ಬೆಂಗಳೂರಿನಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಬೆಂಗಳೂರಿನ ಮೈಸೂರು ರಸ್ತೆಯ ಶಿರ್ಸಿ ಸರ್ಕಲ್ ಬಳಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಸದ ಲಾರಿ ಹರಿದು 35 ವರ್ಷದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ತಮಿಳುನಾಡಿನ ರಿಜಿಸ್ಟರ್ ಹೊಂದಿರೋ ಬೈಕಿನಲ್ಲಿ ವ್ಯಕ್ತಿಯೊಬ್ಬ ತೆರಳುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಜಿಬಿಎ ಕಸದ ಲಾರಿ ಆತನ ಮೇಲೆ ಹರಿದಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಿರ್ಲಕ್ಷ್ಯದ ಚಾಲನೆಯೇ ಈ ಭೀಕರ ಅಪಘಾತಕ್ಕೆ ಕಾರಣವಾಗಿದ್ದು, ಅಪಘಾತದಿಂದಾಗಿ ಶಿರ್ಸಿ ಸರ್ಕಲ್ ಮತ್ತು ಸುತ್ತಮುತ್ತಲಿನ ಮಾರ್ಗಗಳಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಈ ಘಟನೆಯ ಸಂಬಂಧ ಚಾಮರಾಜಪೇಟೆ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯ ಗುರುತು ಪತ್ತೆಗಾಗಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಬಿಬಿಎಂಪಿ ಕಸದ ಲಾರಿಗಳು ಮತ್ತು ಟಿಪ್ಪರ್‌ಗಳಿಂದ ಇಂತಹ ಮಾರಣಾಂತಿಕ ಅಪಘಾತಗಳು ಪದೇ ಪದೇ ಸಂಭವಿಸುತ್ತಿದ್ದು, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಲಾರಿಗಳ ಅತಿಯಾದ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದ್ವಿಚಕ್ರ ಸವಾರರು ಭಾರೀ ವಾಹನಗಳ ಹಿಂದೆ ಅಥವಾ ಮುಂದೆ ಪ್ರಯಾಣಿಸುವಾಗ ಅತೀ ಜಾಗರೂಕತೆಯಿಂದ ಪ್ರಯಾಣಿಸುವುದರಿಂದ ಇಂತಹ ಘಟನೆಗಳನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದು.





