಸರ್ಕಾರವನ್ನು ತರುವುದು ಮತ್ತು ಜನರನ್ನು ನೆಮ್ಮದಿಯಿಂದ ಬದುಕಿಸುವುದು” ಎಂದು ಹೇಳಿದರು. ವೈಯಕ್ತಿಕ ಆಸೆಗಿಂತ ಜನಹಿತವೇ ಮೊದಲ ಆದ್ಯತೆ ಎಂದು ಹೇಳಿದರು.
ರಾಜ್ಯದ ಆಡಳಿತ ವ್ಯವಸ್ಥೆಯ ಮೇಲೂ ಹೆಚ್‌ಡಿಕೆ ಕಣ್ಣಿಟ್ಟಿದ್ದಾರೆ. “ರಾಜ್ಯದಲ್ಲಿ ಆಡಳಿತ ಹೇಗೆ ನಡೆಯುತ್ತಿದೆ ಎಂಬುದನ್ನು ನಾನು ನಿರಂತರವಾಗಿ ಗಮನಿಸುತ್ತಿದ್ದೇನೆ. ಜನರಿಗೆ ಅನುಕೂಲವಾಗುವ, ಪ್ರಾಮಾಣಿಕ ಆಡಳಿತ ನೀಡುವ ಸರ್ಕಾರ ಬರಬೇಕು” ಎಂದು ಹೇಳಿದರು. ನಾನು ಯಾವ ಸ್ಥಾನದಲ್ಲಿ ಇರಬೇಕು ಎಂಬುದನ್ನು ಜನತೆಯೇ ತೀರ್ಮಾನಿಸಬೇಕು ಎಂದು ತಿಳಿಸಿದರು.
ಕೇಂದ್ರ ಸಚಿವರಾಗಿ ತಮಗೆ ನೀಡಿರುವ ಜವಾಬ್ದಾರಿಯ ಬಗ್ಗೆ ಮಾತನಾಡಿದ ಹೆಚ್‌ಡಿಕೆ, “ಪ್ರಧಾನಮಂತ್ರಿಗಳು ನನಗೆ ಎರಡು ಮಹತ್ವದ ಇಲಾಖೆಗಳನ್ನು ನೀಡಿದ್ದಾರೆ. ಆ ಇಲಾಖೆಗಳ ಮೂಲಕ ಪ್ರಾಮಾಣಿಕವಾಗಿ ಉತ್ತಮ ಕೆಲಸ ಮಾಡಲು ಈಗಾಗಲೇ ಬಲವಾದ ಅಡಿಪಾಯ ಹಾಕಿದ್ದೇನೆ” ಎಂದು ಹೇಳಿದರು. ಆದರೂ ರಾಜ್ಯ ರಾಜಕೀಯಕ್ಕೆ ಮರಳುವುದು ಅನಿವಾರ್ಯ ಎಂದು ಸೂಚಿಸಿದ ಅವರು, “ರಾಜ್ಯ ರಾಜಕೀಯಕ್ಕೆ ಯಾವ ಸಮಯದಲ್ಲಿ ಬರಬೇಕು ಅನ್ನೋದನ್ನು ತೀರ್ಮಾನ ಮಾಡ್ತೀನಿ. ಆದರೆ ಬರಲೇಬೇಕಾಗುತ್ತದೆ” ಎಂದು ಹೇಳಿದರು.
ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ಅಧಿಕಾರಿಗೆ ಧಮ್ಕಿ ಹಾಕಿದ ಪ್ರಕರಣದ ಕುರಿತು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹೆಚ್‌ಡಿಕೆ, “ಈ ಸರ್ಕಾರ ಬಂದ ಮೇಲೆ ಅಧಿಕಾರಿಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಅಧಿಕಾರದಲ್ಲಿರುವವರವರೆಗೂ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕಾನೂನುಬಾಹಿರ ತೀರ್ಮಾನ ಮಾಡಿಸ್ತಿದ್ದಾರೆ” ಎಂದು ಆರೋಪಿಸಿದರು.
“ಯಾರೇ ತಪ್ಪು ಮಾಡಿದ್ರೂ ಅವರ ವಿರುದ್ಧ ಕಠಿಣ ಕ್ರಮ ಆಗಬೇಕು. ಯಾವುದೇ ಪಕ್ಷದವರೇ ಆಗಲಿ, ತಪ್ಪಿಗೆ ಮನ್ನಾ ಇರಬಾರದು. ಸರ್ಕಾರ ಗಂಭೀರವಾಗಿ ಕ್ರಮ ತೆಗೆದುಕೊಂಡಿದ್ದರೆ ಇಂತಹ ಘಟನೆಗಳು ಮರುಕಳಿಸೋದಿಲ್ಲ” ಎಂದು ಅವರು ಹೇಳಿದರು. ಅಧಿಕಾರಿಗಳು ಜನಪ್ರತಿನಿಧಿಗಳ ಒತ್ತಡಕ್ಕೆ ಒಳಗಾಗದೇ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಬೇಕು ಎಂಬ ಸಲಹೆ ನೀಡಿದರು.





