ಸ್ಯಾಂಡಲ್ವುಡ್ನ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಅವರ ಮದುವೆ ಸಂಭ್ರಮ ಕಳೆಗಟ್ಟಿದೆ. ನಟ ಚಿಕ್ಕಣ್ಣ ಮತ್ತು ಪಾವನಾ ಅವರ ಆರತಕ್ಷತೆ ಕಾರ್ಯಕ್ರಮ ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದು, ಕನ್ನಡ ಚಿತ್ರರಂಗದ ಹಲವು ಗಣ್ಯರು, ತಂತ್ರಜ್ಞರು, ಕುಟುಂಬಸ್ಥರು ಹಾಗೂ ಆಪ್ತರು ನವಜೋಡಿಗೆ ಶುಭ ಹಾರೈಸಿದ್ದಾರೆ.
ಆರತಕ್ಷತೆ ಸಮಾರಂಭದಲ್ಲಿ ಚಿಕ್ಕಣ್ಣ ಹಾಗೂ ಪಾವನಾ ಜೋಡಿ ವಿಶೇಷವಾಗಿ ಗಮನ ಸೆಳೆದಿದೆ. ಅದ್ಧೂರಿ ಸೂಟ್ನಲ್ಲಿ ಮಿಂಚಿದ ಚಿಕ್ಕಣ್ಣ, ತಮ್ಮ ವಿವಾಹದ ಸಂಭ್ರಮವನ್ನು ಕುಟುಂಬಸ್ಥರು ಮತ್ತು ಆತ್ಮೀಯರೊಂದಿಗೆ ಖುಷಿಯಿಂದ ಹಂಚಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಚಿತ್ರರಂಗದ ಗಣ್ಯರು ನವಜೋಡಿಗೆ ಶುಭಾಶಯ ಕೋರುತ್ತಿದ್ದು, ಆರತಕ್ಷತೆಯ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿವೆ.
ನಾಳೆ ಹಸೆಮಣೆ ಏರಲಿರುವ ಚಿಕ್ಕಣ್ಣ
ನಾಳೆ ಆಗಸ್ಟ್ 30ರಂದು ಧಾರಾ ಮುಹೂರ್ತದೊಂದಿಗೆ ಚಿಕ್ಕಣ್ಣ–ಪಾವನಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ಸಂಭ್ರಮದ ಭಾಗವಾಗಿ ಈಗಾಗಲೇ ಮೆಹಂದಿ ಹಾಗೂ ಅರಿಶಿಣ ಶಾಸ್ತ್ರಗಳು ನೆರವೇರಿವೆ. ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮಗಳಲ್ಲಿ ಚಿಕ್ಕಣ್ಣ ಮತ್ತು ಪಾವನಾ ಗೌಡ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಇಂದು ಶನಿವಾರ ನಡೆದ ಆರತಕ್ಷತೆಗೆ ಸ್ಯಾಂಡಲ್ವುಡ್ನ ಹಲವು ಕಲಾವಿದರು ಹಾಗೂ ಗಣ್ಯ ಅತಿಥಿಗಳು ಆಗಮಿಸಿ ನವಜೋಡಿಗೆ ಶುಭಾಶಯ ಕೋರಿದ್ದಾರೆ. ನಿರ್ಮಾಪಕ ಸಂದೇಶ್, ಹಿರಿಯ ನಟ ರಂಗಾಯಣ ರಘು ಸೇರಿದಂತೆ ಚಿತ್ರರಂಗದ ಗಣ್ಯರು ಚಿಕ್ಕಣ್ಣ ಅವರ ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ.
ಮೈಸೂರು ಮೂಲದ ಪಾವನಾ ಗೌಡ
ಚಿಕ್ಕಣ್ಣ ಅವರು ಮೈಸೂರು ಮೂಲದ ಪಾವನಾ ಗೌಡ ಅವರನ್ನು ವಿವಾಹವಾಗುತ್ತಿದ್ದಾರೆ. ಹಿರಿಯರು ನಿಶ್ಚಯಿಸಿರುವ ಈ ವಿವಾಹವನ್ನು ಚಿಕ್ಕಣ್ಣ ಈ ಹಿಂದೆ ‘ಅರೇಂಜ್ ಕಮ್ ಲವ್ ಮ್ಯಾರೇಜ್’ ಎಂದು ಹೇಳಿಕೊಂಡಿದ್ದರು.
ಪಾವನಾ ಗೌಡ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಪರಿಸರ ಸ್ನೇಹಿ ಉದ್ಯಮವನ್ನೂ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸರಳವಾಗಿ ಆರಂಭವಾದ ಈ ಸಂಬಂಧ ಇದೀಗ ಅದ್ಧೂರಿ ವಿವಾಹದ ಸಂಭ್ರಮವಾಗಿ ಮಾರ್ಪಟ್ಟಿದೆ.
ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ಚಿತ್ರರಂಗದಲ್ಲಿ ಹಾಸ್ಯನಟನಾಗಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಚಿಕ್ಕಣ್ಣ, ಹಲವು ವರ್ಷಗಳಿಂದ ವಿಭಿನ್ನ ಹಾಸ್ಯ ಶೈಲಿಯ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದಿದ್ದಾರೆ. ಅವರ ಮದುವೆ ಸುದ್ದಿ ಹೊರಬಂದಾಗಿನಿಂದಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಇದೀಗ ಮೈಸೂರಿನಲ್ಲಿ ನಡೆಯುತ್ತಿರುವ ಆರತಕ್ಷತೆಯ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿದ್ದು, ಚಿಕ್ಕಣ್ಣ–ಪಾವನಾ ಜೋಡಿಯ ವಿವಾಹ ಸಂಭ್ರಮಕ್ಕೆ ಅಭಿಮಾನಿಗಳು ಸಾಕ್ಷಿಯಾಗುತ್ತಿದ್ದಾರೆ. ಆಗಸ್ಟ್ 30ರಂದು ನಡೆಯಲಿರುವ ವಿವಾಹದತ್ತ ಇದೀಗ ಇಡೀ ಸ್ಯಾಂಡಲ್ವುಡ್ನ ಚಿತ್ತ ನೆಟ್ಟಿದೆ.





