ಬೆಂಗಳೂರು: ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶದ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿರುವ ವಿಚಾರ ತಮ್ಮ ಗಮನಕ್ಕೆ ಬಂದಿದೆ. ರಾಜ್ಯದ ಜಲಾಶಯಗಳಿಗೆ ಸದ್ಯ ಎಷ್ಟು ಪ್ರಮಾಣದಲ್ಲಿ ಒಳಹರಿವು ಇದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.
ರೈತರನ್ನು ಕಾಪಾಡುವುದರ ಜೊತೆಗೆ ನ್ಯಾಯಾಲಯದ ಆದೇಶವನ್ನೂ ಪಾಲಿಸಬೇಕಾಗಿದೆ. ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೀರಾವರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.
ಈಗಾಗಲೇ ರಾಜ್ಯದ ಎಲ್ಲಾ ಜಲಾಶಯಗಳ ನೀರಿನ ಲಭ್ಯತೆ ಹಾಗೂ ಬೆಳೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ತೀರ್ಮಾನ ಕೈಗೊಳ್ಳುವಂತೆ ಸೂಚಿಸಲಾಗಿದೆ. ಕಾವೇರಿ ನದಿಗೆ ಮಾತ್ರ ಸೀಮಿತವಾಗಿ ನಿರ್ಧಾರ ಕೈಗೊಳ್ಳದೆ, ರಾಜ್ಯದ ಎಲ್ಲ ಪ್ರಮುಖ ಜಲಾಶಯಗಳಲ್ಲಿರುವ ನೀರಿನ ಪ್ರಮಾಣ, ಒಳಹರಿವು ಮತ್ತು ರೈತರ ಬೆಳೆಗಳಿಗೆ ಅಗತ್ಯವಿರುವ ನೀರನ್ನು ಪರಿಗಣಿಸಬೇಕು ಎಂದು ತಿಳಿಸಿದ್ದೇವೆ ಎಂದರು.
ರಾಜ್ಯದ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ ಡಿ.ಕೆ. ಶಿವಕುಮಾರ್, ಈ ವಿಚಾರದಲ್ಲಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದರು.
‘ನಾನು ಪಾರದರ್ಶಕವಾಗಿಯೇ ಇದ್ದೇನೆ. ಮಾಧ್ಯಮಗಳಲ್ಲಿ ಏನು ತೋರಿಸುತ್ತೀರಿ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾವು ನಿರ್ಧಾರ ಕೈಗೊಳ್ಳುವುದಿಲ್ಲ. ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ತಾಳ್ಮೆಯಿಂದ ಇರಬೇಕು’ ಎಂದರು.
ಜನರು ನೀಡಿರುವ ಅಧಿಕಾರದ ಉದ್ದೇಶವೇ ರೈತರ ಬದುಕನ್ನು ರಕ್ಷಿಸುವುದು. ಯಾವುದೇ ರೈತರಿಗೆ ತೊಂದರೆ ನೀಡುವುದು ಸರ್ಕಾರದ ಉದ್ದೇಶವಲ್ಲ. ಹೀಗಾಗಿ ಎಲ್ಲರೂ ತಾಳ್ಮೆಯಿಂದಿದ್ದು, ಸೌಹಾರ್ದಯುತವಾಗಿ ಪರಿಸ್ಥಿತಿಯನ್ನು ಎದುರಿಸಬೇಕು. ಪ್ರಕೃತಿ ನಮ್ಮನ್ನು ಕೈಹಿಡಿಯಲಿದೆ ಎಂದರು.
ಇದೇ ವೇಳೆ ತಮ್ಮ ಮುಂದಿನ ರಾಜಕೀಯ ಚಟುವಟಿಕೆಗಳ ಬಗ್ಗೆಯೂ ಮುಖ್ಯಮಂತ್ರಿ ಮಾಹಿತಿ ನೀಡಿದರು. ನಾಳೆ ಸಚಿವರು ಹಾಗೂ ಪಕ್ಷದ ಪ್ರಮುಖ ನಾಯಕರ ಸಭೆಯನ್ನು ಕರೆದಿದ್ದು, ಪಕ್ಷದ ಮುಂದಿನ ‘ಪ್ಲ್ಯಾನ್ ಆಫ್ ಆಕ್ಷನ್’ ಕುರಿತು ಚರ್ಚಿಸಲಾಗುವುದು ಎಂದರು.
ರಾಜಕೀಯವಾಗಿ ಎದುರಾಗಬಹುದಾದ ಬೆಳವಣಿಗೆಗಳು, ಅವುಗಳನ್ನು ಹೇಗೆ ನಿಭಾಯಿಸಬೇಕು ಹಾಗೂ ಪಕ್ಷದ ಮುಂದಿನ ಕಾರ್ಯತಂತ್ರ ಏನಾಗಿರಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಿ ಮಾರ್ಗದರ್ಶನ ನೀಡಲಾಗುವುದು. ನಾಳೆ ರಾಜಕೀಯ ಸಭೆ ನಡೆಯಲಿದ್ದು, ಅದರ ಮರುದಿನ ಸಚಿವ ಸಂಪುಟ ಸಭೆ ನಡೆಯಲಿದೆ. ಹೀಗಾಗಿ ಮುಂದಿನ ಎರಡು ದಿನಗಳು ಸರ್ಕಾರ ಹಾಗೂ ಪಕ್ಷದ ದೃಷ್ಟಿಯಿಂದ ಮಹತ್ವದ್ದಾಗಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.





