ಬೆಂಗಳೂರು: ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಹೋಟೆಲ್ ಸಪ್ಲೈಯರ್‌ನ ಬ್ಯಾಗ್‌ನಲ್ಲಿ ಸ್ಫೋಟಕ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ದು, ನಗರದಲ್ಲಿ ಭಾರೀ ಆತಂಕ ಉಂಟುಮಾಡಿದೆ. ಆಘಾತಕ್ಕೊಳಗಾದ ಹೋಟೆಲ್ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಸಂಪಿಗೆಹಳ್ಳಿ ಠಾಣೆ ಪೊಲೀಸರು, ಘಟನೆ ಸಂಬಂಧ ತನಿಖೆಯನ್ನು ಆರಂಭಿಸಿದ್ದಾರೆ.
ಈ ಘಟನೆಯು ಬೆಂಗಳೂರಿನ ಸಂಪಿಗೆಹಳ್ಳಿ ಬಳಿಯ ಬೆಳ್ಳಳ್ಳಿಯಲ್ಲಿ ನಡೆದಿದ್ದು, ಅಬ್ದುಲ್ ರೆಹಮಾನ್ ಎನ್ನುವ ವ್ಯಕ್ತಿಯ ಬ್ಯಾಗ್‌ನಲ್ಲಿ ಸ್ಫೋಟಕ ಗ್ರೆನೇಡ್ ಪತ್ತೆಯಾಗಿದೆ. ವೈಭವ್ ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ರೆಹಮಾನ್‌ನಿಂದ ಆಧಾರ್ ಕಾರ್ಡ್ ಕೇಳಿದಾಗ, ಅವನು ನೀಡದೆ ಎರಡು ದಿನಗಳ ಕಾಲ ವಿಳಂಬ ಮಾಡಿದ್ದನು. ಇದರಿಂದ ಆತಂಕಗೊಂಡ ಹೋಟೆಲ್ ಸಿಬ್ಬಂದಿ ಶೆಡ್‌ನಲ್ಲಿ ಇಟ್ಟಿದ್ದ ರೆಹಮಾನ್‌ನ ಬ್ಯಾಗ್ ಪರಿಶೀಲಿಸಿದಾಗ ಈ ಸ್ಫೋಟಕ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ.
ಹ್ಯಾಂಡ್ ಗ್ರೆನೇಡ್ ಪತ್ತೆಯಾದ ಬೆನ್ನಲ್ಲೇ ಹೋಟೆಲ್ ಸಿಬ್ಬಂದಿ ಸಂಪಿಗೆಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ರೆಹಮಾನ್‌ನ ಬ್ಯಾಗ್ ಪರಿಶೀಲಿಸಿ ಸ್ಫೋಟಕವನ್ನು ವಶಪಡಿಸಿಕೊಂಡರು. ನಂತರ ರೆಹಮಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ, ‘ಬಾಂಬ್ ಮಾದರಿಯ ವಸ್ತು ನನಗೆ ರಸ್ತೆಯಲ್ಲಿ ಸಿಕ್ಕಿತು’ ಎಂದು ರೆಹಮಾನ್ ಹೇಳಿದ್ದಾನೆ.
ಸಂಪಿಗೆಹಳ್ಳಿ ಪೊಲೀಸರು ರೆಹಮಾನ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ಸ್ಫೋಟಕ ಗ್ರೆನೇಡ್ ಅವರ ಬಳಿ ಹೇಗೆ ಬಂದಿದೆ? ಇದರ ಹಿಂದಿರುವ ಉದ್ದೇಶ ಏನು? ಇದರಿಂದ ಯಾವುದೇ ಅಪಾಯ ಉಂಟಾಗಬಹುದೇ ಎಂಬ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಪೂರ್ವ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಟನ್ನಿಸ್ ಬಾಲ್ ಮಾದರಿಯ ವಸ್ತುವಿನಲ್ಲಿ ರಾಸಾಯನಿಕವನ್ನು ತುಂಬಲಾಗಿತ್ತು. ಅದರ ಮೇಲೆ ಎರಡು ಬತ್ತಿಗಳನ್ನು ಜೋಡಿಸಲಾಗಿತ್ತು. ನಾವು ಸುರಕ್ಷಿತ ಸ್ಥಳದಲ್ಲಿ ಅದನ್ನು ಡಿಸ್ಪೋಸ್ ಮಾಡಿ, ಘಟನೆಯ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದೇವೆ,’ ಎಂದು ತಿಳಿಸಿದ್ದಾರೆ.





