ವಿಜಯಪುರ: ವಿಜಯಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಖಾಸಗಿ ಕಾರ್ ಸರ್ವಿಸ್ ಸೆಂಟರ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನಾಶವಾಗಿದೆ. ನಗರದ ಹೊರವಲಯದಲ್ಲಿರುವ ಹೆಚ್‌ಎಂಕೆ (HMK) ಕಾರ್ ಸರ್ವಿಸ್ ಸೆಂಟರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಇಡೀ ಕಟ್ಟಡವನ್ನು ಆವರಿಸಿದೆ.
ಈ ಭೀಕರ ಬೆಂಕಿಗೆ ಕನಿಷ್ಠ 20ಕ್ಕೂ ಹೆಚ್ಚು ಕಾರುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಸುಮಾರು 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಾಹನಗಳು ನಾಶವಾಗಿವೆ. ಇದಲ್ಲದೆ, ಸರ್ವಿಸ್ ಸೆಂಟರ್‌ನಲ್ಲಿ ಸಂಗ್ರಹಿಸಿಟ್ಟಿದ್ದ 35 ಲಕ್ಷ ರೂ. ಮೌಲ್ಯದ ಬಿಡಿಭಾಗಗಳು, ಯಂತ್ರೋಪಕರಣಗಳು ಮತ್ತು ಇತರೆ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ.
ಘಟನೆಯ ಸಮಯದಲ್ಲಿ ಸರ್ವಿಸ್ ಸೆಂಟರ್‌ನಲ್ಲಿ ದುರಸ್ತಿ ಹಾಗೂ ಸರ್ವೀಸಿಂಗ್‌ಗಾಗಿ ಗ್ರಾಹಕರ ವಾಹನಗಳನ್ನು ನಿಲ್ಲಿಸಲಾಗಿತ್ತು. ಅಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಕ್ಷಣಕ್ಕೂ ವ್ಯಾಪಿಸುತ್ತಾ ಹೋಗಿ, ಇಡೀ ಶೆಡ್ ಅನ್ನು ಬೆಂಕಿ ಆವರಿಸಿತ್ತು.
ಸ್ಥಳೀಯರು ಬೆಂಕಿ ಕಾಣುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ವಿಜಯಪುರ ಅಗ್ನಿಶಾಮಕ ದಳದ ಸಿಬ್ಬಂದಿ ಹಲವು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಸತತ ಕಾರ್ಯಾಚರಣೆ ನಡೆಸಿದರು. ಗಂಟೆಗಳ ಕಾಲ ನಡೆದ ಶ್ರಮದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಘಟನೆಯ ವೇಳೆ ಸರ್ವಿಸ್ ಸೆಂಟರ್ ಒಳಗೆ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪೊಲೀಸರ ಪರಿಶೀಲನೆ, ಪ್ರಕರಣ ದಾಖಲು
ಮಾಹಿತಿ ದೊರೆಯುತ್ತಿದ್ದಂತೆಯೇ ಗೋಲಗುಂಬಜ್ ಠಾಣೆ ಮತ್ತು ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರ್ವಿಸ್ ಸೆಂಟರ್ ಮಾಲೀಕ ಹನಮಂತ ಕನಮಡಿ ಅವರಿಂದ ಮಾಹಿತಿ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆ.ಆರ್.ಪುರಂ ಎಲೆಕ್ಟ್ರಿಕ್ ಶೋರೂಮ್‌ಗೆ ಅಗ್ನಿ ಅವಘಡ: 13 ಎಲೆಕ್ಟ್ರಿಕ್ ಬೈಕ್‌ಗಳು ಸುಟ್ಟು ಭಸ್ಮ
ಬೆಂಗಳೂರು ನಗರದ ಕೆ.ಆರ್.ಪುರಂ ವ್ಯಾಪ್ತಿಯ ಟಿ.ಸಿ.ಪಾಳ್ಯ ಸಿಗ್ನಲ್ ಸಮೀಪದ ಒಂದು ಎಲೆಕ್ಟ್ರಿಕ್ ಬೈಕ್ ಶೋರೂಮ್‌ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಜನವರಿ 20ರ ರಾತ್ರಿ ಸುಮಾರು 10:30 ಗಂಟೆಯ ಸಮಯದಲ್ಲಿ ಶೋರೂಮ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಈ ಬೆಂಕಿಯಿಂದ ಅಲ್ಲಿ ನಿಲ್ಲಿಸಲಾಗಿದ್ದ 13 ಎಲೆಕ್ಟ್ರಿಕ್ ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಪ್ರಾಣಹಾನಿಯಾಗಿಲ್ಲ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಸ್ಥಳೀಯರಿಂದ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದವರು ಶ್ರಮಿಸಿದ್ದಾರೆ.
ಈ ಘಟನೆ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದಾರೆ. ಬೆಂಕಿಗೆ ಕಾರಣ ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿ ಸಂಬಂಧಿತ ಸಮಸ್ಯೆಗಳಿಂದ ಬೆಂಕಿ ಉಂಟಾಗುವ ಸಾಧ್ಯತೆಗಳ ಬಗ್ಗೆ ಇತ್ತೀಚಿಗೆ ಚರ್ಚೆಗಳು ನಡೆಯುತ್ತಿವೆ.
ಈ ಘಟನೆಯಿಂದ ಶೋರೂಮ್ ಮಾಲೀಕರಿಗೆ ಭಾರಿ ಆರ್ಥಿಕ ನಷ್ಟವಾಗಿದೆ. ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ.





