ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಮೂರು ಸಾವಿರ ಮಠದ ಸಭಾಭವನದಲ್ಲಿ ಹುಬ್ಬಳ್ಳಿ ಫೋಟೋ ಹಾಗೂ ವಿಡಿಯೋಗ್ರಾಫರ್ ಸಂಘದ ವತಿಯಿಂದ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಛಾಯಾಗ್ರಹಣ ಕ್ಷೇತ್ರಕ್ಕೆ ಹಲವು ವರ್ಷಗಳಿಂದ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಆರು ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅತಿಥಿಗಳಾದ ಡಾ. VSV ಪ್ರಸಾದ್ ಅವರು ಮಾತನಾಡಿ “ಕಳೆದ ದಶಕಗಳಿಂದ ಈ ಸಂಘ ಛಾಯಾ ಕ್ಷೇತ್ರದ ಜೊತೆಗೆ ಕ್ರೀಡೆ ಹಾಗೂ ವಿವಿಧ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು ಅದಕ್ಕೆ ನನ್ನ ಸದಾ ಸಹಕಾರ ಇರುವುದಾಗಿ ತಿಳಿಸಿದರು” ಮತ್ತೆ ಮಾತನಾಡುತ್ತಾ ಅವರು ಮುಂದಿನ ದಿನಗಳಲ್ಲಿ ಸಂಘದ ವಿವಿಧ ಯೋಜನೆಗಳಿಗೆ ಪ್ರಾಯೋಜಕತ್ವ ನೀಡುವುದಾಗಿ ಭರವಸೆ ನೀಡಿ ಸಂಘಕ್ಕೆ ಸದಾ ಬೆಂಬಲ ಹಾಗೂ ಉತ್ತೇಜನ ಕೊಡುವುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ್ ತೆಂಗಿನಕಾಯಿ ಅವರು ಮಾತನಾಡಿ “ಛಾಯಾಗ್ರಹಣ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅವ್ಯಾಹತವಾಗಿ ಆಗಿರುವ ತಾಂತ್ರಿಕ ಬೆಳವಣಿಗೆಗಳು ಹಾಗೂ ಕ್ಯಾಮೆರಾ ಬದಲಾವಣೆಗಳು ಬಡ ಛಾಯಾಗ್ರಾಹಕರು ಹೊಂದಿಕೊಳ್ಳಲು ಬಹಳ ಕಷ್ಟವಾಗುತ್ತಿದೆ” ಎಂದುಅತ್ಯಂತ ಅರ್ಥಪೂರ್ಣವಾಗಿ ಮಾತನಾಡಿದರು. ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ತಮ್ಮಿಂದ ಸಾಧ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವೇದಿಕೆ ಮೇಲೆ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಇಂದುಧರ ಸಾಲಿ, ಗೌರವಾಧ್ಯಕ್ಷರಾದ ಕಿರಣ್ ಬಾಕಳೆ, ಸಂಘದ ಅಧ್ಯಕ್ಷರಾದ ದಿನೇಶ್ ದಾಬಡೆ, ರವೀಂದ್ರ ಕಾಟಿಗರ, ಅನಿಲ ತುರಮರಿ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ರಮ್ಯಾ ಹಾಗೂ ವೈಷ್ಣವಿ ಪ್ರತಿಭಾವಂತ ಬಾಲಕಿಯರ ಸುಂದರ ಭರತ ನಾಟ್ಯ ನೃತ್ಯ ಪ್ರದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಸಂಘದ ಸದಸ್ಯ ತಂಡದವರು ಪ್ರಸ್ತುತಪಡಿಸಿದ ಹಳೆಯ ಬಾಲಿವುಡ್ ಸುಮಧುರ ಗೀತೆಗಳು ಛಾಯಾಗ್ರಾಹಕರನ್ನು ರಂಜಿಸಿ, ಕಾರ್ಯಕ್ರಮಕ್ಕೆ ಮತ್ತಷ್ಟು ಉಲ್ಲಾಸ ತುಂಬಿದವು.
ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಛಾಯಾಗ್ರಹಣ ಕ್ಷೇತ್ರಕ್ಕೆ ದೀರ್ಘಕಾಲದಿಂದ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿರುವ ಆರು ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಅವರ ಸೇವೆಯನ್ನು ಗೌರವಿಸುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.
ರಾಕೇಶ ಪವಾರ ಹಾಗೂ ಅನುಜ್ ಪಾಠಕ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಛಾಯಾಗ್ರಾಹಕ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದಿದ್ದು, ಇಡೀ ಸಮಾರಂಭವು ಆತ್ಮೀಯತೆ, ಉತ್ಸಾಹ ಮತ್ತು ಸಂತೋಷದಿಂದ ಕೂಡಿತ್ತು. ಕೊನೆಯಲ್ಲಿ ರುಚಿಕರವಾದ ಭೋಜನದೊಂದಿಗೆ ಕಾರ್ಯಕ್ರಮ ಸುಂದರವಾಗಿ ಸಮಾಪ್ತಿಗೊಂಡಿತು.





