ರಾಜ್ಯದ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್ ಮಧ್ಯಭಾಗದಿಂದ ಹವಾಮಾನದಲ್ಲಿ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗುವ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಮೇಲೂ ಬೀರುವ ನಿರೀಕ್ಷೆಯಿದ್ದು, ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಸೆಪ್ಟೆಂಬರ್ 18 ಮತ್ತು 19ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ. ಕೆಲವು ಕಡೆ ಗುಡುಗು ಸಹಿತ ಮಳೆಯಾಗುವುದರ ಜೊತೆಗೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ. ಸೆಪ್ಟೆಂಬರ್ 19ರ ಬಳಿಕ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇಂದು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗಬಹುದು.
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ.
ನಾಳೆ ಕರಾವಳಿ ಭಾಗದಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲೂ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗಬಹುದು. ಈ ವೇಳೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ರಾಜಧಾನಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ಗರಿಷ್ಠ 29 ಡಿಗ್ರಿ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವ ಸಾಧ್ಯತೆಯಿದೆ. ಮಡಿಕೇರಿಯಲ್ಲಿ ಗರಿಷ್ಠ 28 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು.
ನಗರಗಳ ಗರಿಷ್ಠ-ಕನಿಷ್ಠ ತಾಪಮಾನ: ಬೆಂಗಳೂರು 29-21, ಮಂಗಳೂರು 31-25, ಶಿವಮೊಗ್ಗ 31-22, ಬೆಳಗಾವಿ 29-21, ಮೈಸೂರು 31-22, ಮಂಡ್ಯ 32-22, ಮಡಿಕೇರಿ 28-20, ರಾಮನಗರ 31-22, ಹಾಸನ 29-20, ಚಾಮರಾಜನಗರ 31-22, ಚಿಕ್ಕಬಳ್ಳಾಪುರ 30-21, ಕೋಲಾರ 30-22, ತುಮಕೂರು 31-22, ಉಡುಪಿ 31-25, ಕಾರವಾರ 30-27, ಚಿಕ್ಕಮಗಳೂರು 27-19, ದಾವಣಗೆರೆ 33-23, ಹುಬ್ಬಳ್ಳಿ 32-22, ಚಿತ್ರದುರ್ಗ 32-22, ಹಾವೇರಿ 32-23, ಬಳ್ಳಾರಿ 34-25, ಗದಗ 32-22, ಕೊಪ್ಪಳ 34-23, ರಾಯಚೂರು 34-26, ಯಾದಗಿರಿ 34-25, ವಿಜಯಪುರ 34-24, ಕಲಬುರಗಿ 33-24 ಹಾಗೂ ಬಾಗಲಕೋಟೆ 34-23 ಡಿಗ್ರಿ ಸೆಲ್ಸಿಯಸ್.
ಇನ್ನು ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದ್ದರೂ ಕೆಲವೆಡೆ ಮಳೆಯಾಗಿದೆ. ಗುರುವಾರ ಸಂಜೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ ಉಡುಪಿ ಪಟ್ಟಣದಲ್ಲಿ 3 ಸೆಂ.ಮೀ., ಕಾರವಾರ ವೀಕ್ಷಣಾಲಯದಲ್ಲಿ 2 ಸೆಂ.ಮೀ., ತಿಪಟೂರಿನಲ್ಲಿ 2 ಸೆಂ.ಮೀ. ಹಾಗೂ ಮೈಸೂರು ಜಿಲ್ಲೆಯ ಸರಗೂರಿನಲ್ಲಿ 1 ಸೆಂ.ಮೀ. ಮಳೆಯಾಗಿದೆ.





