ತುಮಕೂರು: ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಇಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಯಡುವನಹಳ್ಳಿಗೆ ಭೇಟಿ ನೀಡಿದ ಡಾ. ಜಿ. ಪರಮೇಶ್ವರ್ ಅವರು, ತುರ್ತು ಕ್ರಿಯಾ ಯೋಜನೆ (CAP) ಅನುದಾನದಡಿ ಕೊರೆಸಲಾಗಿರುವ ಕುಡಿಯುವ ನೀರಿನ ಕೊಳವೆಬಾವಿಯನ್ನು ಪರಿಶೀಲಿಸಿದರು. ಬೋರ್‌ವೆಲ್‌ನ ಪ್ರಸ್ತುತ ಸ್ಥಿತಿಗತಿ, ನೀರಿನ ಲಭ್ಯತೆ ಹಾಗೂ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಲು ಕೈಗೊಂಡಿರುವ ವ್ಯವಸ್ಥೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬರ ಪರಿಸ್ಥಿತಿ ತೀವ್ರವಾಗಿರುವ ಸಂದರ್ಭದಲ್ಲಿ ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಬೇಕು. ಅಗತ್ಯವಿರುವ ಕಡೆಗಳಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಕೈಗೊಂಡು ಜನರಿಗೆ ಸಮರ್ಪಕ ಪ್ರಮಾಣದಲ್ಲಿ ಕುಡಿಯುವ ನೀರು ಲಭ್ಯವಾಗುವಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿಎಂ ಸೂಚಿಸಿದರು.
ಈ ವೇಳೆ ಯಡುವನಹಳ್ಳಿ ಗ್ರಾಮಸ್ಥರು ತಮ್ಮ ವಿವಿಧ ಸಮಸ್ಯೆಗಳನ್ನು ಡಿಸಿಎಂ ಗಮನಕ್ಕೆ ತಂದರು. ಕಸ ವಿಲೇವಾರಿ ವ್ಯವಸ್ಥೆ, ಆಸ್ಪತ್ರೆ ಸಮಸ್ಯೆ ಹಾಗೂ ಸ್ಮಶಾನ ಭೂಮಿ ಮಂಜೂರು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮನವಿ ಸಲ್ಲಿಸಿದರು. ಗ್ರಾಮಸ್ಥರ ಮನವಿಯನ್ನು ಆಲಿಸಿದ ಪರಮೇಶ್ವರ್, ಸಮಸ್ಯೆಗಳನ್ನು ಶೀಘ್ರವಾಗಿ ಪರಿಶೀಲಿಸಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಡಾ. ಜಿ. ಪರಮೇಶ್ವರ್ ಅವರು ಕುಣಿಗಲ್ ತಾಲೂಕಿನ ನಾಗನಹಳ್ಳಿ ಹಾಗೂ ಮಂಡನಪಾಳ್ಯ ಗ್ರಾಮದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಅಡಿಕೆ ತೋಟಗಳಿಗೆ ಭೇಟಿ ನೀಡಿದ ಅವರು, ನೀರಿನ ಕೊರತೆಯಿಂದ ಅಡಿಕೆ ಬೆಳೆ ಒಣಗುತ್ತಿರುವುದನ್ನು ಖುದ್ದಾಗಿ ವೀಕ್ಷಿಸಿದರು. ಫಲವತ್ತಾದ ಮಣ್ಣಿನಲ್ಲಿ ಉತ್ತಮವಾಗಿ ಬೆಳೆದಿದ್ದ ಬೆಳೆ ನೀರಿನ ಅಭಾವದಿಂದ ಹಾನಿಗೊಳಗಾಗುತ್ತಿರುವ ಕುರಿತು ರೈತರಿಂದ ಮಾಹಿತಿ ಪಡೆದರು.
ಬರದಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಬೆಳೆ ನಷ್ಟದ ಕುರಿತು ರೈತರೊಂದಿಗೆ ಚರ್ಚಿಸಿದ ಡಿಸಿಎಂ, ಅವರ ಅಹವಾಲುಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ರೈತರು ಬರ ಪರಿಹಾರ ಒದಗಿಸುವಂತೆ ಹಾಗೂ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ಕುಣಿಗಲ್ ತಾಲೂಕಿಗೆ ನೀರು ಹರಿಸುವಂತೆ ಮನವಿ ಮಾಡಿದರು.
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಸರ್ಕಾರ ಈಗಾಗಲೇ 1,000 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟು ಕಾಮಗಾರಿಗೆ ಅನುಮೋದನೆ ನೀಡಿದೆ. ಈ ಪೈಕಿ 450 ಕೋಟಿ ರೂಪಾಯಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದರು.
ಆದರೆ ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ಭಾಗದ ರೈತರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಕಾಮಗಾರಿ ಸಂಬಂಧ ಕೆಲವು ಸಮಸ್ಯೆಗಳು ಎದುರಾಗಿವೆ. ಈ ಸಮಸ್ಯೆಯನ್ನು ರೈತರೊಂದಿಗೆ ಮಾತುಕತೆ ನಡೆಸುವ ಮೂಲಕ ಬಗೆಹರಿಸಲಾಗುವುದು. ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಡಿಸಿಎಂ ರೈತರಿಗೆ ಭರವಸೆ ನೀಡಿದರು.
ಬರ ಪರಿಸ್ಥಿತಿಯಲ್ಲಿ ಕುಡಿಯುವ ನೀರು ಹಾಗೂ ಕೃಷಿಗೆ ಅಗತ್ಯವಾದ ನೀರಿನ ಲಭ್ಯತೆ ಖಚಿತಪಡಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.





