ಬೆಂಗಳೂರು: ಸುಪ್ರೀಂ ಕೋರ್ಟ್‌ನ ನಕಲಿ ಆದೇಶವನ್ನು ಸೃಷ್ಟಿಸಿ, ಜೈಲು ಅಧಿಕಾರಿಗಳನ್ನೇ ಮೋಸಗೊಳಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಖತರ್ನಾಕ್ ಕೈದಿಯ ವಂಚನೆ ಅಂತಿಮವಾಗಿ ಬೆಳಕಿಗೆ ಬಂದಿದೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬ ಪರಾರಿಯಾಗಿದ್ದ ಪ್ರಕರಣ ಇದೀಗ ಎಂಟು ವರ್ಷಗಳ ಬಳಿಕ ಹೊರಬಿದ್ದಿದೆ.
ತಮಿಳುನಾಡು ಮೂಲದ ಶಂಕರ್ ಆರ್ಮುಗಮ್ ಎಂಬ ಅಪರಾಧಿ ಈ ಪ್ರಕರಣದ ಪ್ರಮುಖ ಆರೋಪಿ. ಈತ 2001ರಲ್ಲಿ ತನ್ನ ಸಹಚರರೊಂದಿಗೆ ಸೇರಿ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಅಪಹರಿಸಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ. ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ, ಆರೋಪ ಸಾಬೀತಾದ ಹಿನ್ನೆಲೆ ಶಂಕರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 364A ಅಡಿಯಲ್ಲಿ ಅಪಹರಣ ಹಾಗೂ ಸೆಕ್ಷನ್ 120B ಅಡಿಯಲ್ಲಿ ಅಪರಾಧಿಕ ಸಂಚು ಆರೋಪಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು. ನಂತರ ನ್ಯಾಯಾಲಯದ ಆದೇಶದಂತೆ ಶಂಕರ್ ಆರ್ಮುಗಮ್‌ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.
ಜೈಲಿನಲ್ಲಿದ್ದ ಶಂಕರ್ ಬಿಡುಗಡೆಯಾಗಲು ಸಿನಿಮೀಯ ಶೈಲಿಯಲ್ಲಿ ಮಾಸ್ಟರ್ ಪ್ಲಾನ್ ರೂಪಿಸಿದ್ದ ಎನ್ನಲಾಗಿದೆ. ತನಗೆ ಸುಪ್ರೀಂ ಕೋರ್ಟ್‌ನಿಂದ ಬಿಡುಗಡೆ ಆದೇಶ ಬಂದಿದೆ ಎಂದು ನಂಬಿಸುವ ಉದ್ದೇಶದಿಂದ ಆತ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. ಸುಪ್ರೀಂ ಕೋರ್ಟ್ ಮುದ್ರೆ, ಸಹಿ ಹಾಗೂ ಅಧಿಕೃತ ಆದೇಶದ ಮಾದರಿಯಲ್ಲೇ ತಯಾರಿಸಲಾದ ಈ ದಾಖಲೆಗಳನ್ನು ಜೈಲು ಅಧಿಕಾರಿಗಳ ಮುಂದೆ ಸಲ್ಲಿಸಲಾಗಿತ್ತು.
2018ರ ನವೆಂಬರ್ 13ರಂದು ಶಂಕರ್ ಪರವಾಗಿ ಬಂದ ವ್ಯಕ್ತಿಗಳು ಜೈಲು ಅಧಿಕಾರಿಗಳಿಗೆ ದಾಖಲೆಗಳನ್ನು ನೀಡಿದ್ದರು. ಅಲ್ಲದೆ, ನ್ಯಾಯಾಲಯ ವಿಧಿಸಿದ್ದ ದಂಡ ಮೊತ್ತದ ರೂಪದಲ್ಲಿ 10 ಸಾವಿರ ರೂಪಾಯಿಯನ್ನು ಸಹ ಪಾವತಿಸಿದ್ದರು ಎನ್ನಲಾಗಿದೆ. ದಾಖಲೆಗಳು ಸುಪ್ರೀಂ ಕೋರ್ಟ್‌ನ ಅಧಿಕೃತ ಆದೇಶವೆಂದು ನಂಬಿದ ಜೈಲು ಅಧಿಕಾರಿಗಳು ಯಾವುದೇ ಮರು ಪರಿಶೀಲನೆ ನಡೆಸದೆ ಶಂಕರ್ ಆರ್ಮುಗಮ್ ಬಿಡುಗಡೆಗೆ ಅನುಮತಿ ನೀಡಿದ್ದರು.
ಈ ರೀತಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ರಾಜಾರೋಷವಾಗಿ ಜೈಲಿನಿಂದ ಹೊರಬಂದು ಪರಾರಿಯಾಗಿದ್ದಾನೆ. ಪ್ರಕರಣ ಹಲವು ವರ್ಷಗಳ ಕಾಲ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಜೈಲು ಇಲಾಖೆಯ ಮಹಾನಿರ್ದೇಶಕರಿಗೆ ಬಂದ ಅನಾಮಧೇಯ ಪತ್ರದಿಂದ ಈ ಹಗರಣಕ್ಕೆ ಹೊಸ ತಿರುವು ಸಿಕ್ಕಿದೆ.
ಆ ಪತ್ರದಲ್ಲಿ ಶಂಕರ್ ನಕಲಿ ಸುಪ್ರೀಂ ಕೋರ್ಟ್ ಆದೇಶ ಪತ್ರದ ಮೂಲಕ ಜೈಲಿನಿಂದ ಬಿಡುಗಡೆಯಾಗಿದ್ದಾನೆ ಎಂದು ಉಲ್ಲೇಖಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜೈಲು ಇಲಾಖೆ ತನಿಖೆ ಆರಂಭಿಸಿತು. ತನಿಖೆಯ ವೇಳೆ ಸುಪ್ರೀಂ ಕೋರ್ಟ್‌ನಿಂದ ಅಂತಹ ಯಾವುದೇ ಬಿಡುಗಡೆ ಆದೇಶ ಹೊರಬಂದಿಲ್ಲ ಎಂಬುದು ಸ್ಪಷ್ಟವಾಯಿತು.
ಈ ಮೂಲಕ ಶಂಕರ್ ಸಲ್ಲಿಸಿದ್ದ ದಾಖಲೆ ಸಂಪೂರ್ಣ ನಕಲಿ ಎಂಬ ಸತ್ಯ ಬಹಿರಂಗವಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲೆ ಫೋರ್ಜರಿ, ವಂಚನೆ ಹಾಗೂ ಇತರ ಕಾನೂನುಬದ್ಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇದೀಗ ತಲೆಮರೆಸಿಕೊಂಡಿರುವ ಶಂಕರ್ ಆರ್ಮುಗಮ್ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ.





