ಬೆಂಗಳೂರು: ಸಿಲಿಕಾನ್ ಸಿಟಿಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹೆಮ್ಮೆಯಾದ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಈಗ ಕ್ಷಣಗಣನೆ ಆರಂಭವಾಗಿದೆ. ಇಂದಿನ ಚೈತ್ರ ಪೂರ್ಣಿಮೆಯ ಪವಿತ್ರ ದಿನದಂದು ತಡರಾತ್ರಿ 12 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯದಿಂದ ಕರಗ ಹೊರಡಲಿದ್ದು, ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಕಾತುರದಿಂದ ಕಾಯುತ್ತಿದೆ.
ಸಕಲ ಸಿದ್ಧತೆ: 15 ಲಕ್ಷ ಭಕ್ತರ ನಿರೀಕ್ಷೆ
ಬೆಂಗಳೂರು ನಗರ ಜಿಲ್ಲಾಡಳಿತ, ಮುಜರಾಯಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಕರಗ ಉತ್ಸವ ಸಮಿತಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಬಾರಿ ಸುಮಾರು 15 ಲಕ್ಷಕ್ಕೂ ಹೆಚ್ಚು ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸೇರಿದಂತೆ ಹಲವು ರಾಜಕೀಯ ಗಣ್ಯರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಮಾರ್ಚ್ 24ರಿಂದಲೇ ಆರಂಭವಾಗಿರುವ ಕರಗ ಉತ್ಸವದ ಹೈಲೈಟ್ ಎಂದರೆ ಇಂದಿನ ಹೂವಿನ ಕರಗ. ಮಲ್ಲಿಗೆ ಹೂವಿನಿಂದ ಸರ್ವಾಲಂಕೃತಗೊಂಡ ಕರಗವನ್ನು ಈ ಬಾರಿಯೂ ಪೂಜಾರಿ ಜ್ಞಾನೇಂದ್ರ ಅವರು ಹೊರುತ್ತಿದ್ದಾರೆ. ಇದು ಅವರು ಕರಗ ಹೊರುತ್ತಿರುವ ಸತತ 16ನೇ ವರ್ಷ ಎಂಬುದು ವಿಶೇಷ. ಸಾಂಪ್ರದಾಯಿಕ ಕಂಕಣ ಧಾರಣೆ ಮಾಡಿ, ವ್ರತ ಪಾಲಿಸಿರುವ ಅವರು ತಾಯಿ ದ್ರೌಪದಮ್ಮನ ಶಕ್ತಿಯನ್ನು ಹೊತ್ತು ನಗರ ಸಂಚಾರ ಮಾಡಲಿದ್ದಾರೆ.
ಇಂದು ಸಂಜೆ ಕಬ್ಬನ್ ಪಾರ್ಕ್‌ನಲ್ಲಿರುವ ಕರಗದ ಕುಂಟೆಯಲ್ಲಿ ವಿಶೇಷ ಪೂಜೆ ನಡೆಯಲಿದೆ. ಅಲ್ಲಿಂದ ದೇವಸ್ಥಾನಕ್ಕೆ ಮರಳಿದ ನಂತರ ಭಕ್ತರಿಂದ ಕರ್ಪೂರ ಸೇವೆ ನಡೆಯಲಿದೆ. ಸಾವಿರಾರು ಕೆ.ಜಿ. ಕರ್ಪೂರವನ್ನು ಹಚ್ಚಿ ಪೂಜೆ ಮಾಡಲಾಗುತ್ತದೆ. ತದನಂತರ ತಾಯಿಯ ಆಹ್ವಾನ ಮತ್ತು ಬಳೆ ಶಾಸ್ತ್ರದಂತಹ ಪೂಜಾ ಕೈಂಕರ್ಯಗಳು ನೆರವೇರಲಿವೆ. ತಡರಾತ್ರಿ 12ರ ಸುಮಾರಿಗೆ ಹೂವಿನ ಕರಗವು ದೇವಸ್ಥಾನದಿಂದ ಹೊರಬಂದು ಭಕ್ತರಿಗೆ ದರ್ಶನ ನೀಡಲಿದೆ.
ನಗರದ 26 ದೇವಾಲಯಗಳಿಗೆ ಭೇಟಿ
ಕರಗವು ಕಬ್ಬನ್ ಪೇಟೆಯ ಗಲ್ಲಿಗಳು, ರಾಜಾ ಮಾರ್ಕೆಟ್, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಕಾಟನ್ ಪೇಟೆ, ಬಳೇ ಪೇಟೆ ಸರ್ಕಲ್, ಅಣ್ಣಮ್ಮ ದೇವಸ್ಥಾನ ಸೇರಿದಂತೆ ಸುಮಾರು 26 ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಲಿದೆ. ವಿಶೇಷವಾಗಿ ಸೌಹಾರ್ದತೆಯ ಸಂಕೇತವಾಗಿ ಮಸ್ತಾನ್ ಸಾಬ್ ದರ್ಗಾಕ್ಕೂ ಕರಗ ಭೇಟಿ ನೀಡುವುದು ಈ ಉತ್ಸವದ ಪರಂಪರೆ. ಬೆಳಗಿನ ಜಾವದ ವೇಳೆಗೆ ಕರಗವು ಪುನಃ ಧರ್ಮರಾಯಸ್ವಾಮಿ ದೇವಾಲಯವನ್ನು ತಲುಪುವುದರೊಂದಿಗೆ ಈ ವರ್ಷದ ಶಕ್ತ್ಯೋತ್ಸವ ಸಂಪನ್ನಗೊಳ್ಳಲಿದೆ. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.





