ಕಠ್ಮಂಡು ಆ.27: ನೇಪಾಳದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ರಸುವಾ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರ ರಕ್ಷಣೆ ಹಾಗೂ ಪರಿಹಾರ ಸಾಮಗ್ರಿಗಳ ಪೂರೈಕೆಗಾಗಿ ಕಠ್ಮಂಡುವಿನಿಂದ 40ಕ್ಕೂ ಹೆಚ್ಚು ಖಾಸಗಿ ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದೆ ಎಂದು ವರದಿಗಳು ತಿಳಿಸಿದೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ತೀವ್ರಗೊಂಡಿದ್ದು, ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಗುರುವಾರ 40ಕ್ಕೂ ಹೆಚ್ಚು ಖಾಸಗಿ ಹೆಲಿಕಾಪ್ಟರ್‌ಗಳು ಪರಿಹಾರ ಸಾಮಗ್ರಿಗಳನ್ನು ಹೊತ್ತು ರಸುವಾ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳತ್ತ ತೆರಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ 2 ಗಂಟೆಯ ವೇಳೆಗೆ 40ಕ್ಕೂ ಹೆಚ್ಚು ಖಾಸಗಿ ಹೆಲಿಕಾಪ್ಟರ್‌ಗಳ ಚಾರ್ಟರ್ ಹಾರಾಟಗಳು ಪೂರ್ಣಗೊಂಡಿದ್ದವು. ಇನ್ನೂ 20ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಗೆ ಸಿದ್ಧವಾಗಿದ್ದವು ಎಂದು ವರದಿಯಾಗಿದೆ. ಪ್ರವಾಹದಿಂದ ರಸ್ತೆಗಳು ಹಾಗೂ ಸಂಪರ್ಕ ವ್ಯವಸ್ಥೆಗಳು ತೀವ್ರವಾಗಿ ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೂ ಮಾರ್ಗದ ಮೂಲಕ ನೆರವು ತಲುಪಿಸುವುದು ಕಷ್ಟಕರವಾಗಿದೆ ಎಂದು ವರದಿಯಾಗಿದೆ.
ಇದರ ನಡುವೆ ನೇಪಾಳ ಸೇನೆಯ ಹೆಲಿಕಾಪ್ಟರ್‌ಗಳು ಕೂಡ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಜತೆಗೆ, ಆಹಾರ, ಔಷಧ, ಕುಡಿಯುವ ನೀರು ಸೇರಿದಂತೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ಪೀಡಿತ ಪ್ರದೇಶಗಳಿಗೆ ತಲುಪಿಸಲಾಗುತ್ತಿದೆ.
ಸಾವಿನ ಸಂಖ್ಯೆ 270ಕ್ಕೆ ಏರಿಕೆ
ನೇಪಾಳದ ಮೂರು ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹದಿಂದ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಇದುವರೆಗೆ 93 ಮೃತದೇಹಗಳು ಪತ್ತೆಯಾಗಿದ್ದು, ಪ್ರವಾಹದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 270ಕ್ಕೆ ಏರಿಕೆಯಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
ಹಲವು ಪ್ರಮುಖ ರಸ್ತೆಗಳು ಮತ್ತು ಸಂಪರ್ಕ ಮಾರ್ಗಗಳು ಹಾನಿಗೊಳಗಾಗಿರುವುದರಿಂದ ರಕ್ಷಣಾ ತಂಡಗಳಿಗೆ ಆ ಪ್ರಮಖ ಸ್ಥಳಗಳಿಗೆ ತಲುಪುವುದು ಸವಾಲಾಗಿ ಪರಿಣಮಿಸಿದೆ. ಹೀಗಾಗಿ ವಾಯುಮಾರ್ಗದ ಮೂಲಕವೇ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಸೇನೆಯಿಂದ ಕಾರ್ಯಾಚರಣೆ ನಿರ್ವಹಣೆ
ಖಾಸಗಿ ಹೆಲಿಕಾಪ್ಟರ್‌ಗಳ ಕಾರ್ಯಾಚರಣೆಯನ್ನು ನೇಪಾಳ ಸೇನೆ ಸಂಘಟಿಸಿ ನಿರ್ವಹಿಸುತ್ತಿದೆ. ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿರುವ 14ನೇ ಬೆಟಾಲಿಯನ್, ಸಂಗ್ರಹಣಾ ಕೇಂದ್ರದಿಂದ ಹೆಲಿಕಾಪ್ಟರ್‌ಗಳಿಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವವರ ರಕ್ಷಣೆಗೆ ಸೇನೆ ಹಾಗೂ ವಿವಿಧ ರಕ್ಷಣಾ ತಂಡಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ಪರಿಹಾರ ಕಾರ್ಯಗಳನ್ನು ತೀವ್ರಗೊಳಿಸಲಾಗಿದೆ.





