ಬೆಂಗಳೂರು (ಆಗಸ್ಟ್ 02) : ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ ನಾಳೆ ಸೋಮವಾರ (ಆಗಸ್ಟ್ 3) ರಂದು ನಡೆಯುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಖಾಲಿ ಇರುವ 20 ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ಇಂದು ರಾತ್ರಿ ಅಂತಿಮ ಹಂತದ ಚರ್ಚೆ ನಡೆಸಿ, ನಾಳೆ ಬೆಳಗ್ಗೆ ಪಟ್ಟಿ ಪ್ರಕಟಿಸಲಿದೆ.
ಸಚಿವ ಸಂಪುಟ ವಿಸ್ತರಣೆ ಮಾಡುವ ಕುರಿತು, ಹೈಕಮಾಂಡ್ ನಾಯಕರು ಸಿಎಂ ಡಿಕೆ ಶಿವಕುಮಾರ್ ಗೆ ಮಾಹಿತಿ ರವಾನೆ ಮಾಡಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಸಚಿವರ ಪಟ್ಟಿ ಕಳುಹಿಸುವುದಾಗಿ ಕರೆ ಮಾಡಿ ಸೂಚಿಸಿದೆ. ಆ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ ಲೋಕಭವನಕ್ಕೆ ಮಾಹಿತಿ ತಿಳಿಸಲಾಗಿದ್ದು, ನಾಳೆ ಸಂಜೆಯೇ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ದತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.
ಸಚಿವ ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು. ಈ ಭಾರಿ ಅಳೆದು ತೂಗಿ ಸಚಿವರನ್ನ ಆಯ್ಕೆ ಮಾಡಲು ಹೈಕಮಾಂಡ್ ಮುಂದಾಗಿದೆ. ಪಕ್ಷ ನಿಷ್ಠೆ, ಪಕ್ಷದ ಸಿದ್ದಾಂತ, ಯುವಕರಿಗೆ ಆದ್ಯತೆ ನೀಡಲು ಹೈಕಮಾಂಡ್ ಮುಂದಾಗಿದ್ದು, ಡಿಕೆಶಿ ಸಂಪುಟದಲ್ಲಿ ಈ ಭಾರಿ ಇಬ್ಬರು ಮಹಿಳೆಯರಿಗೆ ಸಚಿವರ ಸ್ಥಾನ ಒಲಿಯುವ ಸಾಧ್ಯತೆಗಳು ದಟ್ಟವಾಗಿದೆ. ಅಲ್ಲದೇ ಹೆಚ್ಚುವರಿಯಾಗಿ ಇನ್ನಿಬ್ಬರು ಉಪಮುಖ್ಯಮಂತ್ರಿಗಳನ್ನ ನೇಮಕ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.
ರಾಜ್ಯ ಸಚಿವ ಸಂಪುಟದ ಒಟ್ಟು 34 ಸದಸ್ಯರ ಪೈಕಿ ಸದ್ಯ 20 ಸ್ಥಾನಗಳು ಖಾಲಿ ಇದ್ದು, ಈ ಪೈಕಿ 18 ರಿಂದ 19 ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ. ಉಳಿದ ಎರಡು ಸ್ಥಾನಗಳನ್ನು ಮುಂದಿನ ರಾಜಕೀಯ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಖಾಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಸಂಪುಟ ವಿಸ್ತರಣೆಯಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ, ಹಿಂದಿನ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದ ಕೆಲ ಹಿರಿಯ ಶಾಸಕರಿಗೂ ಮತ್ತೊಮ್ಮೆ ಅವಕಾಶ ಸಿಗುವ ನಿರೀಕ್ಷೆಯಿದೆ. ಮೂಲಗಳ ಮಾಹಿತಿ ಪ್ರಕಾರ, ಸುಮಾರು ಆರು ಮಾಜಿ ಸಚಿವರಿಗೆ ಪುನಃ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಂಭಾವ್ಯ 20 ಶಾಸಕರ ಪಟ್ಟಿಯನ್ನ ಹೈಕಮಾಂಡ್ ನಾಯಕರಿಗೆ ನೀಡಿದ್ದು, ರಾಜ್ಯ ನಾಯಕರಪಟ್ಟಿ ಆಧರಿಸಿ ಹಾಗೂ ರಾಹುಲ್ ಗಾಂಧಿ ಟೀಂ ನಡೆಸಿದ ಸರ್ವೆ ರಿಪೋರ್ಟ್ ಆಧಾರದ ಮೇಲೆ ನೂತನ ಸಚಿವರ ಆಯ್ಕೆ ಆಗಲಿದೆ. ಆ ಹಿನ್ನಲೆಯಲ್ಲಿ ಇಂದು ರಾತ್ರಿ ನಡೆಯಲಿರುವ ಸಭೆಯಲ್ಲಿ ಅಂತಿಮ ಸುತ್ತಿನ ಚರ್ಚೆಯ ಬಳಿಕ ಫೈನಲ್ ಪಟ್ಟಿ ರೆಡಿಯಾಗಲಿದ್ದು, ಆ ಪಟ್ಟಿಯ ಅನುಗುಣವಾಗಿ ಸೋಮವಾರ ಬೆಳಗ್ಗೆ ಸಚಿವರ ಹೆಸರುಗಳನ್ನು ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆ ಇದೆ.
ಪ್ರಮಾಣವಚನ ಸ್ವೀಕರಿಸಲಿರುವ 20 ನೂತನ ಸಚಿವ ಪೈಕಿ ಕೆಲವರ ಹೆಸರು, ಈಗಾಗಲೇ ಫೈನಲ್ ಮಾಡಲಾಗಿದೆ. ಎ.ಎಸ್. ಪೊನ್ನಣ್ಣ, ರುದ್ರಪ್ಪ ಲಮಾಣಿ, ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್, ಜಮೀರ್ ಅಹಮದ್ ಖಾನ್, ಎಸ್.ಎಸ್. ಮಲ್ಲಿಕಾರ್ಜುನ್, ಅನ್ನಪೂರ್ಣ ತುಕಾರಾಂ ಅವರ ಹೆಸರುಗಳನ್ನು ಹೈಕಮಾಂಡ್ ನಾಯಕರು ಫೈನಲ್ ಮಾಡಿದ್ದಾರೆ ಎನ್ನಲಾಗುತ್ತಿದ್ದು ಇನ್ನುಳಿದ 8ರಿಂದ 10 ಸಚಿವರ ಪಟ್ಟಿ ಫೈನಲ್ ಆಗಬೇಕಿದೆ.
ಇನ್ನೊಂದೆಡೆ, ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ಸೋಮವಾರ ಸಂಜೆ 4.05ಕ್ಕೆ ಬೆಂಗಳೂರಿನ ಲೋಕಭವನದಲ್ಲಿ ನಡೆಯಲಿದ್ದು, ಆ ನಿಟ್ಟಿನಲ್ಲಿ ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.





