ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ ಕೆಲವು ದಿನಗಳಿಂದ ಉರಿಯುತ್ತಿದ್ದ ಬಿಸಿಲ ಬೇಗೆಗೆ ನಗರವಾಸಿಗಳು ಬೇಸತ್ತಿದ್ದರು. ಆದರೆ ಇಂದು ಸುರಿದ ಜೋರು ಮಳೆ ತಂಪೆರೆದಿದೆ. ನಗರದ ಹಲವು ಪ್ರದೇಶಗಳಲ್ಲಿ ಜೋರು ಮಳೆ ಸುರಿದಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಯಿತು.
ನಗರದ ಪ್ರಮುಖ ಭಾಗಗಳಾದ ಕೆ ಆರ್ ಸರ್ಕಲ್, ಮೆಜೆಸ್ಟಿಕ್, ವಸಂತನಗರ, ಗಾಂಧಿನಗರ, ಮಲ್ಲೇಶ್ವರಂ, ಮತ್ತಿಕೆರೆ ಮತ್ತು ಯಶವಂತಪುರ ಸುತ್ತಮುತ್ತಲಿನ ಪ್ರದೇಶಗಳಿಗೆ ಭಾರೀ ಮಳೆಯಾಗಿದೆ. ಕೇವಲ ಅರ್ಧ ಗಂಟೆಯಲ್ಲಿ ಸುರಿದ ನೀರಿಗೆ ರಸ್ತೆಗಳೆಲ್ಲ ಕೆರೆಗಳಂತಾದವು. ಮಳೆ ನೀರು ರಸ್ತೆಗಳ ಮೇಲೆ ತುಂಬಿ ಹರಿದು ಹಲವೆಡೆ ಜಲಾವೃತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಮನೆಗೆ ತೆರಳುತ್ತಿದ್ದವರು ದೀರ್ಘ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರು.
ಇನ್ನೊಂದೆಡೆ, ಗಾಳಿ-ಮಳೆಯ ಅಬ್ಬರಕ್ಕೆ ಕೆಲವು ಮರಗಳ ಕೊಂಬೆಗಳು ಧರೆಗುರುಳಿದಿವೆ. ಶೇಷಾದ್ರಿಪುರಂ ಪ್ರದೇಶದಲ್ಲಿ ಒಂದು ದೊಡ್ಡ ಮರದ ರೆಂಬೆ ರಸ್ತೆಗೆ ಬಿದ್ದಿದ್ದು, ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸ್ಥಳೀಯರು ಮತ್ತು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ರೆಂಬೆಯನ್ನು ತೆರವುಗೊಳಿಸಲು ಮುಂದಾದರು. ಈ ಘಟನೆ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಏಪ್ರಿಲ್ 1ರವರೆಗೆ ರಾಜ್ಯದಾದ್ಯಂತ ಆಲಿಕಲ್ಲು ಮಳೆ: 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ !
ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಬೇಕಿತ್ತು, ಆದರೆ ಪ್ರಕೃತಿಯ ಆಟವೇ ಬೇರೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ದಿಢೀರ್ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದಾದ್ಯಂತ ಹವಾಮಾನದಲ್ಲಿ ಭಾರಿ ಏರುಪೇರು ಕಂಡುಬರುತ್ತಿದೆ. ಮುಂದಿನ ಮೂರು ದಿನಗಳ ಕಾಲ ಅಂದರೆ ಏಪ್ರಿಲ್ 1ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಆಲಿಕಲ್ಲು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯ ಪ್ರಭಾವದಿಂದಾಗಿ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿದ್ದು, ಆಲಿಕಲ್ಲು ಮಳೆಯ ಮುನ್ಸೂಚನೆ ನೀಡಲಾಗಿದೆ. ಪ್ರಮುಖವಾಗಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಏಪ್ರಿಲ್ 1ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈ ಭಾಗದ ರೈತರು ತಮ್ಮ ಬೆಳೆಗಳ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಲಾಗಿದೆ.
ಆರೆಂಜ್ ಅಲರ್ಟ್ ಘೋಷಣೆ
ಉತ್ತರ ಕರ್ನಾಟಕ ಮತ್ತು ಮಲೆನಾಡಿನ ಕೆಲವು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚಿನ ಅಬ್ಬರ ಜೋರಿರಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಈ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಗುಡುಗು ಸಂಭವಿಸುವಾಗ ಮರದ ಕೆಳಗೆ ಅಥವಾ ತೆರೆದ ಪ್ರದೇಶಗಳಲ್ಲಿ ಇರದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಹದವಾದ ಹವಾಮಾನ ಇರಲಿದ್ದು, ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ. ಆದರೆ ಉತ್ತರ ಕರ್ನಾಟಕದ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿರಲಿದೆ. ಇಲ್ಲಿ ಗರಿಷ್ಠ ತಾಪಮಾನವು 38 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಪ್ರಮುಖ ನಗರಗಳ ಇಂದಿನ ತಾಪಮಾನ ವಿವರ (ಡಿಗ್ರಿ ಸೆಲ್ಸಿಯಸ್‌ನಲ್ಲಿ)
| ನಗರ | ಗರಿಷ್ಠ – ಕನಿಷ್ಠ | ನಗರ | ಗರಿಷ್ಠ – ಕನಿಷ್ಠ |
| ಬೆಂಗಳೂರು | 33-22 | ಮಂಗಳೂರು | 32-26 |
| ಶಿವಮೊಗ್ಗ | 34-22 | ಬೆಳಗಾವಿ | 34-21 |
| ಮೈಸೂರು | 34-22 | ಮಂಡ್ಯ | 34-23 |
| ಮಡಿಕೇರಿ | 29-20 | ರಾಮನಗರ | 34-22 |
| ಹುಬ್ಬಳ್ಳಿ | 36-23 | ಬಳ್ಳಾರಿ | 37-26 |
| ರಾಯಚೂರು | 38-27 | ಕಲಬುರಗಿ | 37-27 |
| ಉಡುಪಿ | 32-26 | ಚಿಕ್ಕಮಗಳೂರು | 29-20 |





